ಅಯ್ಯಪ್ಪ ಭಕ್ತರಿಗೆ ಸಿಹಿ

ನವದೆಹಲಿ: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಎಲ್ಲ ವಯೋಮಾನದ ಮಹಿಳೆಯರ ಪ್ರವೇಶಕ್ಕೆ ಅನುಮತಿ ನೀಡಿ ಸೆ.28ರಂದು ಸಾಂವಿಧಾನಿಕ ಪೀಠ ನೀಡಿದ ತೀರ್ಪಿನ ಮರುಪರಿಶೀಲನೆಗೆ ಸುಪ್ರೀಂಕೋಟ್ ಒಪ್ಪಿದೆ. ಸಾಮಾನ್ಯವಾಗಿ ಮರು ಪರಿಶೀಲನಾ ಅರ್ಜಿಗಳ ಬಗ್ಗೆ ಸುಪ್ರೀಂಕೋರ್ಟ್ ನ್ಯಾಯಾಧೀಶರು ತಮ್ಮ ಚೇಂಬರ್​ಗಳಲ್ಲೇ ವಿಚಾರಣೆ ನಡೆಸಿ ವಜಾಗೊಳಿಸುತ್ತಾರೆ. ಆದರೆ ಶಬರಿಮಲೆ ತೀರ್ಪಿನ ಮರುಪರಿಶೀಲನೆಗೆ ಒಪ್ಪಿಕೊಳ್ಳುವ ಜತೆಗೆ ನ್ಯಾಯಾಲಯದಲ್ಲೇ ವಿಚಾರಣೆಗೆ ನಡೆಸುತ್ತೇವೆ ಎಂದಿರುವುದು ಶಬರಿಮಲೆ ಭಕ್ತವರ್ಗಕ್ಕೆ ಸಿಕ್ಕ ಮೊದಲ ಹಂತದ ಜಯ ಎಂದೇ ವಿಶ್ಲೇಷಿಸಲಾಗುತ್ತಿದೆ.

‘ಅಯ್ಯಪ್ಪ ಭಕ್ತರ ಧಾರ್ವಿುಕ ಭಾವನೆಗಳನ್ನು ಕೆರಳಿಸುವ ಸಾಂವಿಧಾನಿಕ ಪೀಠದ ತೀರ್ಪನ್ನು ಹಿಂತೆಗೆದುಕೊಳ್ಳಬೇಕು ಮತ್ತು ಹಿಂದಿದ್ದ ಸ್ಥಿತಿಯನ್ನೇ ಮುಂದುವರಿಸಬೇಕು’ ಎಂದು 49 ಅರ್ಜಿದಾರರು ಸಲ್ಲಿಸಿದ್ದ ಅರ್ಜಿಗಳನ್ನು ಪರಿಗಣಿಸಿದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಸಾಂವಿಧಾನಿಕ ಪೀಠ, ಜನವರಿ 22ರಿಂದ ಸಮಗ್ರ ವಿಚಾರಣೆ ನಡೆಸಲು ಸಮ್ಮತಿಸಿತು. ಆದರೆ, ತೀರ್ಪಿಗೆ ಮಧ್ಯಂತರ ತಡೆ ನೀಡಲು ಒಪ್ಪಿಕೊಂಡಿಲ್ಲ. ಹೀಗಾಗಿ, ಜನವರಿ 22ರ ತನಕ ಶಬರಿಮಲೆಯಲ್ಲಿ ಯಥಾಸ್ಥಿತಿ ಮುಂದುವರಿಯಲಿದೆ.

ಸದರಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ತೀರ್ಪಿನ ಬಳಿಕ ಕೇರಳ ದೊಡ್ಡ ಮಟ್ಟದ ಪ್ರತಿಭಟನೆಗಳಿಗೆ ಸಾಕ್ಷಿಯಾಗಿರುವ ಹಿನ್ನೆಲೆಯಲ್ಲಿ ಮರುವಿಚಾರಣೆಗೆ ಒಪ್ಪಲಾಗಿದೆ ಎಂದು ಕಾನೂನು ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ. ಮಹಿಳೆಯರ ಪ್ರವೇಶಾತಿ ನಿರಾಕರಣೆಯನ್ನು ಸಮರ್ಥಿಸಿದ ನ್ಯಾ. ಇಂದೂ ಮಲ್ಹೋತ್ರಾ ಅವರ ತೀರ್ಪಿನಲ್ಲಿರುವ ಬಹುತೇಕ ಅಂಶಗಳನ್ನೇ ದಾಖಲು ಮಾಡಿರುವ ಅರ್ಜಿದಾರರು, ಧಾರ್ವಿುಕ ವಿಷಯಗಳಲ್ಲಿ ನ್ಯಾಯಾಂಗದ ಹಸ್ತಕ್ಷೇಪ ಸಲ್ಲದು. ದೇವಾಲಯಗಳ ಪರಂಪರೆ, ಇತಿಹಾಸ ಹಾಗೂ ನಂಬಿಕೆಗಳ ಪಾಲನೆಗೆ ವೈಜ್ಞಾನಿಕ ಕಾರಣಗಳೂ ಇವೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಶಬರಿಮಲೆ ಪ್ರವೇಶಕ್ಕೆ ಅನುಮತಿ ಸಿಗಲಿಲ್ಲ ಎಂದು ಭಕ್ತವರ್ಗದ ಮಹಿಳೆಯೇನೂ ಸುಪ್ರೀಂಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿಲ್ಲ. ದೇವಾಲಯಕ್ಕೆ ಸಂಬಂಧಿಸದ ಹಾಗೂ ಧಾರ್ವಿುಕ ಭಾವನೆಗಳ ಬಗ್ಗೆ ನಂಬಿಕೆಯೇ ಇಲ್ಲದ ವ್ಯಕ್ತಿಗಳು ಅರ್ಜಿಗಳನ್ನು ಸಲ್ಲಿಸಿ, ವಿನಾಕಾರಣ ಗೊಂದಲದ ಸ್ಥಿತಿ ನಿರ್ಮಾಣ ಮಾಡಿದ್ದಾರೆ’ ಎಂದೂ ದೂರಿದ್ದಾರೆ.

ಅರ್ಜಿದಾರರ ಆಕ್ಷೇಪಣೆಗಳೇನು

* ಸಾಂವಿಧಾನಿಕ ನ್ಯಾಯಾಲಯಗಳು ಧಾರ್ವಿುಕ ಪದ್ಧತಿ, ಆಚರಣೆಗಳನ್ನು ಇತ್ಯರ್ಥಪಡಿಸಲು ಸಾಧ್ಯವೇ?

*ಧರ್ಮದ ವಿಷಯಗಳಲ್ಲಿ ನ್ಯಾಯಾಂಗದ ಹಸ್ತಕ್ಷೇಪದಿಂದ ದೇಶಾದ್ಯಂತ ಜನರು ಕೋಲಾಹಲ ಎಬ್ಬಿಸುವುದಿಲ್ಲವೇ

*ಎಲ್ಲ ಧರ್ಮಗಳಲ್ಲೂ ಅವುಗಳದ್ದೇ ಆದ ನಂಬಿಕೆ, ಆಚಾರ-ವಿಚಾರಗಳಿರುತ್ತವೆ. ಭಕ್ತರು ಅದನ್ನು ಶ್ರದ್ಧೆಯಿಂದ ಪಾಲಿಸುತ್ತಾರೆ. ಹಾಗೆಂದು ಅವೆಲ್ಲವನ್ನೂ ಪ್ರಶ್ನಿಸುತ್ತಾ ಕೂರಲು ಸಾಧ್ಯವೇ?

* ಶಬರಿಮಲೆ ಅಯ್ಯಪ್ಪ ದೇವರು ನೈಷ್ಟಿಕ ಬ್ರಹ್ಮಚಾರಿ. ಭಕ್ತಾದಿಗಳು ಕೂಡ ಬ್ರಹ್ಮಚರ್ಯ ಪಾಲಿಸಿಯೇ ದೇಗುಲಕ್ಕೆ ಬರಬೇಕು. ಇದು ದೇವರೇ ಹಾಕಿಕೊಟ್ಟ ನಿಯಮ ಎಂದೇ ಭಕ್ತರು ನಂಬಿದ್ದಾರೆ. ಹೀಗಿರುವಾಗ, ಮೂಲಭೂತ ಹಕ್ಕು ಎಂದು ಪ್ರತಿಪಾದಿಸಿ ದೇಗುಲದ ನಿಯಮ ಮುರಿಯಲು ಸಾಧ್ಯವೇ?

*ಕೇರಳದ ಹಲವು ದೇವಾಲಯಗಳಲ್ಲಿ ಮಹಿಳೆಯರಿಗೆ ಮಾತ್ರ ಪ್ರವೇಶಕ್ಕೆ ಅವಕಾಶವಿದೆ. ಹಾಗಂತ ಪುರುಷರಿಗೆ ಪ್ರವೇಶವಿಲ್ಲ ಎಂದು ಪ್ರತಿಭಟಿಸಲಾಗುತ್ತದೆಯೇ?

ಮಹಿಳಾ ಭಕ್ತರನ್ನು ತಡೆಯಲಾಗದು

10-50 ವಯೋಮಾನದ ಮಹಿಳೆಯರಿಗೆ ಪ್ರವೇಶಾನುಮತಿ ತೀರ್ಪಿಗೆ ತಡೆಯಾಜ್ಞೆ ನೀಡದಿರುವುದರಿಂದ ಮಹಿಳಾ ಭಕ್ತರು ಶಬರಿಮಲೆಗೆ ಆಗಮಿಸಿದಲ್ಲಿ ತಡೆಯುವುದು ಸಾಧ್ಯವಾಗದು. ಈ ಬಗ್ಗೆ ಕಾನೂನು ತಜ್ಞರ ಅಭಿಪ್ರಾಯ ಪಡೆದು ಮುಂದುವರಿಯಲಾಗುವುದು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.

ಮಹಿಳೆಯರ ಪ್ರವೇಶಕ್ಕೆ ತಡೆಯಾಜ್ಞೆ ಅಥವಾ ಯಥಾಸ್ಥಿತಿ ಕಾಯ್ದುಕೊಳ್ಳುವ ಬಗ್ಗೆ ಸುಪ್ರೀಂಕೋರ್ಟ್ ಆದೇಶ ನೀಡದಿರುವುದರಿಂದ ನ.16ರಿಂದ ಆರಂಭಗೊಳ್ಳುವ ಮಂಡಲ ಪೂಜಾ ಮಹೋತ್ಸವಕ್ಕೆ ಮಹಿಳಾ ಭಕ್ತರು ಆಗಮಿಸಿದಲ್ಲಿ ರಕ್ಷಣೆ ನೀಡುವ ಜವಾಬ್ದಾರಿ ಸರ್ಕಾರದ್ದಾಗಿರುತ್ತದೆ. ಸರ್ಕಾರ ಪ್ರತಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದುವರಿದಲ್ಲಿ ಸಮಸ್ಯೆಗೆ ಒಂದಷ್ಟು ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ನಮ್ಮ ಅರ್ಜಿಗಳ ವಿಚಾರಣೆಗೆ ಕೋರ್ಟ್ ಸಮ್ಮತಿಸಿ ರುವುದು ಸ್ವಾಗತಾರ್ಹ. ಅಯ್ಯಪ್ಪನ ಭಕ್ತರ ಹೋರಾಟಕ್ಕೆ ಪೂರ್ಣ ನ್ಯಾಯ ಸಿಗುವ ವಿಶ್ವಾಸವಿದೆ

| ಮುತ್ತು ಕುಮಾರ್ ವಕೀಲರು, ಚೇತನಾ ಕನ್ಸೈನ್ಸ್ ಆಫ್ ವುಮೆನ್ ಎನ್​ಜಿಒ

ನಾಳೆ ಸರ್ವಪಕ್ಷ ಸಭೆ

ತೀರ್ಪು ಮರುಪರಿಶೀಲನಾ ಅರ್ಜಿಗಳನ್ನು ಸುಪ್ರೀಂಕೋರ್ಟ್ ವಿಚಾರಣೆಗೆ ಪರಿಗಣಿಸಿರುವ ಹಿನ್ನೆಲೆಯಲ್ಲಿ ಕೇರಳ ಸರ್ಕಾರ ನ.15ರಂದು ಸರ್ವಪಕ್ಷಗಳ ಸಭೆಯನ್ನು ಕರೆದಿದೆ.