ಕೌರವನ ಚಿತ್ತ ಕಮಲ ಪಾಳಯದತ್ತ?

ಪರಶುರಾಮ ಕೆರಿ ಹಾವೇರಿ

ಲೋಕಸಭೆ ಚುನಾವಣೆಯಲ್ಲಿ ದೇಶದ್ಯಾಂತ ಮೋದಿ ಅಲೆಯ ಎದುರು ವಿಪಕ್ಷಗಳು ಧೂಳೀಪಟವಾಗುತ್ತಿದ್ದಂತೆ ಇತ್ತ ಹಿರೇಕೆರೂರ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ.ಸಿ. ಪಾಟೀಲ ಕೈ ತೊರೆದು ಕಮಲ ಸೇರಲು ಚಿತ್ತ ಹರಿಸಿದ್ದಾರೆ.

ಲೋಕಸಭೆ ಚುನಾವಣೆ ಮತ ಎಣಿಕೆ ಆರಂಭಗೊಳ್ಳುತ್ತಿದ್ದಂತೆ ದೇಶದೆಲ್ಲೆಡೆ ಮತದಾರರು ಮೋದಿಗೆ ಫಿದಾ ಆಗಿದ್ದನ್ನು ಗಮನಿಸಿದ ಬಿ.ಸಿ. ಪಾಟೀಲರು ಕ್ಷೇತ್ರದಲ್ಲಿ ಕಾಂಗ್ರೆಸ್ ಮುಖಂಡರನ್ನು ಸಂರ್ಪಸಿ ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಿದ್ದಾರೆ.

ಈಗಾಗಲೇ ಪಕ್ಷದ ತಾಲೂಕು ಅಧ್ಯಕ್ಷರು ಸೇರಿ ಮೊದಲ ಹಂತದ ನಾಯಕರೊಂದಿಗೆ ರ್ಚಚಿಸಿರುವ ಬಿ.ಸಿ. ಪಾಟೀಲರು, ಮೈತ್ರಿ ಸರ್ಕಾರ ಶೀಘ್ರದಲ್ಲಿಯೇ ಸಂಪುಟ ವಿಸ್ತರಣೆ ನಡೆಸಿ ಸಚಿವ ಸ್ಥಾನ ನೀಡಲು ಮುಂದಾದರೆ ಕಾಂಗ್ರೆಸ್​ನಲ್ಲಿಯೇ ಮುಂದುವರಿಯಬೇಕು. ಒಂದೊಮ್ಮೆ ಹಿಂದಿನಂತೆ ಭರವಸೆಗಳ ಹಳಿ ಮೇಲೆ ದಿನದೂಡಲು ಮುಂದಾದರೆ ಕಾಂಗ್ರೆಸ್​ನಲ್ಲಿಯ ಅತೃಪ್ತ ಶಾಸಕರ ಪಡೆಯನ್ನು ಸೇರಬೇಕೆಂಬ ಅಭಿಪ್ರಾಯ ಬರುವ ರೀತಿಯಲ್ಲಿ ಮಾತನಾಡಿದ್ದಾರೆ.

ವಾಟ್ಸ್​ಆಪ್ ಮೆಸೇಜ್ ವೈರಲ್: ಹಿರೇಕೆರೂರ ಕ್ಷೇತ್ರದ ಕಾಂಗ್ರೆಸ್​ನ ವಾಟ್ಸ್​ಆಪ್ ಗ್ರುಪ್​ಗಳಲ್ಲಿ ಸ್ವತಃ ಬಿ.ಸಿ. ಪಾಟೀಲರೇ ‘ತಾಲೂಕಿನ ನನ್ನ ಎಲ್ಲ ಆತ್ಮೀಯ ನಾಯಕರೇ ದಯಮಾಡಿ ಫೋನ್​ನಲ್ಲಿ ನನ್ನನ್ನು ಸಂರ್ಪಸಿ’ ಎಂದು ಮೆಸೇಜ್ ಮಾಡಿದ್ದಾರೆ. ಈ ಮೆಸೇಜ್ ಕ್ಷೇತ್ರದಾದ್ಯಂತ ವೈರಲ್ ಆಗಿದ್ದು, ಪಾಟೀಲರು ಬಿಜೆಪಿಯತ್ತ ಮುಖ ಮಾಡಿರುವುದು ಪಕ್ಕಾ ಎಂದು ಕಾರ್ಯಕರ್ತರು ಮಾತನಾಡಿಕೊಳ್ಳುತ್ತಿದ್ದಾರೆ.

ಬಿ.ಸಿ. ಪಾಟೀಲರ ಲೆಕ್ಕಾಚಾರವೇನು?: ಕಾಂಗ್ರೆಸ್​ನಲ್ಲಿ ಸಚಿವ ಸ್ಥಾನ ಸಿಗದೇ ಇರುವುದರಿಂದ ಕಳೆದ ಆರು ತಿಂಗಳಿನಿಂದ ಬಿಜೆಪಿ ಸೇರ್ಪಡೆಯ ವದಂತಿಯನ್ನು ಹರಿಬಿಟ್ಟಿದ್ದರು. ಇದ್ಯಾವುದಕ್ಕೂ ಕೈ ಹೈಕಮಾಂಡ್ ಮನ್ನಣೆ ನೀಡಲೇ ಇಲ್ಲ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚಿನ ಮತಗಳು ಬಂದಿವೆ. ಬಿಜೆಪಿಯು ಸಚಿವ ಸ್ಥಾನದ ಆಫರ್ ನೀಡಿದರೆ ಕಾಂಗ್ರೆಸ್​ಗೆ ರಾಜೀನಾಮೆ ನೀಡಿ ಮರು ಚುನಾವಣೆ ಎದುರಿಸಿದರೂ ಬಿಜೆಪಿಯ ಅಲೆಯಲ್ಲಿ ಸುಲಭವಾಗಿ ಆಯ್ಕೆಯಾಗಬಹುದು. ಆದರೆ, ಇದಕ್ಕೂ ಮೊದಲು ಕ್ಷೇತ್ರದಲ್ಲಿನ ಕಾಂಗ್ರೆಸ್ ಕಾರ್ಯಕರ್ತರ ಅಭಿಪ್ರಾಯ ಕೇಳಿ ಮುಂದುವರಿದರೆ ಕಾಂಗ್ರೆಸ್​ನ ಮತಗಳನ್ನು ಸುಲಭವಾಗಿ ಪಡೆಯಬಹುದು ಎಂಬ ಲೆಕ್ಕಾಚಾರ ಬಿ.ಸಿ. ಪಾಟೀಲರದ್ದು. ಇದೇ ಉದ್ದೇಶದಿಂದ ಕಾರ್ಯಕರ್ತರ, ಮುಖಂಡರ ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಿದ್ದಾರೆ.

ಯು.ಬಿ. ಬಣಕಾರ ನಡೆ ನಿಗೂಢ: ಬಿಜೆಪಿಯ ಮಾಜಿ ಶಾಸಕ ಯು.ಬಿ. ಬಣಕಾರ ಹಾಗೂ ಶಾಸಕ ಬಿ.ಸಿ. ಪಾಟೀಲ ರಾಜಕೀಯವಾಗಿ ಕಟ್ಟಾ ವಿರೋಧಿಗಳಾಗಿದ್ದಾರೆ. ಇಲ್ಲಿನ ಅನೇಕ ಕಾರ್ಯಕರ್ತರು ಪಕ್ಷಕ್ಕಿಂತ ಹೆಚ್ಚಾಗಿ ಯು.ಬಿ. ಬಣಕಾರ ಅವರ ಮೇಲೆ ಹೆಚ್ಚಿನ ಅಭಿಮಾನ ಹೊಂದಿದ್ದಾರೆ. ಬಿ.ಸಿ. ಪಾಟೀಲರು ಬಿಜೆಪಿ ಸೇರ್ಪಡೆಯಾದರೆ, ಯು.ಬಿ. ಬಣಕಾರ ಕೈಗೊಳ್ಳುವ ನಿರ್ಧಾರವೂ ಪ್ರಮುಖ ಪಾತ್ರ ವಹಿಸಲಿದೆ. ಸದ್ಯ ಯು.ಬಿ. ಬಣಕಾರ ನಡೆಯೂ ನಿಗೂಢವಾಗಿದೆ.

ಅಭಿವೃದ್ಧಿ ದೃಷ್ಟಿಯಿಂದ ನಮ್ಮ ಕ್ಷೇತ್ರದ ಶಾಸಕರು ಸಚಿವರಾಗುವುದು ಅವಶ್ಯವಾಗಿದೆ. ಬಿಜೆಪಿಯವರು ಸಚಿವ ಸ್ಥಾನ ನೀಡುವುದಾದರೆ ನೀವು ಜನರ ಅಭಿಪ್ರಾಯ ಸಂಗ್ರಹಿಸಿ ಬಿಜೆಪಿಗೆ ಹೋಗಿ ನಾವು ನಿಮ್ಮೊಂದಿಗೆ ಬರುತ್ತೇವೆ ಎಂದು ಹೇಳಿದ್ದೇವೆ. ಬಿಜೆಪಿಯ ಕಾರ್ಯಕರ್ತರು ಸ್ವಾಗತ ಮಾಡಿದ್ದಾರೆ. ಬಿ.ಸಿ. ಪಾಟೀಲರೊಂದಿಗೆ ನಾವು ಬಿಜೆಪಿಗೆ ಹೋಗಲು ಸಿದ್ಧರಿದ್ದೇವೆ.

| ಆರ್.ಎನ್. ಗಂಗೋಳ, ಹಿರೇಕೆರೂರ ತಾಲೂಕು ಕಾಂಗ್ರೆಸ್ ಅಧ್ಯಕ್ಷ

ಮೈತ್ರಿ ಸರ್ಕಾರದಲ್ಲಿ ಕ್ಷೇತ್ರಕ್ಕೆ ಅನ್ಯಾಯವಾಗಿದೆ. ಜಿಲ್ಲೆಯಲ್ಲಿ ಏಕೈಕ ಕಾಂಗ್ರೆಸ್ ಶಾಸಕರನ್ನು ಆಯ್ಕೆಗೊಳಿಸಿದ್ದರೂ ಸಚಿವ ಸ್ಥಾನ ನೀಡಿಲ್ಲ. ಹೀಗಾಗಿ ನೀವು ಏನಾದರೂ ನಿರ್ಧಾರ ಕೈಗೊಳ್ಳಬೇಕು ಎಂದು ಕ್ಷೇತ್ರದಲ್ಲಿನ ಮುಖಂಡರು, ಕಾರ್ಯಕರ್ತರು ಒತ್ತಾಯಿಸಿದ್ದರು. ಹೀಗಾಗಿ ವಾಟ್ಸ್​ಆಪ್​ನಲ್ಲಿ ನನ್ನನ್ನು ಸಂರ್ಪಸುವಂತೆ ಮಾಹಿತಿ ರವಾನಿಸಿದ್ದೇನೆ ಅಷ್ಟೆ. ಸದ್ಯ ಬೆಂಗಳೂರಿಗೆ ಬಂದಿದ್ದು, ಬೆಳವಣಿಗೆಗಳನ್ನು ಕಾಯ್ದು ನೋಡುತ್ತಿದ್ದೇನೆ. ಕ್ಷೇತ್ರದ ಜನರ ಅಭಿಪ್ರಾಯದಂತೆ ಮುಂದೆ ನಿರ್ಧಾರ ಕೈಗೊಳ್ಳುವೆ.

| ಬಿ.ಸಿ. ಪಾಟೀಲ, ಶಾಸಕರು ಹಿರೇಕೆರೂರ

ಬಿ.ಸಿ. ಪಾಟೀಲರು ಬಿಜೆಪಿ ಸೇರುವ ಕುರಿತು ನಮ್ಮ ಪಕ್ಷದ ವರಿಷ್ಠರಿಂದ ಯಾವುದೇ ಮಾಹಿತಿ ಬಂದಿಲ್ಲ. ಹೀಗಾಗಿ ಈ ಕುರಿತು ಈಗಲೇ ಯಾವುದೇ ಅಭಿಪ್ರಾಯ ಹೇಳಲು ಬಯಸುವುದಿಲ್ಲ.

| ಯು.ಬಿ. ಬಣಕಾರ, ಮಾಜಿ ಶಾಸಕ, ಹಿರೇಕೆರೂರ

Leave a Reply

Your email address will not be published. Required fields are marked *