ಪಾಕ್​ ಸಂಭಾವ್ಯ ಪ್ರಧಾನಿ ಇಮ್ರಾನ್​ ಖಾನ್​ಗೆ ಅಝರುದ್ದೀನ್ ನೀಡಿದ ಎಚ್ಚರಿಕೆಯೇನು?

ನವದೆಹಲಿ: ಪಾಕಿಸ್ತಾನ ಸಾರ್ವತ್ರಿಕ ಚುನಾವಣೆಯಲ್ಲಿ ಮಾಜಿ ಕ್ರಿಕೆಟಿಗ ಇಮ್ರಾನ್​ ಖಾನ್​ ನೇತೃತ್ವದ ಪಾಕಿಸ್ತಾನ್ ತೆಹ್ರಿಕ್-ಇ-ಇನ್ಸಾಫ್ ಪಕ್ಷ ಬಹುದೊಡ್ಡ ಪಕ್ಷವಾಗಿ ಗೆಲುವು ಸಾಧಿಸಿದೆ. ಪಾಕ್​ನ ಸಂಭಾವ್ಯ ಪ್ರಧಾನಿಯಾಗಿ ಹೊಮ್ಮಿರುವ ಖಾನ್​ಗೆ ಟೀಂ ಇಂಡಿಯಾ ಮಾಜಿ ನಾಯಕ ಹಾಗೂ ಕಾಂಗ್ರೆಸ್​ ಮುಖಂಡ ಮೊಹಮ್ಮದ್ ಅಝರುದ್ದೀನ್ ಎಚ್ಚರಿಕೆಯೊಂದನ್ನು ನೀಡಿದ್ದಾರೆ.

ಖಾನ್​ ಚುನಾವಣೆಯಲ್ಲೇ ಯಶಸ್ಸು ಸಾಧಿಸುತ್ತಿದ್ದಂತೆಯೇ ಕ್ರಿಕೆಟ್​ ಲೋಕದ ಅನೇಕ ದಿಗ್ಗಜರು ಅಭಿನಂದನೆ ಸಲ್ಲಿಸಿ ತಮ್ಮದೇ ಸಲಹೆಗಳನ್ನು ನೀಡ ತೊಡಗಿದ್ದಾರೆ. ಇದೀಗ ಖಾನ್​ ಸಮಕಾಲೀನರಾದ ಅಝರುದ್ದೀನ್ ರಾಷ್ಟ್ರ ಮತ್ತು ಕ್ರಿಕೆಟ್​ ತಂಡವನ್ನು ಮುನ್ನಡೆಸುವುದರಲ್ಲಿ ಬಹುದೊಡ್ಡ ವ್ಯತ್ಯಾಸವಿದೆ ಎಂದು ಸಲಹೆ ನೀಡಿದ್ದಾರೆ.

ಪಾಕ್​ ಕ್ರಿಕೆಟ್​ ತಂಡದ ನಾಯಕರಾಗಿ ಖಾನ್​ ಅನೇಕ ಬಾರಿ ಮೈದಾನದಲ್ಲಿ ಧನಾತ್ಮಕ, ದಿಟ್ಟ ಹಾಗೂ ವೈಯ್ಯಕ್ತಿಕ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಪಾಕ್​ ಪ್ರಧಾನಿಯಾದ ನಂತರ ಅಂತಹ ನಿರ್ಧಾರಗಳನ್ನು ಮಾತ್ರ ಖಾನ್​ ತೆಗೆದುಕೊಳ್ಳಬೇಕು ಎಂದು ಅಝರುದ್ದೀನ್ ಅಭಿಪ್ರಾಯಪಟ್ಟಿದ್ದಾರೆ.

ರಾಷ್ಟ್ರ ಮುನ್ನಡೆ ಹಾಗೂ ಕ್ರಿಕೆಟ್​ ತಂಡ ಮುನ್ನಡೆ ಎಂಬುದು ಎರಡು ವಿಭಿನ್ನ ವಿಷಯಗಳು. ಖಾನ್​ ಏನು ಮಾಡುತ್ತಾರೆ ಎಂಬುದನ್ನು ನಾವು ನೋಡಬೇಕಾಗಿದೆ ಎಂದು ಹೇಳಿದ್ದಾರೆ.

ಖಾನ್​ ಪ್ರಧಾನಿಯಾಗಿ ಇಂಡೋ-ಪಾಕ್​ ಸಂಬಂಧದ ಬಗ್ಗೆ ಮಾತನಾಡಲು ಅವಕಾಶ ಸಿಕ್ಕರೆ, ಏನು ಮಾಡುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಪಾಕ್​ನೊಳಗೆ ಅನೇಕ ಸಮಸ್ಯೆಗಳಿವೆ. ಮೊದಲು ಅದನ್ನು ತಿಳಿದುಕೊಂಡು ಬಗೆಹರಿಸಲಿ. ಆನಂತರ ಇತರೆ ಸಮಸ್ಯೆಗಳ ಕಡೆ ನೋಡಲಿ ಎಂಬ ಮಾತನ್ನಾಡಿದ್ದಾರೆ.

ಕ್ರೀಡಾ ಲೋಕದಲ್ಲಿ ಉಭಯ ನಾಯಕರು ತಮ್ಮ ತಂಡಗಳನ್ನು ಅನೇಕ ಸಂದರ್ಭಗಳಲ್ಲಿ ಮುನ್ನಡೆಸಿದ್ದಾರೆ. 1992ರಲ್ಲಿ ನಡೆದ ವಿಶ್ವಕಪ್​ ಟೂರ್ನಿಯಲ್ಲಿ ಭಾರತ ಪಾಕ್​ ತಂಡವನ್ನು ಬಗ್ಗುಬಡಿದಿದ್ದರು. ಈ ವೇಳೆ ಈ ಇಬ್ಬರು ದಿಗ್ಗಜರು ತಮ್ಮ ತಂಡಗಳನ್ನು ಮುನ್ನಡೆಸಿದ್ದರು. (ಏಜೆನ್ಸೀಸ್​)