ಹೀಗೂ ಬರುವ ರೋಗಗಳು!

|ಡಾ. ಗಿರಿಧರ ಕಜೆ

ಆಧಿಯೆಂದರೆ ಮೂಲವಲ್ಲ. ಆಧಿ ಎಂದರೆ ಸಂಬಂಧಿ. ಆಧಿ ಆತ್ಮಕ, ಆಧಿ ಭೌತಿಕ, ಆಧಿ ದೈವಿಕ ಎಂಬ ಮೂರು ಪ್ರಮುಖ ಕಾರಣಗಳಿಂದ ವ್ಯಾಧಿಗಳು ಮನುಷ್ಯರನ್ನು ಬಾಧಿಸುತ್ತವೆ ಎಂದು ಆಯುರ್ವೆದ ವಿಸ್ತೃವಾಗಿ ವಿವರಿಸಿದೆ. ಆಧಿ ದೈವಿಕ ಎಂದಾಕ್ಷಣ ಜನರನ್ನು ಪೊರೆಯಬೇಕಾದ ದೇವರಿಂದಲೂ ಕಾಯಿಲೆ ಬರುತ್ತದೆಯೋ ಎಂಬ ಗುಮಾನಿ ಹುಟ್ಟಿಕೊಳ್ಳುತ್ತದೆ. ವೈದ್ಯರು ‘ನಮ್ಮ ಕೈಲಾದಷ್ಟು ಮಾಡುತ್ತೇವೆ’ ಎನ್ನುವ ಕೈಯಲ್ಲಾಗದ, ಕೈಗೆಟುಕದ, ಕೈಚೆಲ್ಲುವ ಸಂದರ್ಭಗಳೆಲ್ಲ ಈ ಆಧಿ ದೈವಿಕ ವರ್ಗೀಕರಣದಲ್ಲಿ ಅಂತರ್ಗತವಾಗಿದೆ. ಇಲ್ಲಿ ಮತ್ತೆ ಕಾಲಬಲ, ದೈವಬಲ, ಸ್ವಭಾವಬಲ ಎಂಬ ಮೂರು ವಿಭಾಗ ಮಾಡಲಾಗಿದೆ! ಈ ವಿಚಾರಗಳನ್ನು ಅಲ್ಪಸ್ವಲ್ಪ ತಿಳಿದುಕೊಂಡರೂ ‘ಎಲ್ಲವೂ ಸರಿಯಾಗಿಯೇ ಇದೆ, ಯಾಕಪ್ಪಾ ಈ ಕಾಯಿಲೆ?’ ಎಂದು ಪರಿಪರಿಯಾಗಿ ಪರಿತಪಿಸುವುದು ಪರಿಹಾರವಾಗುತ್ತದೆ.

ಹವಾಮಾನ ವೈಪರೀತ್ಯ ಎನ್ನುವುದು ಪ್ರಕೃತಿಯಲ್ಲಿ ಕಂಡುಬರುವ ಅವಿಭಾಜ್ಯ ಬದಲಾವಣೆ. ಕಡುಬೇಸಿಗೆಯಲ್ಲಿ ಹಠಾತ್ತನೆ ಮಳೆ ಹುಯ್ದರೆ ಒಂದು ಕ್ಷಣ ಅಚ್ಚರಿಯಾದರೂ ಇದೇನು ಕಂಡೇ ಕಾಣದಂಥ ವಿದ್ಯಮಾನವಲ್ಲ. ಜೀವನದಲ್ಲಿ ಹಲವಾರು ಬಾರಿ ಇಂತಹ ಅನುಭವ ಆಗುತ್ತಲೇ ಇರುತ್ತದೆ. ತೀವ್ರ ಚಳಿಗಾಲದಲ್ಲಿ ಒಂದೆರಡು ದಿನ ಬೆವರಿಳಿಸುವ ಸೆಕೆ ಉಂಟಾದರೂ ಹೀಗೆಯೇ ಅನಿಸುತ್ತದೆ. ಮಳೆಗಾಲದಲ್ಲಿ ಮಳೆಯೇ ಬಾರದೆ ತೀವ್ರ ಬರಗಾಲ ಉಂಟಾದರೂ ಹಲವಾರು ತೊಂದರೆಗಳುಂಟಾಗುತ್ತವೆ. ಇವೆಲ್ಲ ಪರಿಸರದಲ್ಲಿ ಗೋಚರಿಸುವ ವಿಕೃತಿಗಳು. ಇವು ಜನಸಮೂಹದ ಸ್ವಾಸ್ಥ್ಯ ಮೇಲೆ ಪರಿಣಾಮ ಬೀರಿ ಅನೇಕ ರೋಗಗಳ ಉತ್ಪತ್ತಿಗೆ ಕಾರಣವಾಗುತ್ತವೆ. ಇದನ್ನು ಆಯುರ್ವೆದದಲ್ಲಿ ವ್ಯಾಪನ್ನ ಋತುಕೃತ ಎಂದಿದ್ದಾರೆ. ಹವಾಮಾನ ಸರಿಯಾಗಿದ್ದರೂ ರೋಗಗಳು ಬರುತ್ತವೆ! ಇಲ್ಲೇ ಇರುವುದು ಆಯುರ್ವೆದ ಚಿಂತನೆಯ ವೈಶಿಷ್ಟ್ಯ. ವೃದ್ಧರಾದಾಗ ದೇಹದಲ್ಲಿ ವಾತದ ಅಂಶ ಹೆಚ್ಚಾಗುತ್ತದೆ. ಮಳೆಗಾಲದಲ್ಲಿ ವಾತ ಬಾಹುಳ್ಯವಿರುತ್ತದೆ. ವ್ಯಕ್ತಿಯೂ ವಾತ ಶರೀರ ಪ್ರಕೃತಿಯವರು ಎಂದಾದರೆ ತ್ರಿವಾತ ಸಂಗಮ! ಪರಿಣಾಮವೆಂದರೆ ಬಹುತೇಕ ಮಳೆಗಾಲದಲ್ಲೇ ಇಂಥ ವೃದ್ಧರು ಪಾರ್ಶ್ವವಾಯು ಪೀಡಿತರಾಗುವುದನ್ನು ಕಾಣುತ್ತೇವೆ! ಋತುಸ್ವಭಾವದ ಪರಿಣಾಮದಿಂದ ಬರುವ ತೊಂದರೆಗಳಿಗೆ ಅವ್ಯಾಪನ್ನ ಋತುಕೃತ ವ್ಯಾಧಿ ಎನ್ನಲಾಗಿದೆ.

ಸಿಡಿಲು ಬಡಿದು ಆಗುವ ಏರುಪೇರುಗಳು, ಜನಪದವನ್ನೇ ಧ್ವಂಸಗೊಳಿಸುವ ಸಾಂಕ್ರಾಮಿಕ ಅಂಟುಜಾಡ್ಯಗಳು, ರೋಗಕಾರಕ ಸೂಕ್ಷ್ಮಾಣುಜೀವಿಗಳಿಂದ ಒಮ್ಮಿಂದೊಮ್ಮೆಲೆ ಹರಡಿ ಯಾತನೆ ನೀಡಿ ಸಮಾಜದ ಧೃತಿಗೆಡಿಸುವ ಕಾಯಿಲೆಗಳನ್ನೆಲ್ಲ ಒಟ್ಟಾಗಿ ವಿದ್ಯುದಶನಿ ಕೃತ ಹಾಗೂ ಪಿಶಾಚಾದಿಗಳಿಂದ ಬರುವ ರೋಗಗಳೆಂದು ಆಯುರ್ವೆದ ಗ್ರಂಥಗಳಲ್ಲಿ ಹೇಳಿದ್ದಾರೆ. ಸಮಾಜದ ಸ್ವಾಸ್ಥ್ಯ್ಕೆ ಬಾಧಕವಾಗಿರುವ ವಿಕೃತ ಸೂಕ್ಷ್ಮಾಣುಜೀವಿಗಳಿಗೆ ಪಿಶಾಚಾದಿ ಎಂಬ ಪದ ಪ್ರಯೋಗಿಸಿರುವುದು ಪಿಶಾಚಿ ಶಬ್ದದ ನಿಜಾರ್ಥವನ್ನೂ ಹೊರಗೆಡಹಿದೆ. ಹಸಿವೆ, ಬಾಯಾರಿಕೆ, ವೃದ್ಧಾಪ್ಯ, ನಿದ್ರೆಗಳು ಕಾಲಕಾಲಕ್ಕೆ ಆಗದಿದ್ದರೆ ಅಥವಾ ಸಕಾಲದಲ್ಲಿದ್ದರೂ ಅವುಗಳಿಂದ ಉತ್ಪತ್ತಿಯಾಗುವ ರೋಗಗಳಿಗೆ ಸ್ವಭಾವ ಬಲಕೃತ ಎಂಬ ಸಂಜ್ಞೆ ನೀಡಲಾಗಿದೆ. ಆಧುನಿಕ ಯುಗದಲ್ಲಿ ಅನೇಕರು ಬಹುಪಟ್ಟು ಸಂಬಳ ಪಡೆಯುತ್ತ, ಹಗಲೂರಾತ್ರಿ ತಲೆಬಿಸಿ ಮಾಡಿಕೊಂಡು ಜಂಜಾಟದಲ್ಲಿ ಬದುಕನ್ನು ಸವೆಸುತ್ತಿರುವ ಸನ್ನಿವೇಶ ನಮ್ಮ ಮುಂದಿದೆ. ಇಂಥವರಿಗೆ ವೃದ್ಧಾಪ್ಯವೂ, ರೋಗಗಳೂ ಊಹೆಗೂ ನಿಲುಕದಷ್ಟು ವೇಗದಲ್ಲಿ ವ್ಯಾಪಿಸುತ್ತಿರುವುದೂ ಅಷ್ಟೇ ವಾಸ್ತವ.

ಪಂಚಸೂತ್ರಗಳು

ಶತಾವರಿ ಬೇರು: ನರಮಂಡಲಕ್ಕೆ ಶಕ್ತಿ ಪ್ರದಾಯಕ.

ಪಪ್ಪಾಯ ಹಣ್ಣು: ಶಿಲೀಂದ್ರಗಳ ಸೋಂಕು ಗುಣಕಾರಿ.

ಎಲೆಕೋಸು: ಮೂತ್ರಸೋಂಕು ಶಮನಕರ.

ತೊಗರಿಸೊಪ್ಪು: ಬಾಯಿಹುಣ್ಣು ಶಮನಕ್ಕೆ ಉಪಯುಕ್ತ.

ಚಹಾಎಲೆ: ಕಣ್ಣುಗಳಿಗೆ ಹಿತಕಾರಿ.

ಮುಳ್ಳುಹರಿವೆಸೊಪ್ಪಿನ ನಾಲ್ಕು ಚಮಚ ರಸ ನಿತ್ಯಸೇವನೆಯಿಂದ ಸ್ತ್ರೀಯರಲ್ಲಿ ಬಿಳಿಸೆರಗು ಹತೋಟಿಯಾಗುವುದು.