ಅನರ್ಹರಿಗೂ ಆಯುಷ್ಮಾನ್: ಕೇಂದ್ರ -ರಾಜ್ಯದ ಮಹತ್ವದ ಆರೋಗ್ಯ ಯೋಜನೆ ದುರ್ಬಳಕೆ

ರವಿ ಗೋಸಾಯಿ ಬೆಳಗಾವಿ/ ಬೆಂಗಳೂರು

ಕಡು ಬಡವರು ಮತ್ತು ಮಧ್ಯಮ ವರ್ಗದ ಜನರಿಗೆ ಉಚಿತ ಆರೋಗ್ಯ ಸೌಲಭ್ಯ ಒದಗಿಸುವ ಮಹತ್ವಾಕಾಂಕ್ಷೆಯಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಯೋಗದಲ್ಲಿ ರೂಪುಗೊಂಡಿರುವ ಜಗತ್ತಿನ ಅತಿ ದೊಡ್ಡ ಯೋಜನೆ ‘ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ’ದ ಉದ್ದೇಶವನ್ನೇ ಹಳ್ಳಹಿಡಿಸುವ ಕಿಡಿಗೇಡಿ ಕೃತ್ಯಗಳು ಬೆಳಕಿಗೆ ಬಂದಿವೆ. ಅನರ್ಹರಿಗೂ ಕಾರ್ಡ್ ಸಿಗುತ್ತಿರುವುದು ಒಂದೆಡೆಯಾದರೆ, ಸರ್ಕಾರಿ ಪರವಾನಗಿ ಪಡೆದ ಖಾಸಗಿ ಸಂಸ್ಥೆಗಳು ಹಣಕ್ಕಾಗಿ ಯೋಜನೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಬಟಾ ಬಯಲಾಗಿದೆ. ರಾಜ್ಯಾದ್ಯಂತ ವಿಜಯವಾಣಿ ನಡೆಸಿದ ರಿಯಾಲಿಟಿ ಚೆಕ್​ನಲ್ಲಿ ಆಯುಷ್ಮಾನ್ ಆರೋಗ್ಯ ಕರ್ನಾಟಕ ಯೋಜನೆಯ ಹುಳುಕುಗಳು ಹೊರಬಿದ್ದಿವೆ. ಯೋಜನೆ ಅನುಷ್ಠಾನಗೊಂಡ ಆರಂಭದಲ್ಲಿ ಅರ್ಹ ಫಲಾನುಭವಿಗಳಿಗೆ ಕಾರ್ಡ್ ವಿತರಿಸಲು 11 ಆಸ್ಪತ್ರೆಗಳಿಗಷ್ಟೇ ಅನುಮತಿ ನೀಡಲಾಗಿತ್ತು. ತರುವಾಯ ಆರೋಗ್ಯ ಸೇವೆಯನ್ನು ಸಕಾಲಕ್ಕೆ ಅರ್ಹ ಫಲಾನುಭವಿಗಳಿಗೆ ದೊರಕಿಸಿಕೊಡುವ ಉದ್ದೇಶದಿಂದ ಕರ್ನಾಟಕ ಒನ್, ಬೆಂಗಳೂರು ಒನ್ ಮತ್ತು ಸೇವಾ ಸಿಂಧೂ ಕೇಂದ್ರ ಸೇರಿ ರಾಜ್ಯದ ಎಲ್ಲ ಆಸ್ಪತ್ರೆಗಳಲ್ಲೂ ಕಾರ್ಡ್ ವಿತರಣೆಗೆ ಆರಂಭಿಸಲಾಗಿತ್ತು. ಆದರೆ ಹಣದ ಆಸೆಗಾಗಿ ಸಿಬ್ಬಂದಿ ಮತ್ತು ಏಜೆಂಟ್​ಗಳು ಅನರ್ಹರಿಗೂ ಕಾರ್ಡ್ ಮಾರಿಕೊಳ್ಳುತ್ತಿದ್ದಾರೆ.

ಯೋಜನೆಯ ಸೌಲಭ್ಯವೇನು?: ಯೋಜನೆಯಡಿ ಬಿಪಿಎಲ್ ಕಾರ್ಡ್​ದಾರರಿಗೆ 5 ಲಕ್ಷ ರೂ.ವರೆಗೆ, ಎಪಿಎಲ್ ಕಾರ್ಡ್​ದಾರರಿಗೆ 1.5 ಲಕ್ಷ ರೂ.ವರೆಗೆ ನಗದು ರಹಿತ ಉಚಿತ ಚಿಕಿತ್ಸೆ ಸೌಲಭ್ಯ ಸಿಗಲಿದೆ. ಆರೋಗ್ಯ ಕರ್ನಾಟಕದಡಿ 1,528 ಚಿಕಿತ್ಸೆಗಳನ್ನು ಗುರುತಿಸಲಾಗಿತ್ತು. ಆಯುಷ್ಮಾನ್ ಭಾರತ್ ಯೋಜನೆ ವಿಲೀನದ ತರುವಾಯ 96 ಚಿಕಿತ್ಸೆಗಳನ್ನು ಹೆಚ್ಚುವರಿಯಾಗಿ ಸೇರಿಸಿ ಒಟ್ಟು 1,614 ಚಿಕಿತ್ಸೆಗಳಿಗೆ ಚಿಕಿತ್ಸೆ ಸೌಲಭ್ಯ ಕಲ್ಪಿಸಲಾಗಿದೆ. ರಾಜ್ಯದ 1.32 ಕೋಟಿ ಕುಟುಂಬಗಳ 4.50 ಕೋಟಿ ಜನರು ಯೋಜನೆ ವ್ಯಾಪ್ತಿಗೆ ಬರುತ್ತಾರೆ. ರಾಜ್ಯದ 387 ಸರ್ಕಾರಿ ಮತ್ತು 390 ಖಾಸಗಿ ಆಸ್ಪತ್ರೆಗಳಲ್ಲಿ ಸದ್ಯಕ್ಕೆ ಈ ಯೋಜನೆ ಚಾಲ್ತಿಯಲ್ಲಿದೆ.

ಪ್ರತಿ ಕಾರ್ಡ್​ಗೆ 400 ರೂ. ವಸೂಲಿ

ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಬೆಳಗಾವಿ, ತುಮಕೂರು, ಯಾದಗಿರಿ, ಮೈಸೂರು, ಚಿಕ್ಕಬಳ್ಳಾಪುರ, ಕೋಲಾರ, ರಾಯಚೂರು, ಹಾಸನ, ಮಂಡ್ಯ ಬಾಗಲಕೋಟೆ, ವಿಜಯಪುರ ಮತ್ತು ಹುಬ್ಬಳ್ಳಿ ಧಾರವಾಡ ಸೇರಿ ಇನ್ನಿತರ ಜಿಲ್ಲೆಗಳಲ್ಲೂ ಏಜೆಂಟ್ ಹಾವಳಿ ಹೆಚ್ಚಾಗಿದೆ. ಎಲ್ಲ ಕಡೆಯೂ ಪ್ರತಿ ಕಾರ್ಡ್​ಗೆ 400 ರೂ.ವರೆಗೆ ವಸೂಲಿ ಮಾಡಲಾಗುತ್ತಿದೆ. ಕೆಲವು ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ರತ್ಯೇಕ ಸೆಂಟರ್ ಆರಂಭಿಸಿದ್ದರೂ ಸಿಬ್ಬಂದಿ ಕೊರತೆಯಿದೆ. ಸರ್ಕಾರಿ ಪರವಾನಗಿ ಪಡೆದ ಖಾಸಗಿ ಸಂಸ್ಥೆಗಳು ಯೋಜನೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿವೆ.

ಹಣ ಪಡೆದು ಬೇಕಾಬಿಟ್ಟಿ ಕಾರ್ಡ್ ವಿತರಿಸುತ್ತಿರುವ ಬಗ್ಗೆ ದೂರುಗಳು ಬಂದಿಲ್ಲ. ಯಾದಗಿರಿ ಜಿಲ್ಲೆಯಲ್ಲಿ ಒಂದು ಪ್ರಕರಣ ದಾಖಲಾಗಿತ್ತು. ಆರೋಗ್ಯ ಕಾರ್ಡ್ ದುರುಪಯೋಗ ಬಗ್ಗೆ ದೂರು ಬಂದಲ್ಲಿ ಕಠಿಣ ಕ್ರಮಕೈಗೊಳ್ಳುತ್ತೇವೆ.

| ಡಾ.ಸಜ್ಜನ್ ಶೆಟ್ಟಿ ಜಂಟಿ ನಿದೇಶಕ ಆಯುಷ್ಮಾನ್ -ಆರೋಗ್ಯ ಕರ್ನಾಟಕ

ಕಂಡಿದ್ದೇನು?

# ಗುರುತಿನ ಚೀಟಿ ಇಲ್ಲದೆಯೂ ಹಣ ಪಡೆದು ಕಾರ್ಡ್ ವಿತರಣೆ
#  ಸರ್ಕಾರಿ ಅಧಿಕಾರಿಗಳ ಸ್ನೇಹ ಬೆಳೆಸಿಕೊಂಡು ನಡೆಯುತ್ತಿದೆ ದಂಧೆ
# ಕರ್ನಾಟಕ ಒನ್, ಬೆಂಗಳೂರು ಒನ್​ಗಳಲ್ಲಿ ಸದಾ ಸರ್ವರ್ ಬ್ಯುಸಿ
# ತಾಂತ್ರಿಕ ವಿಳಂಬ ನೆಪವಾಗಿಸಿ ಸೈಬರ್ ಸೆಂಟರ್, ಫೋಟೊ ಸ್ಟುಡಿಯೋದಲ್ಲಿ ವ್ಯವಹಾರ
# ಅಧಿಕೃತ ಕೇಂದ್ರದಲ್ಲಿ ವೆಬ್​ಸೈಟ್ ಓಪನ್ ಮಾಡುವ ಪಿನ್​ನಂಬರ್ ಪಡೆದು ಡೀಲ್
# 300 ರೂ. ನೀಡಿದರೆ ಅರ್ಧ ಗಂಟೆಯಲ್ಲಿ ಸಿದ್ಧವಾಗುತ್ತದೆ ಕಾರ್ಡ್
# ವಾಟ್ಸ್​ಆಪ್​ನಲ್ಲಿ ದಾಖಲೆ ಕಳುಹಿಸಿದರೆ ಬೇರೆ ಸಹಿ ಹಾಕಿ ಕಾರ್ಡ್ ವಿತರಣೆ
# ಕಾರ್ಡ್ ವಿತರಿಸುವುದಕ್ಕೇ ಪ್ರಿಂಟಿಂಗ್ ಮೆಷಿನ್ ಖರೀದಿಸಿರುವ ಏಜೆಂಟ್​ಗಳು
# ಸರ್ಕಾರಿ ಅಧಿಕಾರಿಗಳಿಗೂ ಸಿಗುತ್ತಿದೆ ಕಮಿಷನ್
# ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ರತ್ಯೇಕ ಕೇಂದ್ರ ತೆರೆದರೂ ಬಗೆಹರಿಯದ ಸಿಬ್ಬಂದಿ ಕೊರತೆ
# ಸರ್ಕಾರಿ ಪರವಾನಗಿ ಪಡೆದ ಖಾಸಗಿ ಸಂಸ್ಥೆಗಳ ಮೊರೆಹೋಗಿರುವ ಜನರು
# ಸರ್ಕಾರಿ ಆಸ್ಪತ್ರೆಗಳಲ್ಲಿ ದಿನಕ್ಕೆ ಇಂತಿಷ್ಟೇ ಕಾರ್ಡ್ ವಿತರಣೆ ಸಮಸ್ಯೆ

ಬಯಲಿಗೆಳೆದ ವಿಜಯವಾಣಿ

ಬೆಳಗಾವಿಯಲ್ಲಿ ರಿಯಾಲಿಟಿ ಚೆಕ್ ನಡೆಸುವ ವೇಳೆ ವಿಜಯವಾಣಿಯೇ ದಂಧೆ ಬಯಲಿಗೆಳೆದಿದೆ. ನಮ್ಮ ಪ್ರತಿನಿಧಿ ಆರೋಗ್ಯ ಕಾರ್ಡ್​ಗಾಗಿ ಏಜೆಂಟ್ ಒಬ್ಬನನ್ನು ಸಂರ್ಪಸಿತ್ತು. ತಕ್ಷಣ ಬೇಕಿದ್ದರೆ 350 ರೂ. ಕೊಟ್ಟರೆ ಹತ್ತು ನಿಮಿಷದಲ್ಲಿ ಕಾರ್ಡ್ ಮಾಡಿಸಿಕೊಡುತ್ತೇನೆಂದು ಆತ ವ್ಯವಹಾರ ಕುದುರಿಸಿದ್ದ. ತಕ್ಷಣವೇ ಅರ್ಜಿ ತಂದು ಕೊಟ್ಟ ಆತ ಕಾರ್ಡ್ ಬೇಕಾದವರು ಬಂದಿಲ್ಲ ಎಂದರೂ ಅವರ ಅವಶ್ಯಕತೆ ಇಲ್ಲ ಎಂದು ಹೇಳಿ ನಮ್ಮ ಪ್ರತಿನಿಧಿಯಿಂದಲೇ ಸಹಿ ಹಾಕಿಸಿಕೊಂಡು, ಮೊಬೈಲ್​ನಲ್ಲೇ ಅರ್ಜಿ ಫೋಟೋ ತೆಗೆದು ಮತ್ತೊಬ್ಬರಿಗೆ ಕಳುಹಿಸಿಕೊಟ್ಟ. ಬಳಿಕ ಆರೋಗ್ಯ ಕಾರ್ಡ್ ಮಾಡಿಸಿ ಕೈಗೆ ಕೊಟ್ಟ.  ಏಜೆಂಟ್ ಜತೆಗಿನ ಸಂಭಾಷಣೆ

ವಿವಾ: ಸರ್ಕಾರಿ ಕಚೇರಿಯಲ್ಲಿ ತುಂಬಾ ತಡವಾಗುತ್ತೆ ಸ್ವಾಮಿ. ನೀವು ಇಷ್ಟು ಬೇಗ ಹೇಗೆ ಮಾಡುವಿರಿ?

ಏಜೆಂಟ್: ನಮ್ಮ ಫ್ರೆಂಡ್ಸ್ ಸರ್ಕಾರಿ ಕಚೇರಿಯಲ್ಲಿಯೇ ಇದ್ದಾರೆ. ಅವರೇ ನನಗೆ ಇದನ್ನೆಲ್ಲ ಮಾಡುವಂತೆ ಹೇಳಿದ್ದಾರೆ. ಬಂದ ಹಣದಲ್ಲಿ ಅವರಿಗೂ ಸ್ವಲ್ಪ ಕೊಡುತ್ತೇನೆ.

ವಿವಾ: ಒಂದು ದಿನಕ್ಕೆ ಎಷ್ಟು ಮಾಡಿಕೊಡುತ್ತೀರಿ?

ಏಜೆಂಟ್: ದಿನಕ್ಕೆ 250ಕ್ಕೂ ಹೆಚ್ಚು ಮಾಡುತ್ತೇವೆ. ಕೆಲವರು 200 ಕೊಡುತ್ತಾರೆ, ಅರ್ಜೆಂಟ್ ಇದ್ರೆ 350 ಪಡೆಯುತ್ತೇವೆ. ನಿಮ್ಮೂರಿನಲ್ಲಿ ಕಾರ್ಡ್ ಬೇಕಿದ್ದರೆ ರೇಷನ್ ಕಾರ್ಡ್ ತನ್ನಿ. ಒಂದೇ ದಿನದಲ್ಲಿ ಎಲ್ಲವನ್ನೂ ಮಾಡಿಕೊಡುತ್ತೇನೆ. ಬೇಕಾದರೆ ಕಮಿಷನ್ ತೆಗೆದುಕೊಳ್ಳಿ.

ವಿವಾ: ಈ ಊರಲ್ಲಿ ನೀವು ಒಬ್ರೇನಾ ಕೊಡೋದು?

ಏಜೆಂಟ್: ಇಲ್ಲ ಇನ್ನೂ ಇಬ್ಬರು ಇದ್ದಾರೆ. ಇನ್ನೊಬ್ಬರು ಲಾಯರ್ ಇದಾರೆ, ಅವರು 2200 ಲಾಭ ಪಡೆಯುತ್ತಾರೆ. ಅವರು ಸೀನಿಯರ್ ಸಿಟಿಜನ್ ಕಾರ್ಡನ್ನೂ ಮಾಡಿಕೊಡುತ್ತಾರೆ. ನಮಗೆ ಆ ಮಟ್ಟದ ವಸೂಲಿ ಇಲ್ಲ. 10 ನಿಮಿಷ ಟಿ ಕುಡಿದು ಬನ್ನಿ. ರೆಡಿ ಇರುತ್ತೆ ತಗೊಂಡು ಹೋಗಿ

ದಂಧೆಗೆ ತಡೆ ಹೇಗೆ?

ಆಯುಷ್ಮಾನ್ ಭಾರತ-ಆರೋಗ್ಯ ಕರ್ನಾಟಕ ಯೋಜನೆ ಕಾರ್ಡ್​ಗಳನ್ನು ಪಡೆದುಕೊಳ್ಳಲು ಪಡಿತರ ಚೀಟಿ ಕಡ್ಡಾಯ ಎಂಬ ನಿಯಮ ಜಾರಿಗೊಳಿಸಲಾಗಿದೆ. ಆದರೆ, ಫಲಾನು ಭವಿ ಇಲ್ಲದಿದ್ದರೂ ಕಾರ್ಡ್ ವಿತರಿಸುವ ನಿದರ್ಶನ ಹೆಚ್ಚುತ್ತಿದೆ. ದುರುಪ ಯೋಗ ತಡೆಗಟ್ಟಲು ಬಯೋಮೆಟ್ರಿಕ್ ವ್ಯವಸ್ಥೆ ಜಾರಿಗೆ ತಂದರೆ ಉತ್ತಮ ಎಂದು ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

One Reply to “ಅನರ್ಹರಿಗೂ ಆಯುಷ್ಮಾನ್: ಕೇಂದ್ರ -ರಾಜ್ಯದ ಮಹತ್ವದ ಆರೋಗ್ಯ ಯೋಜನೆ ದುರ್ಬಳಕೆ”

  1. ಆಯುಷ್ಮಾನ್ ಭಾರತ ಯೋಜನೆ ಸೇರದಂತೆ ಇತರೆ ಆರೋಗ್ಯ ಯೋಜನೆಗಳಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಾಗುವ ಬಡ ಜನರ ಬಳಿ ಹಣ ವಸೂಲಿಯನ್ನು ಮಾಡಲಾಗುತ್ತಿದೆ.

Comments are closed.