ಆಯುಷ್ಮಾನ್ ಭಾರತ್​-ಆರೋಗ್ಯ ಕರ್ನಾಟಕ ಯೋಜನೆ ದುರುಪಯೋಗ: ದುರ್ಬಳಕೆ ವಿರುದ್ಧ ಕಠಿಣ ಕ್ರಮ

ಬೆಂಗಳೂರು: ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆ ದುರ್ಬಳಕೆಯನ್ನು ಬಯಲಿಗೆಳೆದ ವಿಜಯವಾಣಿ ವರದಿಯಿಂದ ಎಚ್ಚೆತ್ತ ಆರೋಗ್ಯ ಇಲಾಖೆ, ಅಕ್ರಮಕ್ಕೆ ಸಹಕರಿಸಿದ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದೆ. ಫಲಾನುಭವಿಗಳಲ್ಲದ ಅನರ್ಹರಿಗೂ ಹಣಕ್ಕಾಗಿ ಕಾರ್ಡ್ ವಿತರಿಸುತ್ತಿರುವ ದಂಧೆ ರಾಜ್ಯದಲ್ಲಿ ರಾಜಾರೋಷವಾಗಿ ನಡೆಯುತ್ತಿರುವುದನ್ನು ವಿಜಯವಾಣಿ ಶುಕ್ರವಾರ ದಾಖಲೆ ಸಮೇತ ಪ್ರಕಟಿಸಿತ್ತು.

ಬಡವರು ಹಾಗೂ ಮಧ್ಯಮ ವರ್ಗದ ಜನರಿಗೆ ಉಚಿತ ಆರೋಗ್ಯ ಸೌಲಭ್ಯ ಒದಗಿಸಲು ಜಾರಿಗೆ ತಂದಿರುವ ‘ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ’ ಯೋಜನೆ ದುರ್ಬಳಕೆ ಕುರಿತು ವಿಜಯವಾಣಿ ವಿಶೇಷ ವರದಿ ಪ್ರಕಟಿಸಿದ ಬಳಿಕ ಎಚ್ಚೆತ್ತುಕೊಂಡಿರುವ ಆರೋಗ್ಯ ಇಲಾಖೆ, ದುರ್ಬಳಕೆ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ಕೊಟ್ಟಿದೆ.

‘ಅನರ್ಹರಿಗೂ ಆಯುಷ್ಮಾನ್’ ಶೀರ್ಷಿಕೆಯಲ್ಲಿ ವಿಜಯವಾಣಿ ಶುಕ್ರವಾರ(ಏ.26) ಮುಖಪುಟದಲ್ಲಿ ವರದಿ ಪ್ರಕಟಿಸಿತ್ತು. ಫಲಾನುಭವಿಗಳಿಂದ ನಿಗದಿಗಿಂತ ಹೆಚ್ಚು ಹಣ ವಸೂಲಿ ಮತ್ತು ಅನರ್ಹರಿಗೆ ಕಾರ್ಡ್ ನೀಡುವ ಅಧಿಕಾರಿಗಳ ವಿರುದ್ಧ ದೂರು ಬಂದರೆ ಅಮಾನತು ಮಾಡಲಾಗುವುದು ಎಂದು ಯೋಜನೆಯ ಜಂಟಿ ನಿರ್ದೇಶಕ ಡಾ.ಸಜ್ಜನ್ ಶೆಟ್ಟಿ ಸ್ಪಷ್ಟಪಡಿಸಿದ್ದಾರೆ.

ಸಮಗ್ರ ವರದಿ ನೀಡಿ: ಆಯಾ ಜಿಲ್ಲಾ ನೋಡಲ್ ಅಧಿಕಾರಿಗಳು ಖುದ್ದಾಗಿ ಪ್ರತಿ ಕಾರ್ಡ್ ವಿತರಣಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿ ಐದು ದಿನದೊಳಗೆ ಸಮಗ್ರ ವರದಿ ನೀಡಬೇಕು. ಯೋಜನೆಯ ಸೇವೆಗಳನ್ನು ಫಲಾನುಭವಿಗಳು ಪಡೆಯಲು ‘ಎಬಿ-ಎಆರ್​ಕೆ’ ಕಾರ್ಡ್​ಗಳನ್ನು ಸರ್ಕಾರಿ ವೈದ್ಯಕೀಯ ಕಾಲೇಜು, ಸಮುದಾಯ ಕೇಂದ್ರ, ಜಿಲ್ಲಾ ಮತ್ತು ತಾಲೂಕು ಸೇರಿ 220 ಸರ್ಕಾರಿ ಆಸ್ಪತ್ರೆಗಳು, 124 ಬೆಂಗಳೂರು ಒನ್ ಮತ್ತು ಕರ್ನಾಟಕ ಒನ್, 1131 ಸೇವಾ ಸಿಂಧು ಕೇಂದ್ರಗಳಲ್ಲಿ 10 ರೂ. ಶುಲ್ಕ ನೀಡಿ ಎ4 ಶೀಟ್ ಮಾಹಿತಿ ಮುದ್ರಿಸಿ ಅಥವಾ 35 ರೂ. ಶುಲ್ಕದೊಂದಿಗೆ ಪಿವಿಸಿ ಕಾರ್ಡ್ ನೀಡಲು ಆದೇಶಿಸಿದೆ. ಆದರೆ, ಕೆಲ ಸಂಸ್ಥೆಗಳು ಮತ್ತು ಏಜೆಂಟ್ ಕಾರ್ಡ್ ವಿತರಿಸಲು ಹಣ ವಸೂಲಿ ಮಾಡುತ್ತಿರುವುದು ಪತ್ರಿಕೆ ಮೂಲಕ ನಮ್ಮ ಗಮನಕ್ಕೆ ಬಂದಿದೆ. ಅಂಥವರನ್ನು ತಕ್ಷಣ ವಜಾ ಮಾಡಲಾಗುವುದು ಎಂದು ಸಜ್ಜನ್ ಶೆಟ್ಟಿ ತಿಳಿಸಿದ್ದಾರೆ. ಸೇವಾ ಸಿಂಧು ಕೇಂದ್ರಗಳ ವಿರುದ್ಧ ಹೆಚ್ಚು ದೂರುಗಳು ಕೇಳಿಬರುತ್ತಿರುವುದರಿಂದ ಸೋಮವಾರ (ಏ.29) ಆ ಕೇಂದ್ರದ ಅಧಿಕಾರಿಗಳ ಜತೆ ಸಭೆ ನಡೆಸಲಾಗುವುದು. ಮೂರು ಜಿಲ್ಲೆಗಳಲ್ಲಿ ಯೋಜನೆ ದುರ್ಬಳಕೆ ಸಂಬಂಧ ಪ್ರಕರಣ ದಾಖಲಾಗಿದ್ದು, ಸಿಬ್ಬಂದಿಯನ್ನು ಈಗಾಗಲೇ ವಜಾ ಮಾಡಲಾಗಿದೆ ಎಂದರು.

104ಕ್ಕೆ ಕರೆಮಾಡಿ ತಿಳಿಸಿ: ಯಾವುದೇ ಕೇಂದ್ರದಲ್ಲಿ ನಿಗದಿಗಿಂತ ಹೆಚ್ಚುವರಿ ಶುಲ್ಕ ಕೇಳಿದರೆ ಆರೋಗ್ಯ ಸಹಾಯವಾಣಿ 104ಕ್ಕೆ ಕರೆ ಮಾಡಿ ಎಂದು ಇಲಾಖೆ ಸಾರ್ವಜನಿಕರಿಗೆ ಸಲಹೆ ನೀಡಿದೆ.

ಇಬ್ಬರು ಏಜೆಂಟ್ ನಾಪತ್ತೆ

ನಿಯಮಬಾಹಿರವಾಗಿ ಜನರಿಂದ ಹಣ ಪಡೆದು ಅನರ್ಹರಿಗೆ ಕಾರ್ಡ್ ವಿತರಿಸುತ್ತಿದ್ದ ಏಜೆಂಟ್ ಮತ್ತು ಅವರೊಂದಿಗೆ ಕೈಜೋಡಿಸಿದ್ದ ಬೆಳಗಾವಿಯ ಕರ್ನಾಟಕ ಒನ್ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕ್ರಮಕೈಗೊಳ್ಳಲಾಗಿದೆ. ಏಜೆಂಟರ ಪೋಟೋ ಸ್ಟುಡಿಯೋ ಹಾಗೂ ಸೈಬರ್ ಕೆಫೆ ನಡೆಸುತ್ತಿದ್ದ ಗ್ರಾಮಗಳಿಗೆ ತೆರಳಿ ಸ್ಥಳೀಯರಿಂದ ಮಾಹಿತಿ ಪಡೆದ ಅಧಿಕಾರಿಗಳು

ಕಾರ್ಡ್​ಗಳನ್ನು ಪರಿಶೀಲಿಸಿ ಕಾಕತಿ ಠಾಣೆಯಲ್ಲಿ ಪ್ರಕರಣ ದಾಖಲಿಸಲು ನಿರ್ಧರಿಸಿದ್ದಾರೆ. ಸುಳಗಾ ಗ್ರಾಮದ ಏಜೆಂಟ್ ತನ್ನ ಸ್ಟುಡಿಯೋ ಬಾಗಿಲು ತೆರೆಯದೆ ಹಾಗೂ ತಾರಿಹಾಳದಲ್ಲಿ ಹಣ ಪಡೆದು ಕಾರ್ಡ್ ವಿತರಿಸುತ್ತಿದ್ದ ಏಜೆಂಟ್ ನಾಪತ್ತೆಯಾಗಿದ್ದೇನೆ. ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಅರ್ಜಿ ಪಡೆದು ಕಾರ್ಡ್ ಮಾಡಿಸಿಕೊಡುತ್ತಿದ್ದ ಅಭಿಷೇಕ ಎಂಬಾತನನ್ನು ಇತ್ತೀಚೆಗಷ್ಟೇ ಬಿಮ್್ಸ ನಿರ್ದೇಶಕರು ಅಮಾನತು ಮಾಡಿದ್ದಾರೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿ ವಿಜಯವಾಣಿಗೆ ತಿಳಿಸಿದರು.

ಉಚಿತ ಚಿಕಿತ್ಸೆ ನೀಡಲು ನಾವು ಕಾರ್ಡ್ ಕಡ್ಡಾಯಗೊಳಿಸಿಲ್ಲ. ಸರ್ಕಾರಿ ಆಸ್ಪತ್ರೆ ಸೇರಿ ಇತರೆ ಕೇಂದ್ರಗಳಲ್ಲಿ ಉಚಿತವಾಗಿ ಕಾರ್ಡ್ ಪಡೆಯಬಹುದು. ಕಡ್ಡಾಯವಾಗಿ ಬಯೋಮೆಟ್ರಿಕ್ ಮಾಡುವಂತೆ ಸಿಬ್ಬಂದಿಗೆ ಸೂಚಿಸುತ್ತೇವೆ.

| ಅಪ್ಪಾ ಸಾಹೇಬ ನರಹಟ್ಟಿ ಜಿಲ್ಲಾ ಆರೋಗ್ಯ ಅಧಿಕಾರಿ ಬೆಳಗಾವಿ.