ನನಗೂ ಮೀಟೂ ಅನುಭವ ಆಗಿದೆ

ತುಮಕೂರು: ಮೀಟೂ ಅನುಭವ ನನಗೂ ಆಗಿದೆ. ಆತ್ಮಚರಿತ್ರೆ ‘ಕಣ್ಣಾಮುಚ್ಚೆ ಕಾಡೆ ಗೂಡೆ’ ಪುಸ್ತಕದಲ್ಲಿ ಆ ನೋವು ಪ್ರಸ್ತಾಪಿಸಿದ್ದೇನೆ ಎಂದು ರಾಜ್ಯಸಭೆ ಮಾಜಿ ಸದಸ್ಯೆ, ಹಿರಿಯ ನಟಿ ಬಿ. ಜಯಶ್ರೀ ಹೇಳಿದ್ದಾರೆ.

ನಗರದ ಶ್ರೀರಾಜರಾಜೇಶ್ವರಿ ನೃತ್ಯ ಕಲಾಮಂದಿರದಲ್ಲಿ ಶುಕ್ರವಾರ ಕಾರ್ಯಕ್ರಮವೊಂದರಲ್ಲಿ ಭಾಗ ವಹಿಸಿದ ಬಳಿಕ ಸುದ್ದಿಗಾರರ ಜತೆೆ ಮಾತನಾಡಿದ ಅವರು, ಮೀಟೂ ಅನುಭವ ನನಗೂ ಆಗಿದೆ. ಅದು ತೀರಾ ವೈಯಕ್ತಿಕ. ಅದನ್ನು ಯಾಕೆ ಹೇಳಿಕೊಳ್ಳಬೇಕು? ಏನಾದರೂ ಆಗಿದ್ದರೆ ಇಬ್ಬರಿಗಷ್ಟೇ ಗೊತ್ತಿರುತ್ತದೆ. ಮಗುವಿಗೆ ಜನ್ಮ ನೀಡುವ ತಾಯಿಗಷ್ಟೇ ತಂದೆ ಯಾರು ಎಂದು ಗೊತ್ತಿರುತ್ತದೆ, ಹೊರತು ತಂದೆಗೆ ಗೊತ್ತಿರುವುದಿಲ್ಲ. ಈ ನೋವನ್ನು ಹೇಳಿದರೆ ಸಮಾಜ ನಂಬುವುದಿಲ್ಲ ಎಂದು ಬೇಸರಿಸಿದರು. ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ವ್ಯಕ್ತಪಡಿಸುವ ಮುನ್ನ ಪ್ರತಿಯೊಬ್ಬರೂ ಭಾವನೆಗೆ ತಕ್ಕಂತೆ ಲಕ್ಷ್ಮಣರೇಖೆ ಹಾಕಿಕೊಳ್ಳುವುದು ಅವರಿಗೆ ಬಿಟ್ಟದ್ದು ಎಂದರು.

ಮೀಟೂ ಘಟನೆಗೆ ಸಂಬಂಧಿಸಿ ಎಷ್ಟರಮಟ್ಟಿಗೆ ಸಾಕ್ಷಿ ಒದಗಿಸುತ್ತೇವೆ ಎಂಬುದೇ ದೊಡ್ಡ ಪ್ರಶ್ನೆ. ಒಬ್ಬಳಿಗೆ ಅತ್ಯಾಚಾರ ವಾಗಿದೆ ಎಂದರೆ ಪೊಲೀಸರು ಎಷ್ಟು ಪ್ರಶ್ನೆ ಕೇಳುತ್ತಾರೆ. ಆಗ ಸಾಕಷ್ಟು ನೋವು ಆಗಲಿದೆ. ನನ್ನ ಆತ್ಮಚರಿತ್ರೆಯಲ್ಲಿ ನನಗಾದ ನೋವು ಪ್ರಸ್ತಾಪಿಸಿದ್ದು, ನನ್ನಂಥ ಸ್ಥಿತಿ ಬೇರೆ ಹೆಣ್ಣುಮಕ್ಕಳಿಗೆ ಆಗಬಾರದು. ಇಂಥ ಘಟನೆಗಳಿಂದ ಎಚ್ಚೆತ್ತುಕೊಳ್ಳುವಂತೆ ತಿಳಿಸಿದ್ದೇನೆ. ಗಂಡಿಗೂ-ಹೆಣ್ಣಿಗೂ ನ್ಯಾಯ ಸಿಗಬೇಕಿದ್ದು, ಇಂಥ ಘಟನೆಗಳು ಅನುಭವಕ್ಕೆ ಬರುವ ಮುನ್ನವೇ ವಯಸ್ಸು ಮೀರಿ ಹೋಗಿರುತ್ತದೆ ಎಂದು ಜಯಶ್ರೀ ವಿಷಾದಿಸಿದರು.