ಆನ್​ಲೈನಲ್ಲೇ ಆಯುಷ್ಮಾನ್ ಶಿಫಾರಸು!

| ವಿಲಾಸ ಮೇಲಗಿರಿ

ಬೆಳಗಾವಿ: ಆರೋಗ್ಯ ಇಲಾಖೆ ಬಗ್ಗೆ ಜನರ ಅಸಮಾಧಾನ ಮತ್ತು ಜನಪ್ರತಿನಿಧಿಗಳ ಒತ್ತಡಕ್ಕೆ ಮಣಿದಿರುವ ರಾಜ್ಯ ಸರ್ಕಾರ ಒಂಭತ್ತು ತಿಂಗಳ ಬಳಿಕ ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಗೆ ಕಾಯಕಲ್ಪ ನೀಡಿದೆ. ಯಶಸ್ವಿನಿ ಯೋಜನೆ ಕೈಬಿಟ್ಟು ಆರೋಗ್ಯ ಕರ್ನಾಟಕ ರೂಪಿಸಿದ್ದ ಸರ್ಕಾರ ಬಡವರಿಗೆ ಆರೋಗ್ಯ ಕಾರ್ಡ್ ಒದಗಿಸಲು ವ್ಯವಸ್ಥಿತ ಜಾಲ ಸೃಷ್ಟಿಸಿದೆ. ಜತೆಗೆ ಈ ಯೋಜನೆಯಡಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಸರ್ಕಾರಿ ಆಸ್ಪತ್ರೆಗಳಿಂದ ಪಡೆಯಬೇಕಾದ ಶಿಫಾರಸನ್ನು ಇನ್ಮುಂದೆ ಆನ್​ಲೈನ್​ನಲ್ಲೇ ನೀಡುವ ನಿರ್ಧಾರಕ್ಕೆ ಬಂದಿದೆ.

ಉಚಿತ ಆರೋಗ್ಯ ಸೌಲಭ್ಯ ಕಲ್ಪಿಸುವ ಈ ಮಹತ್ವದ ಯೋಜನೆ 2018ರ ಮಾ.2ರಂದು ಜಾರಿಗೆ ಬಂದಿದೆ. ಕೇಂದ್ರದ ಆಯುಷ್ಮಾನ್ ಭಾರತವನ್ನು ಈ ಯೋಜನೆಯಲ್ಲಿ ವಿಲೀನಗೊಳಿಸಿ ‘ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ’ ಎಂಬ ಹೆಸರಿಡಲಾಗಿದೆ. ಆದರೆ ಯೋಜನೆಯಡಿ ಚಿಕಿತ್ಸೆ ಪಡೆಯಲು ಆರೋಗ್ಯ ಕಾರ್ಡ್ ಸಿಗುತ್ತಿಲ್ಲವೆಂದು ಬಡವರು ಅಳಲು ತೋಡಿಕೊಂಡಿದ್ದರು. ಈ ಬೇಡಿಕೆಗೆ ಕಿವಿಗೊಟ್ಟ ಸರ್ಕಾರ ಆಸ್ಪತ್ರೆಗಳ ಜತೆಗೆ ಬೆಂಗಳೂರು ಒನ್ ಹಾಗೂ ಕರ್ನಾಟಕ ಒನ್​ಗಳಲ್ಲೂ ಕಾರ್ಡ್ ವಿತರಣೆಗೆ ಸಜ್ಜಾಗಿದೆ.

ಈಗಾಗಲೇ ಪ್ರಾಯೋಗಿಕ ಪರೀಕ್ಷೆ ಪೂರ್ಣಗೊಂಡಿದ್ದು, ಕೆಲವೇ ದಿನಗಳಲ್ಲಿ ಈ ಕೇಂದ್ರಗಳಲ್ಲಿ ಫಲಾನುಭವಿಗಳ ಕೈಗೆ ಕಾರ್ಡ್​ಗಳು ಸಿಗಲಿವೆ.

ಏನೇನು ಸೌಲಭ್ಯ?: ಬಿಪಿಎಲ್ ಕಾರ್ಡದಾರರು 5 ಲಕ್ಷ ರೂ.ವರೆಗೆ, ಎಪಿಎಲ್ ಕಾರ್ಡದಾರರು 1.50 ಲಕ್ಷ ರೂ.ವರೆಗೆ ನಗದುರಹಿತ ಉಚಿತ ಚಿಕಿತ್ಸೆ ಸೌಲಭ್ಯ ಪಡೆಯಬಹುದಾಗಿದೆ.

ಚಿಕಿತ್ಸೆಗಳ ಸಂಖ್ಯೆ ಹೆಚ್ಚು: ಆರೋಗ್ಯ ಕರ್ನಾಟಕದಡಿ 1,528 ಚಿಕಿತ್ಸೆಗಳನ್ನು ಗುರುತಿಸಲಾಗಿತ್ತು. ಆಯುಷ್ಮಾನ್ ಭಾರತ್ ಯೋಜನೆ ವಿಲೀನದ ತರುವಾಯ 96 ಚಿಕಿತ್ಸೆಗಳನ್ನು ಹೆಚ್ಚುವರಿಯಾಗಿ ಸೇರಿಸಿ ಒಟ್ಟು 1,614 ಚಿಕಿತ್ಸೆಗಳಿಗೆ ಯೋಜನೆಯ ಸವಲತ್ತು ಕಲ್ಪಿಸಲಾಗುತ್ತದೆ.

ಶಿಫಾರಸು ಸುಲಭ

ಯೋಜನೆ ಸವಲತ್ತು ಪಡೆಯಲು ರೋಗಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವುದು ಕಡ್ಡಾಯವಾಗಿತ್ತು. ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸಾ ಸೌಲಭ್ಯವಿಲ್ಲದಿದ್ದಾಗ ಖಾಸಗಿ ಆಸ್ಪತ್ರೆಗೆ ಶಿಫಾರಸು ಮಾಡಲಾಗುತ್ತದೆ. ಈ ಶಿಫಾರಸನ್ನು ಇನ್ನು ಮುಂದೆ ಆನ್​ಲೈನ್​ನಲ್ಲಿ ಮಾಡಲಾಗುತ್ತದೆ. ಇದರಿಂದ ರೋಗಿ ಶಿಫಾರಸು ಪತ್ರಕ್ಕೆ ಕಾಯುವ ಅಗತ್ಯವಿರುವುದಿಲ್ಲ.

ಕಾರ್ಡ್ ಬೇಕಿಲ್ಲ

ಯೋಜನೆಯ ಸೌಲಭ್ಯ ಪಡೆಯಲು ಆರೋಗ್ಯ ಕಾರ್ಡ್ ಬೇಕೆಂದೇನೂ ಇಲ್ಲ. ಬಿಪಿಎಲ್ ಅಥವಾ ಎಪಿಎಲ್ ಕಾರ್ಡ್ ಇದ್ದರೂ ತಕ್ಷಣ ಚಿಕಿತ್ಸೆ ದೊರೆಯುತ್ತದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಯೋಜನೆಯಡಿ ಜೂನ್ ತಿಂಗಳಿಂದ ಇದುವರೆಗೆ 62,162 ಮಂದಿ ಚಿಕಿತ್ಸಾ ಸೌಲಭ್ಯ ಪಡೆದಿದ್ದು, ಒಟ್ಟು 197 ಕೋಟಿ ರೂ. ವೆಚ್ಚ ಭರಿಸಲಾಗಿದೆ.

ಸರ್ಕಾರಿ ಆಸ್ಪತ್ರೆಗೂ ಲಾಭ

ಖಾಸಗಿ ಆಸ್ಪತ್ರೆಗಳ ಜತೆಗೆ ಸರ್ಕಾರಿ ಆಸ್ಪತ್ರೆಗಳಿಗೂ ಯೋಜನೆಯಿಂದ ಲಾಭವಾಗಲಿದೆ. ಸಾಮಾನ್ಯ ದ್ವಿತೀಯ ಹಂತದ 291 ಚಿಕಿತ್ಸೆಗಳಿಗೆ ನಿಗದಿಯಾಗಿರುವ ಪ್ಯಾಕೇಜ್ ದರದಲ್ಲಿ ಶೇ.50 ಹಣ ಸರ್ಕಾರಿ ಆಸ್ಪತ್ರೆಗಳಿಗೂ ದೊರೆಯಲಿದೆ.

ಹೆಚ್ಚುವರಿ ಕೌಂಟರ್

ಈಗಾಗಲೇ ರಾಜ್ಯಾದ್ಯಂತ 11 ಪ್ರಮುಖ ಆಸ್ಪತ್ರೆಗಳಲ್ಲಿ ಹೆಲ್ತ್​ಕಾರ್ಡ್ ವಿತರಿಸಲಾಗುತ್ತಿದೆ. ಅದರ ಜತೆಗೆ ಪ್ರತಿ ಜಿಲ್ಲಾ ಆಸ್ಪತ್ರೆಯಲ್ಲಿ 4 ಕೌಂಟರ್, ತಾಲೂಕು ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ತಲಾ ಒಂದು ಕೌಂಟರ್ ತೆರೆಯುವ ಸಂಬಂಧ ಆರೋಗ್ಯ ಇಲಾಖೆ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸುತ್ತೋಲೆ ಹೊರಡಿಸಿದೆ.

ಕಾರ್ಡ್​ಗೆ 35 ರೂ.

ಬೆಂಗಳೂರು ಒನ್, ಕರ್ನಾಟಕ ಒನ್​ನ 99 ಕೇಂದ್ರಗಳಲ್ಲಿ ಕಾರ್ಡ್ ಸೌಲಭ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ. 35 ರೂ. ಶುಲ್ಕ ಪಾವತಿಸಿ ಕಾರ್ಡ್ ಪಡೆಯಬಹುದು. ರಾಜ್ಯದ 1.32 ಕೋಟಿ ಕುಟುಂಬಗಳ 4.50 ಕೋಟಿ ಜನರು ಈ ಯೋಜನೆ ವ್ಯಾಪ್ತಿಗೆ ಬರುತ್ತಾರೆ.ಆಸ್ಪತ್ರೆಗಳಿಗೆ ಬರುವ ರೋಗಿಗಳ ಹೆಸರು ನೋಂದಣಿ ಮಾಡಿಕೊಂಡು ಯೂನಿಕ್ ಐಡಿ ಸೃಷ್ಟಿಸಿ, ಆಯುಷ್ಮಾನ್ ಭಾರತ್- ಆರೋಗ್ಯ ಕರ್ನಾಟಕ ಪೋರ್ಟಲ್​ನಲ್ಲಿ ನೋಂದಣಿ ಮಾಡಿ ಎ-4 ಸೀಟ್​ನಲ್ಲಿ ವಿವರ ಮುದ್ರಿಸಿಕೊಡಲಾಗುತ್ತದೆ. ಇದಕ್ಕೆ 10 ರೂ. ಶುಲ್ಕ ನಿಗದಿಪಡಿಸಲಾಗಿದೆ. ತರುವಾಯ ನೇರವಾಗಿ ಫಲಾನುಭವಿಗಳ ಮನೆಗೆ ಕಾರ್ಡ್ ತಲುಪಿಸಲಾಗುತ್ತದೆ.

Leave a Reply

Your email address will not be published. Required fields are marked *