ಶಬರಿಮಲೆ ಸಂರಕ್ಷಣೆಗಾಗಿ ಅಯ್ಯಪ್ಪ ಜ್ಯೋತಿ

ಕಾಸರಗೋಡು: ಶಬರಿಮಲೆ ಆಚಾರ-ಅನುಷ್ಠಾನಗಳನ್ನು ಸಂರಕ್ಷಿಸಬೇಕೆಂದು ಆಗ್ರಹಿಸಿ ಕಾಸರಗೋಡಿನ ಹೊಸಂಗಡಿಯಿಂದ ಕನ್ಯಾಕುಮಾರಿ ತ್ರಿವೇಣಿ ಸಂಗಮ ತನಕ ಅಯ್ಯಪ್ಪ ಜ್ಯೋತಿ ಪ್ರಜ್ವಲನ ಬುಧವಾರ ಸೂರ್ಯಾಸ್ತಮಾನದ ವೇಳೆ ನಡೆಯಿತು.

ಹೊಸಂಗಡಿ ಶ್ರೀ ಧರ್ಮಶಾಸ್ತಾ ಕ್ಷೇತ್ರದಲ್ಲಿ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮ ಶ್ರೀಯೋಗನಾಂದ ಸರಸ್ವತಿ ಸ್ವಾಮೀಜಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕೇರಳ-ತಮಿಳುನಾಡು ಗಡಿ ಪ್ರದೇಶ ಕಳುಮಿಕಾಲಿಲ್‌ನಲ್ಲಿ ರಾಜ್ಯಸಭಾ ಸದಸ್ಯ ಸುರೇಶ್ ಗೋಪಿ ದೀಪ ಬೆಳಗಿಸಿ ಉದ್ಘಾಟಿಸಿದರು.

ಹೊಸಂಗಡಿಯಿಂದ ಕನ್ಯಾಕುಮಾರಿ ತ್ರಿವೇಣಿ ಸಂಗಮ ತನಕ ರಾಜ್ಯದ 795 ಕಿ.ಮೀ. ದೂರ ಪ್ರತಿ ಮೀಟರ್‌ಗೆ ಒಬ್ಬರಂತೆ ಹೆದ್ದಾರಿಯುದ್ದಕ್ಕೂ ಜ್ಯೋತಿ ಬೆಳಗಿಸಲು ಸಾಲಾಗಿ ನಿಲ್ಲುವ ವ್ಯವಸ್ಥೆ ಮಾಡಿದ್ದು, 10 ಲಕ್ಷಕ್ಕೂ ಅಧಿಕ ಭಕ್ತರು ಪಾಲ್ಗೊಂಡಿದ್ದರು. ಕರ್ನಾಟಕ, ತಮಿಳುನಾಡು ಹಾಗೂ ವಿದೇಶಗಳಲ್ಲೂ ಭಕ್ತರು ಅಯ್ಯಪ್ಪ ಜ್ಯೋತಿ ಬೆಳಗಿಸಿದರು. ಮಂಗಳೂರು ನಗರದ ವಿವಿಧೆಡೆ ಜ್ಯೋತಿ ಬೆಳಗುವ ಮೂಲಕ ಅಭಿಯಾನವನ್ನು ಬೆಂಬಲಿಸಲಾಯಿತು.

ರಾಜ್ಯದ 250 ಕೇಂದ್ರಗಳಲ್ಲಿ ವಿಶ್ವಾಸ ಸಂರಕ್ಷಣಾ ಸಮ್ಮೇಳನ ನಡೆಯಿತು. 6 ಗಂಟೆಗೆ ದೀಪ ಬೆಳಗಿಸಿ ಹತ್ತು ನಿಮಿಷಗಳ ಕಾಲ ರಸ್ತೆ ಬದಿಯಲ್ಲಿ ಅಯ್ಯಪ್ಪ ಜ್ಯೋತಿ ಸ್ವಾಮಿಯೇ ಶರಣಂ ಘೋಷಣೆಯೊಂದಿಗೆ ಚಳವಳಿ ರೂಪ ಪಡೆಯಿತು.

ಕಾಸರಗೋಡು ನಗರದ ಕರಂದಕ್ಕಾಡ್‌ನ ವೀರ ಹನುಮಾನ್ ಭಜನಾ ಮಂದಿರ ಪರಿಸರದಲ್ಲಿ ಚಿನ್ಮಯ ಮಿಶನ್‌ನ ವಿವಿಕ್ತಾನಂದ ಸರಸ್ವತಿ ಸ್ವಾಮೀಜಿ ಅಭಿಯಾನಕ್ಕೆ ಚಾಲನೆ ನೀಡಿದರು. ವಕೀಲರಾದ ಕರುಣಾಕರನ್ ನಂಬ್ಯಾರ್, ರವೀಂದ್ರನ್, ಸಿ.ವಿ.ಪೊದುವಾಳ್,ಆರೆಸ್ಸೆಸ್‌ನ ದಿನೇಶ್ ಮಡಪ್ಪುರ, ಮಂಜುನಾಥ ಪೂಜಾರಿ ಮೊದಲಾದವರಿದ್ದರು. ರಸ್ತೆಯುದ್ದಕ್ಕೂ ನಿಂತು ಜ್ಯೋತಿ ಬೆಳಗಿದ ಬಳಿಕ ಶರಣಂ ಅಯ್ಯಪ್ಪ ಮಂತ್ರ ಜಪಿಸಿದರು.