ಆಯುಷ್ಮಾನ್ ಭಾರತ್- ಇ ಆಸ್ಪತ್ರೆ ಕಾರ್ಯಕ್ರಮ ವೆನ್ಲಾಕ್‌ಗೆ ರಾಜ್ಯದಲ್ಲೇ ಅಗ್ರಸ್ಥಾನ

ಮಂಗಳೂರು: ಆಯುಷ್ಮಾನ್ ಭಾರತ- ಆರೋಗ್ಯ ಕರ್ನಾಟಕ ಯೋಜನೆ ಮತ್ತು ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಇ- ಆಸ್ಪತ್ರೆ ಕಾರ್ಯಕ್ರಮ ಅನುಷ್ಠಾನದಲ್ಲಿ ಮಂಗಳೂರು ಜಿಲ್ಲಾ ವೆನ್ಲಾಕ್ ಆಸ್ಪತ್ರೆ ರಾಜ್ಯದಲ್ಲೇ ಅಗ್ರಸ್ಥಾನ ಪಡೆದಿದೆ.

ವೆನ್ಲಾಕ್ ಆಸ್ಪತ್ರೆಯ ಸೇವೆಯ ಕಾರ್ಯವೈಖರಿ ಬಗ್ಗೆ ಪ್ರಶಂಸನಾಪತ್ರ ಕಳುಹಿಸಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತರು, ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕಿ ಡಾ.ರಾಜೇಶ್ವರಿದೇವಿ ಎಚ್.ಆರ್. ಮತ್ತು ತಂಡವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಆಯುಷ್ ಸೇವೆಗಳ ವತಿಯಿಂದ ಅಭಿನಂದಿಸುವುದಾಗಿ ಉಲ್ಲೇಖಿಸಿದ್ದಾರೆ.

ಕಳೆದ ಒಂದು ವರ್ಷ ಅವಧಿಯಲ್ಲಿ ಆಸ್ಪತ್ರೆಯಲ್ಲಿ 2019, ಏಪ್ರಿಲ್‌ರಿಂದ ಜುಲೈ ತನಕ 2039 ನೋಂದಣಿಗಳನ್ನು ನಡೆಸಿದ್ದು, ಒಟ್ಟು 5071 ಪ್ರಕರಣಗಳನ್ನು ಯಶಸ್ವಿಯಾಗಿ ನಿರ್ವಹಿಸಲಾಗಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ವೆನ್ಲಾಕ್ ರಾಜ್ಯದಲ್ಲೇ ಮುಂಚೂಣಿಯಲ್ಲಿದೆ. ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಪ್ರಥಮ ಹಂತದಲ್ಲಿ ರಾಜ್ಯದಲ್ಲಿ 20 ಜಿಲ್ಲಾಸ್ಪತ್ರೆ, ಮೂರು ಜಿಲ್ಲಾ ಮಟ್ಟ ಮತ್ತು 24 ತಾಲೂಕು ಆಸ್ಪತ್ರೆ ಒಳಗೊಂಡು 47 ಆಸ್ಪತ್ರೆಗಳಲ್ಲಿ ಇ- ಆಸ್ಪತ್ರೆ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗಿದೆ. ಓಪಿಡಿ, ಐಪಿಡಿ, ಫಾರ್ಮಸಿ, ಕ್ಲಿನಿಕ್ ಸಹಿತ ವಿವಿಧ ವಿಭಾಗಗಳಲ್ಲಿ ಇ- ಕಾರ್ಯಕ್ರಮ ಅನುಷ್ಠಾನಗೊಳಿಸುವಲ್ಲಿಯೂ ವೆನ್ಲಾಕ್ ಅತ್ಯುತ್ತಮ ನಿರ್ವಹಣೆ ದಾಖಲಿಸಿದೆ.

Leave a Reply

Your email address will not be published. Required fields are marked *