ಅಯೋಧ್ಯೆಯಲ್ಲಿ ರಾಮಮಂದಿರ ಬೇಡ, ವಿಶ್ವವಿದ್ಯಾಲಯ ಕಟ್ಟಬೇಕು: ದೆಹಲಿ ಡಿಸಿಎಂ ಸಿಸೋಡಿಯಾ

ನವದೆಹಲಿ: ಅಯೋಧ್ಯೆಯ ಬಾಬ್ರಿ ಮಸೀದಿ-ರಾಮಮಂದಿರ ವಿವಾದಿತ ಸ್ಥಳದಲ್ಲಿ ಒಂದು ವಿಶ್ವವಿದ್ಯಾಲಯ ಕಟ್ಟುವುದು ಒಳಿತು ಎಂದು ದೆಹಲಿ ಉಪಮುಖ್ಯಮಂತ್ರಿ ಮನೀಶ್​ ಸಿಸೋಡಿಯಾ ಹೇಳಿದ್ದಾರೆ.

ರಾಮ ರಾಜ್ಯ ಸ್ಥಾಪನೆಯಾಗುವುದು ಶಿಕ್ಷಣದಿಂದ ಹೊರತು ಭವ್ಯವಾಗಿ ದೇವಸ್ಥಾನ ಕಟ್ಟುವುದರಿಂದ ಅಲ್ಲ. ಇಲ್ಲಿ ವಿಶ್ವವಿದ್ಯಾಲಯ ನಿರ್ಮಾಣ ಮಾಡಬೇಕು. ನನ್ನ ಈ ನಿಲುವಿಗೆ ಹಿಂದು ಮತ್ತು ಮುಸ್ಲಿಮರ ಸಮ್ಮತಿ ಬೇಕು ಎಂದು ಹೇಳಿಕೆ ನೀಡಿದ್ದಾರೆ.

ಅಯೋಧ್ಯೆಯಲ್ಲಿ ವಿಶ್ವವಿದ್ಯಾನಿಲಯ ಸ್ಥಾಪನೆಯಾದರೆ ಹಿಂದು, ಮುಸ್ಲಿಂ, ಕ್ರಿಶ್ಚಿಯನ್​, ಭಾರತೀಯರು, ವಿದೇಶಿಗರು ಸೇರಿ ಎಲ್ಲ ಸಮುದಾಯದವರೂ ಬರುತ್ತಾರೆ. ರಾಮನ ಆದರ್ಶಗಳನ್ನು ಅಲ್ಲಿಂದಲೇ ಎತ್ತಿಹಿಡಿಯಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ದೇಶದ ರಾಜಕೀಯದಲ್ಲಿ ನಡೆಯುತ್ತಿರುವ ಜಾತೀಯತೆ ಬಗ್ಗೆ ಮಾತನಾಡಿದ ಸಿಸೋಡಿಯಾ, ನಾನು ಜಪಾನ್​ ಯೂನಿವರ್ಸಿಟಿಗೆ ಭೇಟಿ ಕೊಟ್ಟಾಗ ಅಲ್ಲಿನ ವಿದ್ಯಾರ್ಥಿಗಳು, ಕಾರನ್ನು ಹೈಡ್ರೋಜನ್​ನಿಂದ ಓಡಿಸುವುದು ಹೇಗೆ ಎಂಬ ಹೊಸ ಪರಿಕಲ್ಪನೆಯ ಬಗ್ಗೆ ಚರ್ಚೆ ನಡೆಸುತ್ತಿದ್ದರು.

ಅದೇ ದಿನ ನಮ್ಮ ದೇಶದಲ್ಲಿ ಆಂಜನೇಯನ ಜಾತಿ ಬಗ್ಗೆ ಟ್ವಿಟರ್​ನಲ್ಲಿ ವಾದ-ವಿವಾದಗಳು ನಡೆಯುತ್ತಿದ್ದವು. ಇದು ದುರದೃಷ್ಟಕರ. ಶಿಕ್ಷಣದಿಂದಷ್ಟೇ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಹೇಳಿದರು.