ಜೀವನದ ಅಗತ್ಯಕ್ಕೆ ಮಾತ್ರ ಹಣವಿರಲಿ

ಲಿಂಗದಹಳ್ಳಿ: ದುಡಿದಿದ್ದರಲ್ಲಿ ಜೀವನಕ್ಕೆ ಅಗತ್ಯವಿದ್ದಷ್ಟನ್ನು ಇರಿಸಿಕೊಂಡು ಉಳಿದ ಹಣವನ್ನು ಅಶಕ್ತರಿಗೆ, ಧಾರ್ವಿುಕ ಕಾರ್ಯಗಳಿಗೆ ನೀಡಬೇಕು ಎಂದು ಹುಣಸಘಟ್ಟ ಹಾಲಸ್ವಾಮಿ ಮಠದ ಶ್ರೀ ಗುರುಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ರೂಪ್​ಲೈನ್ ಗ್ರಾಮದಲ್ಲಿ ಗುರುವಾರ ಅಯ್ಯಪ್ಪಸ್ವಾಮಿ ದೇವಾಲಯದ ಉದ್ಘಾಟನೆ, ವಿಗ್ರಹ ಪ್ರತಿಷ್ಠಾಪನೆ ಹಾಗೂ ಕಲಶಾರೋಹಣ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ತಮ್ಮ ನಂತರದ ಪೀಳಿಗೆಗೆಂದು ಉಳಿಸುವುದರಿಂದ ಮುಂದಿನ ಪೀಳಿಗೆಯವರಿಗೆ ದುಡಿಯಬೇಕೆಂಬುದರ ಅರಿವು ಇಲ್ಲದಂತಾಗುತ್ತದೆ. ಆಗ ಜನರು ಸೋಮಾರಿಗಳಂತಾಗಿ, ದುಶ್ಚಟಗಳಿಗೆ ದಾಸರಾಗಲು ನಾವೇ ದಾರಿ ತೋರಿಸಿದಂತಾಗುತ್ತದೆ ಎಂದು ತಿಳಿಸಿದರು.

ಶಬರಿಮಲೆಗೆ 18 ಮೆಟ್ಟಿಲುಗಳನ್ನು ನಿರ್ಮಾಣ ಮಾಡಲಾಗಿದೆ. ಇದರ ಸಂಕೇತ, ಮಾನವ ದಿನದ 24 ಗಂಟೆಯಲ್ಲಿ 6 ಗಂಟೆ ವಿಶ್ರಾಂತಿ ಪಡೆದು, ಉಳಿದ 18 ಗಂಟೆಗಳಲ್ಲಿ 8 ಗಂಟೆ ದುಡಿಮೆಗೂ, ಇನ್ನುಳಿದ 10 ಗಂಟೆಗಳನ್ನು ದೇವರ ಧಾನ್ಯ ಹಾಗೂ ಧಾರ್ವಿುಕ ಕಾರ್ಯಕ್ಕೆ ಮೀಸಲಿಡಬೇಕು ಎಂಬುದು. ಈ ರೀತಿ ಜೀವಿಸುವವನೇ ಸಾಧಕನೆನಿಸಿಕೊಳ್ಳಬಲ್ಲ ಎಂದರು.

ಅಯ್ಯಪ್ಪಸ್ವಾಮಿ ಸೇವಾ ಸಮಿತಿ ರಾಜ್ಯಾಧ್ಯಕ್ಷ ರೋಜಾ ಷಣ್ಮುಗಂ ಸ್ವಾಮಿ, ತರೀಕೆರೆ ಎಪಿಎಂಸಿ ಅಧ್ಯಕ್ಷ ಗುಳ್ಳದಮನೆ ವಸಂತ ಕುಮಾರ್, ಈಡಿಗ ಸಮುದಾಯದ ತಾಲೂಕು ಅಧ್ಯಕ್ಷ ಕೆ.ಎಸ್.ಅಶೋಕ್, ಕೆ.ಎಂ.ಶಶಿಧರ್, ಎಂ.ತಂಗಪ್ಪ, ರಾಧಾಕೃಷ್ಣ, ಪಿ.ಮಂಜುನಾಥ, ವಿಜಯಕುಮಾರ್, ಪಿ.ಎ.ಮನೋಜ್​ಕುಮಾರ್ ಮುಂತಾದವರು ಇದ್ದರು.

ಮತ್ತಷ್ಟು ಅನುದಾನ ಭರವಸೆ

ಅಯ್ಯಪ್ಪಸ್ವಾಮಿ ದೇವಾಲಯದ ಅಭಿವೃದ್ಧಿಗೆ ಸಂಸದರ ಮತ್ತು ಶಾಸಕರ ಅನುದಾನ ನೀಡಲಾಗಿದ್ದು, ದೇವಾಲಯ ಸುತ್ತಲಿರುವ ಪ್ರಾಂಗಣದ ಮೇಲ್ಛಾವಣಿಗೆ ಹಣದ ನೆರವನ್ನು ಶಾಸಕರ ಅನುದಾನದಲ್ಲಿ ನೀಡಲು ಬದ್ಧ ಎಂದು ಶಾಸಕ ಡಿ.ಎಸ್.ಸುರೇಶ್ ಹೇಳಿದರು. ಗ್ರಾಮದ ಸರ್ವೆ ನಂಬರ್ 1 ಮತ್ತು 6ರಲ್ಲಿ ಕಂದಾಯ ಜಾಗವಿದ್ದು, ಇದರಲ್ಲಿ ಶಾಲಾ ಕಟ್ಟಡ ಮತ್ತು ದೇವಸ್ಥಾನಗಳ ಅಭಿವೃದ್ಧಿಗೆ ಜಾಗ ನೀಡಿ, ಉಳಿದ ಸ್ಥಳವನ್ನು ಗ್ರಾಮಸ್ಥರ ಅನುಕೂಲಗಳಿಗೆ ಬಳಸಲು ಕಾಯ್ದಿರಿಸಲಾಗುವುದು ಎಂದು ತಿಳಿಸಿದರು.

ದಾನಿಗಳ ನೆರವಿನಿಂದ ನಿರ್ಮಾಣ

ಧಾರ್ವಿುಕ ಸಮಾರಂಭ ಉದ್ಘಾಟಿಸಿ ಮಾತನಾಡಿದ ದೇವಸ್ಥಾನ ಸಮಿತಿ ಗೌರವಾಧ್ಯಕ್ಷ ಕೆ.ಎಂ.ಶಶಿಧರ್, ದೇವಾಲಯ ಶಿಥಿಲವಾಗಿದುದ್ದನ್ನು ಗಮನಿಸಿ ಗ್ರಾಮಸ್ಥರೊಂದಿಗೆ ಶ್ರೀ ವೀರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿ ವಿಷಯ ಪ್ರಸ್ತಾಪಿಸಿದಾಗ ಶ್ರೀ ಕ್ಷೇತ್ರದ ವತಿಯಿಂದ 1 ಲಕ್ಷ ರೂ. ನೀಡಿದರು. ಆ ಅನುದಾನದಿಂದ ದೇವಾಲಯ ಕಾಮಗಾರಿ ಪ್ರಾರಂಭಗೊಂಡಿತು. ಸಾವಿರಾರು ಜನ ತಮ್ಮ ಕೈಲಾದಷ್ಟು ಹಣ ನೀಡಿದ್ದಾರೆ. ಇದರಿಂದ ಸುಸಜ್ಜಿತ ದೇವಾಲಯ ನಿರ್ವಣವಾಗಿದೆ ಎಂದರು.

ಜಾತ್ಯತೀತವಾಗಿ ಆರಾಧನೆ ಮಾಡುವ ದೇವರೆಂದರೆ ಅಯ್ಯಪ್ಪಸ್ವಾಮಿ. ಎಲ್ಲ ಜಾತಿ, ಧರ್ಮದವರೂ ಅಯ್ಯಪ್ಪ ಮಾಲೆ ಧರಿಸುತ್ತಾರೆ. ಮಾನವರೆಲ್ಲರೂ ಒಂದೇ ಎಂದರಿಯದ ನೆರೆ ರಾಷ್ಟ್ರದ ಕೆಲ ಮತಾಂಧರು ನಮ್ಮ ದೇಶದ ವೀರ ಸೈನಿಕರ ಮೇಲೆ ಸತತವಾಗಿ ಆತ್ಮಾಹುತಿ ದಾಳಿ ನಡೆಸುತ್ತಿರುವುದು ಅಕ್ಷಮ್ಯ. ಇದಕ್ಕೆ ಹಣ ಇನ್ನಿತರೆ ಆಮಿಷಕ್ಕೆ ಬಲಿಯಾಗುತ್ತಿರುವ ನಮ್ಮ ದೇಶದ ಕೆಲವರ ದುರಾಸೆಯೂ ಕಾರಣ.

| ಡಾ. ವಿಶ್ವಸಂತೋಷ ಭಾರತಿ ಸ್ವಾಮೀಜಿ