ಆಯುಷ್ಮಾನ್​ ಭಾರತಕ್ಕೆ ಚಾಲನೆ; ದೇಶದ ಜನರ ಭವಿಷ್ಯಕ್ಕೊಂದು ಆಶಾಕಿರಣ

ನವದೆಹಲಿ: ವಿಶ್ವದಲ್ಲೇ ಅತಿ ದೊಡ್ಡ ಸರ್ವಜನಿಕ ಆರೋಗ್ಯ ವಿಮಾ ಯೋಜನೆ ಎನಿಸಿಕೊಂಡಿರುವ ಭಾರತ ಸರ್ಕಾರದ ಮಹತ್ವಕಾಂಕ್ಷಿ ಯೋಜನೆ ಆಯುಷ್ಮಾನ್​ ಭಾರತ ರಾಷ್ಟ್ರೀಯ ಆರೋಗ್ಯ ಸುರಕ್ಷಾ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಇಂದು ರಾಂಚಿಯಲ್ಲಿ ಉದ್ಘಾಟಿಸಿದರು.

ನಂತರ ಮಾತನಾಡಿ, ಇಂದು ಇಡೀ ದೇಶದ ಗಮನ ರಾಂಚಿಯತ್ತ ಇದೆ. ದೇಶದ 400 ಕ್ಕೂ ಹೆಚ್ಚು ಜಿಲ್ಲೆಗಳಲ್ಲೂ ಆಯುಷ್ಮಾನ್​ ಯೋಜನೆ ಜಾರಿಗೊಳ್ಳಲಿದೆ. ಕಟ್ಟ ಕಡೆಯ ವ್ಯಕ್ತಿಯೂ ಉತ್ತಮ ಆರೋಗ್ಯ ವ್ಯವಸ್ಥೆ ಹೊಂದುವಂತಾಗಬೇಕು. ಆಯುಷ್ಮಾನ್​ ಭಾರತ ಯೋಜನೆಯಿಂದ ಸುಮಾರು 50 ಕೋಟಿ ಜನರು, 5 ಲಕ್ಷ ರೂ.ವರೆಗೆ ವಿಮಾ ಸೌಲಭ್ಯ ಪಡೆಯಲಿದ್ದಾರೆ ಎಂದು ಹೇಳಿದರು.

ಈ ವಿಮಾ ಯೋಜನೆ ದೇಶದ 476 ಜಿಲ್ಲೆಗಳಲ್ಲಿ ಏಕಕಾಲದಲ್ಲಿ ಪ್ರಾರಂಭಗೊಳ್ಳಲಿದ್ದು, 10.74 ಕೋಟಿ ಕುಟುಂಬಗಳಿಗೆ ಅನುಕೂಲವಾಗಿದೆ. ಆಯುಷ್ಮಾನ್​ ಭಾರತ ಯೋಜನೆಯು ಜನರ ಕಷ್ಟಕಾಲದಲ್ಲಿ ಅದೃಷ್ಟದಂತೆ ಕೈ ಹಿಡಿಯಲಿದೆ. ಯೋಜನೆ ಅನುಷ್ಠಾನದ ಹಾದಿ ಸುಲಭದ್ದಾಗಿರಲಿಲ್ಲ. ಆರು ತಿಂಗಳಲ್ಲಿ ರೂಪುರೇಷೆ ತಯಾರಿಸಲಾಗಿದೆ. ಯಶಸ್ವಿಯಾಗಿ ಜಾರಿಯಾಗಲು ಸಹಕರಿಸಿದ ನನ್ನ ತಂಡದ ಎಲ್ಲ ಸದಸ್ಯರಿಗೂ ತುಂಬು ಹೃದಯದ ವಂದನೆಗಳನ್ನು ಸಲ್ಲಿಸುತ್ತೇನೆ ಎಂದರು.

ಆಯುಷ್ಮಾನ್​ ಭಾರತ ಯೋಜನೆಯಡಿ ಸೌಲಭ್ಯ ಪಡೆಯಲು ಯಾವುದೇ ನೋಂದಣಿಯ ಅಗತ್ಯವಿಲ್ಲ. ಇ-ಕಾರ್ಡ್​ನಲ್ಲಿ ಎಲ್ಲ ವಿವರಗಳು ಇರುತ್ತವೆ ಎಂದು ಹೇಳಿದರು.

ನನ್ನ ದೇಶದ ಪ್ರತಿಯೊಬ್ಬ ಪ್ರಜೆಯೂ ಸದಾ ಆರೋಗ್ಯದಿಂದ ಇರಬೇಕು ಎಂದು ಬಯಸುತ್ತೇನೆ. ಒಮ್ಮೆ ಯಾರಿಗಾದರೂ ಏನಾದರೂ ತೊಂದರೆಯಾದರೆ ಆಯುಷ್ಮಾನ್​ ಭಾರತ ಕಾಳಜಿ ವಹಿಸುತ್ತದೆ ಎಂದು ಭರವಸೆ ನೀಡಿದರು.

ಆಯುಷ್ಮಾನ್​ ಭಾರತ ಯೋಜನೆಯನ್ನು ಕಾರ್ಯಗತಗೊಳಿಸಲು ಈಗಾಗಲೇ 31 ರಾಜ್ಯಗಳು, ಕೇಂದ್ರಾಳಿತ ಪ್ರದೇಶಗಳು ಒಪ್ಪಂದ ಮಾಡಿಕೊಂಡಿವೆ. ಯೋಜನೆಯಡಿ ದೇಶಾದ್ಯಂತ 1.5 ಲಕ್ಷ ಆರೋಗ್ಯ, ಕ್ಷೇಮ ಕೇಂದ್ರಗಳನ್ನು ಉದ್ಘಾಟಿಸಲಾಗುತ್ತಿದೆ.