ಆಯುಷ್​ ಇಲಾಖೆಯಲ್ಲಿ ಅಕ್ರಮ: ಇ ಮೇಲ್​ನಿಂದ ಬಯಲಾದ ಬೃಹತ್​ ಹಗರಣ

ಬೆಂಗಳೂರು: ಅಧಿಕಾರಿಯೊಬ್ಬರ ತೇಜೋವಧೆಗೆ ರವಾನಿಸಿದ ಇಮೇಲ್​ನಿಂದ ಆಯುಷ್​ ಇಲಾಖೆಯ ದೊಡ್ಡ ಹಗರಣ ಬೆಳಕಿಗೆ ಬಂದಿದೆ.

ಗುತ್ತಿಗೆದಾರನ ಇ ಮೇಲ್​ ಮತ್ತು ಪಾಸ್​ವರ್ಡ್​ ಬಳಕೆ ಮಾಡಿ ಆಯುಷ್​ ಇಲಾಖೆಯ ಅಧಿಕಾರಿಗಳ ಮೇಲೆ ಸುಳ್ಳು ಆರೋಪ ಹೊರಿಸಿ ಆರೋಗ್ಯ ಇಲಾಖೆಯ ಮುಖ್ಯ ಕಾರ್ಯದರ್ಶಿಗೆ ಮೇಲ್​ ರವಾನಿಸಲಾಗಿತ್ತು. ಗುತ್ತಿಗೆದಾರನ ಇ ಮೇಲ್​ ಆಯುಷ್​ ಇಲಾಖೆಯ ಕಂಪ್ಯೂಟರ್​ನಿಂದಲೇ ಬೆಳಕಿಗೆ ಬಂದಿತ್ತು.

ಈ ಮೇಲ್​​ನ ಜಾಡು ಹಿಡಿದು ಪ್ರಾಥಮಿಕ ತನಿಖೆ ನಡೆಸಿದಾಗ ಗುತ್ತಿಗೆದಾರರ ಟೆಂಡರ್​ಗಳನ್ನು ಸರ್ಕಾರಿ ಅಧಿಕಾರಿಗಳೇ ಸಲ್ಲಿಸುತ್ತಿದ್ದ ಅಂಶ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಆಯುಷ್​ ಇಲಾಖೆಯಲ್ಲಿ ಕಳೆದ ಐದು ವರ್ಷದಲ್ಲಿ ಕರೆದಿರುವ ಟೆಂಡರ್​ಗಳ ಬಗ್ಗೆ ತನಿಖೆ ನಡೆಸುವಂತೆ ಆರೋಗ್ಯ ಇಲಾಖೆಯ ಮುಖ್ಯ ಕಾರ್ಯದರ್ಶಿ ಲೋಕಾಯುಕ್ತಕ್ಕೆ ಶಿಫಾರಸು ಮಾಡಿದ್ದಾರೆ.

ಅದರಂತೆ ಇದೀಗ ಲೋಕಾಯುಕ್ತ ಸಂಸ್ಥೆ ಆಯುಷ್​ ಇಲಾಖೆ ಐದು ವರ್ಷ ಕರೆದಿರುವ ಟೆಂಡರ್​ಗಳ ಬಗ್ಗೆ ತನಿಖೆ ಆರಂಭಿಸಿದೆ. ಇನ್ನು ಲೋಕಾಯುಕ್ತ ಸಂಸ್ಥೆ ಸ್ವಯಂ ಪ್ರೇರಿತ ತನಿಖೆ ಆರಂಭಿಸುತ್ತಿದ್ದಂತೆ, ಆಯುಷ್​ ಇಲಾಖೆಯ ಅಕ್ರಮದಲ್ಲಿ ಶಾಮೀಲಾಗಿರುವ ಮೂವರು ಅಧಿಕಾರಿಗಳಾದ, ಎಸ್​. ನಿರಂಜನ್​ ಕುಮಾರ್​, ಗಂಗಾಧರಯ್ಯ ಹಾಗೂ ಆರ್​. ಆನಂದ್​ ಅವರನ್ನು ಎತ್ತಂಗಡಿ ಮಾಡಲಾಗಿದೆ. (ದಿಗ್ವಿಜಯ ನ್ಯೂಸ್)

Leave a Reply

Your email address will not be published. Required fields are marked *