ರಾಮಮಂದಿರ ನಿರ್ಮಾಣಕ್ಕೆ ಕಾಯಿದೆ: ಕೇಂದ್ರ ಸರ್ಕಾರದ ವಿರುದ್ಧ ಆರ್​ಎಸ್​ಎಸ್​ ಅಸಮಾಧಾನ

ಮುಂಬೈ: ರಾಮಮಂದಿರ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಬಿಜೆಪಿ ಕೇಂದ್ರ ಸರ್ಕಾರದ ನಡೆಯನ್ನು ಆರ್​ಎಸ್​ಎಸ್​ ಪ್ರಶ್ನಿಸಿದ್ದು, ಗುಜರಾತ್​ನಲ್ಲಿ ಸರ್ದಾರ್​ ವಲ್ಲಭಭಾಯಿ ಪಟೇಲರ ಅತಿದೊಡ್ಡ ಪ್ರತಿಮೆ ಸ್ಥಾಪಿಸಲು ಸಾಧ್ಯವಾಗುವುದಾದರೆ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಕಾಯ್ದೆಯನ್ನು ಜಾರಿಗೊಳಿಸಲು ಯಾಕೆ ಸಾಧ್ಯವಿಲ್ಲ ಎಂದು ಕೇಳಿದೆ.

ಸಾರ್ವಜನಿಕ ರ‍್ಯಾಲಿಯಲ್ಲಿ ಮಾತನಾಡಿದ ಆರ್​ಎಸ್​ಎಸ್​ನ ಹಿರಿಯ ಮುಖಂಡ ದತ್ತಾತ್ರೇಯ ಹೊಸಬಾಳೆ, ಅಯೋಧ್ಯೆ ರಾಮಮಂದಿರ ನಿರ್ಮಾಣ ಸಂಬಂಧ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್​ನಲ್ಲಿ ಪ್ರತ್ಯೇಕ ಪೀಠವನ್ನೇ ರಚಿಸಲಾಗಿದೆ. ಆದರೆ, ಇದುವರೆಗೂ ನಿರ್ಧಾರ ತೆಗೆದುಕೊಳ್ಳಲು ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಪುರಾತತ್ವ ಇಲಾಖೆ ಸಮೀಕ್ಷೆಯಲ್ಲಿ ದೇವಾಲಯದ ಅವಶೇಷಗಳು ಕಂಡುಬಂದರೆ ಆ ಭೂಮಿಯನ್ನು ರಾಮಮಂದಿರ ನಿರ್ಮಾಣಕ್ಕೆ ಬಿಟ್ಟುಕೊಡಬೇಕು ಎಂದು ಮಾಜಿ ಪ್ರಧಾನಿ ಪಿ.ವಿ.ನರಸಿಂಹ ರಾವ್​ ಅವರು ಸುಪ್ರೀಂಕೋರ್ಟ್​ನಲ್ಲಿ ಹೇಳಿದ್ದರು. ಈಗ ಉತ್ಖನನದ ವೇಳೆ ದೇಗುಲದ ಅವಶೇಷಗಳು ಸಿಕ್ಕಿವೆ. ಆದರೆ ಸುಪ್ರೀಂಕೋರ್ಟ್​ ಮಾತ್ರ ಇನ್ನೂ ಕೂಡ ಅಯೋಧ್ಯೆ ವಿವಾದ ನಮ್ಮ ವಿಚಾರಣಾ ಪಟ್ಟಿಯಲ್ಲಿ ಪ್ರಮುಖವಲ್ಲ ಎಂದಿದೆ ಎಂದು ಹೇಳಿದರು.

ಅಯೋಧ್ಯಾದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಸುಗಮವಾಗುವಂತೆ ಕೇಂದ್ರ ಸರ್ಕಾರ ಒಂದು ಕಾನೂನನ್ನು ಜಾರಿ ಮಾಡಬೇಕು ಎಂದು ಆರ್​ಎಸ್​ಎಸ್​ ಮುಖಂಡ ಮೋಹನ್​ ಭಾಗ್ವತ್​ ಅವರು ಅಕ್ಟೋಬರ್​ನಲ್ಲಿ ನಡೆದ ವಿಜಯದಶಮಿ ಮೆರವಣಿಗೆಯಲ್ಲಿ ಆಗ್ರಹಿಸಿದ್ದರು.