ರಾಮಮಂದಿರ ನಿರ್ಮಾಣಕ್ಕೆ ಕಾನೂನೊಂದೇ ದಾರಿ

ಬೆಂಗಳೂರು: ಎರಡೂವರೆ ದಶಕಗಳಿಂದ ದೇಶದ ಜನರ ಬಾಯಲ್ಲಿ ಹರಿದಾಡುತ್ತಿರುವ ರಾಮಜನ್ಮಭೂಮಿ ವಿವಾದವನ್ನು ಕೊನೆಗೊಳಿಸಲು ಕೇಂದ್ರದ ಸಂಸತ್​ನಲ್ಲಿ ಕಾಯ್ದೆ ರೂಪಿಸುವುದೊಂದೇ ದಾರಿ ಎಂಬ ನಿರ್ಧಾರಕ್ಕೆ ಬಂದಿರುವ ಸಂಘ ಪರಿವಾರ, ಈ ಕುರಿತು ಕೇಂದ್ರ ಸರ್ಕಾರಕ್ಕೆ ಒತ್ತಡ ಹೇರಲು ನಿರ್ಧರಿಸಿದೆ.

ದೇಶದ ಎಲ್ಲ ಲೋಕಸಭಾ ಕ್ಷೇತ್ರಗಳಲ್ಲಿ ಸಮಾವೇಶ ನಡೆಸಿ ಸಂಸದರ ಮೂಲಕ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವುದು ಎಂಬ ನಿರ್ಧಾರವನ್ನು ಕೆಲ ದಿನಗಳ ಹಿಂದೆ ನವದೆಹಲಿಯಲ್ಲಿ ನಡೆದ ವಿಶ್ವ ಹಿಂದು ಪರಿಷತ್​ನ ಸಂತ ಉಚ್ಚಾಧಿಕಾರ ಸಮಿತಿ ತೀರ್ಮಾನಿಸಿದೆ.

ಮುಂಬರುವ ಅಧಿವೇಶನದಲ್ಲಿ ಕಾಯ್ದೆ ಮಂಡಿಸಿ ಕಾನೂನು ಮಾಡದಿದ್ದರೆ ಮುಂದಿನ ತೀರ್ಮಾನ ಕೈಗೊಳ್ಳುವ ಮಾತಾಡಿದೆ. ಇದೆಕ್ಕೆ ಪೂರಕವಾಗಿ, ಸೋಮನಾಥ ಮಂದಿರ ಮಾದರಿಯಲ್ಲಿ ಭೂಮಿ ಸ್ವಾಧೀನಕ್ಕೆ ಪಡೆದು ಮಂದಿರ ನಿರ್ವಣಕ್ಕೆ ನೀಡಿ ಎಂದು ಮಹಾರಾಷ್ಟ್ರದ ಪುಣೆಯಲ್ಲಿ ನಡೆಯುತ್ತಿರುವ ಅಖಿಲ ಭಾರತೀಯ ಕಾರ್ಯಕಾರಿ ಮಂಡಲ ಬೈಠಕ್​ನಲ್ಲಿ ಆರೆಸ್ಸೆಸ್ ಸಹ ಅಭಿಪ್ರಾಯ ಪಟ್ಟಿರುವುದು ಚುನಾವಣೆ ಸಮಯದಲ್ಲಿ ಕೇಂದ್ರ ಸರ್ಕಾರವನ್ನು ಒತ್ತಡಕ್ಕೆ ಸಿಲುಕಿಸಿದೆ.

ಗ್ರಾಮಗಳಲ್ಲೂ ಸಭೆ-ಸಮಾರಂಭ: ನಾಲ್ಕು ಹಂತದಲ್ಲಿ ಸರ್ಕಾರದ ಮೇಲೆ ಒತ್ತಡ ಹೇರಲು ಉಚ್ಚಾಧಿಕಾರ ಸಮಿತಿ ನಿರ್ಧರಿಸಿದೆ. ಸೆಪ್ಟೆಂಬರ್​ನಲ್ಲಿ ಮೊದಲಿಗೆ ರಾಷ್ಟ್ರಪತಿಯವರಲ್ಲಿ ಕೋರಲಾಗಿದೆ. ಅದೇ ತಿಂಗಳು ಎಲ್ಲ ರಾಜ್ಯಗಳ ರಾಜ್ಯಪಾಲರಿಗೆ ನಿಯೋಗವೊಂದು ಮನವಿ ಸಲ್ಲಿಸಿದೆ. ಇದೀಗ ಮೂರನೇ ಹಂತದಲ್ಲಿ ನವೆಂಬರ್​ನಲ್ಲಿ ದೇಶದ ಎಲ್ಲ ಲೋಕಸಭಾ ಕ್ಷೇತ್ರಗಳಲ್ಲಿ 5-10 ಸಾವಿರ ಜನರ ಸಮಾವೇಶ ನಡೆಯಲಿದೆ. ಬಿಜೆಪಿ ಸಂಸದರಷ್ಟೆ ಅಲ್ಲ, ಎಲ್ಲ ಪಕ್ಷದ ಸಂಸದರ ಕ್ಷೇತ್ರದಲ್ಲೂ ಈ ಕಾರ್ಯಕ್ರಮ ನಡೆಯಲಿದೆ. ಎಲ್ಲ ಸಂಸದರಿಗೂ ಮನವಿ ಸಲ್ಲಿಸಿ, ಲೋಕಸಭೆಯಲ್ಲಿ ಮಸೂದೆ ಮಂಡನೆಯಾದಾಗ ಬೆಂಬಲಿಸುವಂತೆ ಕೋರಲಾಗುತ್ತದೆ. ಅಂತಿಮವಾಗಿ ಡಿಸೆಂಬರ್​ನಲ್ಲಿ ಗೀತಾ ಜಯಂತಿ ದಿನದಿಂದ (ಡಿ.18) ಒಂದು ವಾರ ಪ್ರತಿ ಗ್ರಾಮ, ದೇವಸ್ಥಾನ ಹಾಗೂ ಮನೆಗಳಲ್ಲಿ ಜಲಾಭಿಷೇಕ, ವಿಶೇಷ ಅರ್ಚನೆ, ಪೂಜೆ, ಹನುಮಾನ್ ಚಾಲೀಸಾ ಪಾರಾಯಣ ಸೇರಿ ಸ್ಥಾನೀಯ ಪಾರಂಪರಿಕ ಅನುಷ್ಠಾನಗಳನ್ನು ನಡೆಸಲು ವಿಶ್ವಹಿಂದು ಪರಿಷತ್ ನಿರ್ಧರಿಸಿದೆ.

ವಿಶ್ವ ಹಿಂದು ಪರಿಷತ್ ನೇತೃತ್ವದಲ್ಲಿ ಈಗಾಗಲೇ ರಾಷ್ಟ್ರಪತಿ, ರಾಜ್ಯಪಾಲರುಗಳ ಭೇಟಿ ನಡೆದಿದೆ. ಸಂಸದರನ್ನು ಕೋರುವ, ಗ್ರಾಮಗಳಲ್ಲಿ ಧಾರ್ವಿುಕ ಕಾರ್ಯಕ್ರಮ ನಡೆಸುವ ಮೂಲಕ ಜನಾಂದೋಲನ ರೂಪಿಸುತ್ತೇವೆ. ರಾಮಮಂದಿರ ಆದಷ್ಟೂ ಶೀಘ್ರ ನಿರ್ಮಾಣ ಆಗಲೆಂಬುದೇ ನಮ್ಮ ಆಶಯ.

| ಕೇಶವ ಹೆಗಡೆ, ವಿಶ್ವ ಹಿಂದು ಪರಿಷತ್ ದಕ್ಷಿಣ ಮಧ್ಯ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ

 

ಧರ್ಮ- ಸಂಪ್ರದಾಯಗಳ ವಿಚಾರದಲ್ಲಿ ಸರ್ಕಾರ, ನ್ಯಾಯಾಲಯ ಹಸ್ತಕ್ಷೇಪ ಮಾಡಬಾರದು. ಅಯೋಧ್ಯೆ ರಾಮಮಂದಿರ ವಿಚಾರದಲ್ಲಿ ಸಂತರು, ಭಕ್ತರ ತೀರ್ಮಾನವೇ ಅಂತಿಮ. ಈ ವಿಚಾರದಲ್ಲಿ ನ್ಯಾಯಾಲಯದಲ್ಲಿ ವಿರುದ್ಧ ತೀರ್ಪು ಬಂದರೆ ನಾನು ವಿರೋಧಿಸುತ್ತೇನೆ. ಹಿಂದು ಧರ್ಮ ಯಾವತ್ತೂ ಮಹಿಳೆಯರನ್ನು ಅವಮಾನಿಸಿಲ್ಲ. ಶಬರಿಮಲೆ ಸಂಪ್ರದಾಯ, ಚೌಕಟ್ಟುಗಳ ಮೇಲೆ ಭಾರತೀಯ ಮಹಿಳೆಯರಿಗೆ ಗೌರವ, ಭಕ್ತಿ ಇದೆ. ನಾನು ಯಾವತ್ತೂ ಸಂಪ್ರದಾಯ ಬದಲಾವಣೆಯ ಪರ. ಸಮಸ್ತ ಹಿಂದುಗಳ ಒಪ್ಪಿಗೆ ಇದ್ದರೆ ಮಾತ್ರ ಸಂಪ್ರದಾಯ ಬದಲಿಸೋಣ.

| ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರು

ಸಂತ ಉಚ್ಚಾಧಿಕಾರ ಸಮಿತಿ ನಿರ್ಣಯ

ರಾಮಮಂದಿರ ವಿಚಾರದಲ್ಲಿ ಸುಪ್ರೀಂಕೋರ್ಟ್ ನಲ್ಲಿ ಅಕ್ಟೋಬರ್ ಕೊನೆಯ ವಾರದಲ್ಲಿ ವಿಚಾರಣೆ ಆರಂಭವಾಗುವುದಕ್ಕೂ ಮುನ್ನ ಅಂದರೆ ಅ.5ಕ್ಕೆ ನವದೆಹಲಿಯಲ್ಲಿ ಸಂತ ಉಚ್ಚಾಧಿಕಾರಸಮಿತಿ ಸಭೆ ಸೇರಿತ್ತು. ದೇಶದ ವಿವಿಧೆಡೆಗಳಿಂದ 40ಕ್ಕೂ ಹೆಚ್ಚು ಪ್ರಮುಖ ಮಠಾಧೀಶರು ನೆರೆದು ಚರ್ಚೆ ನಡೆಸಿದ್ದರು. 1991ರಲ್ಲೇ ಸಂಧಾನದ ಮಾರ್ಗ ಪರಿಸಮಾಪ್ತಿಗೊಂಡಿದೆ. ರಾಮ ವಿರೋಧಿಗಳು ನ್ಯಾಯಾಲಯದಲ್ಲಿ ಮೊಕದ್ದಮೆಯ ವಿಚಾರಣೆಯನ್ನು ತಡೆಯುವುದಕ್ಕಾಗಿ ಎಲ್ಲ ಥರದ ದುಷ್ಟ ಪ್ರಯತ್ನಗಳನ್ನು ನಡೆಸಿದರು. ನ್ಯಾಯಾಲಯದಿಂದಲೂ ಯಾವುದನ್ನೂ ನಿರೀಕ್ಷಿಸಲಾಗುತ್ತಿಲ್ಲ. ನವೆಂಬರ್​ನಲ್ಲಿ ಎಲ್ಲ ಲೋಕಸಭಾ ಕ್ಷೇತ್ರಗಳಲ್ಲಿ ದೊಡ್ಡಮಟ್ಟದ ಸಭೆ ನಡೆಸಿ ಜನಜಾಗೃತಿ ಮೂಡಿಸುವುದು ಹಾಗೂ ಸಂಸದರನ್ನು ಭೇಟಿಮಾಡಿ ಅವರಿಗೆ ಸಂಸತ್ತಿನಲ್ಲಿ ಕಾನೂನಿನ ಮೂಲಕ ರಾಮಜನ್ಮ ಭೂಮಿಯಲ್ಲಿ ಭವ್ಯ ಮಂದಿರ ನಿರ್ವಣದ ಮಾರ್ಗವನ್ನು ಪಶಸ್ತಗೊಳಿಸುವಂತೆ ಆಗ್ರಹಪಡಿಸುವುದು. ಫೆಬ್ರವರಿಯಲ್ಲಿ ನಡೆಯುವ ಸಂಸತ್ ಅಧಿವೇಶನದಲ್ಲಿ ಕಾನೂನು ಜಾರಿ ಆಗದಿದ್ದರೆ ಮತ್ತೊಮ್ಮೆ ಸಭೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳುವುದು ಎಂಬ ನಿರ್ಣಯವನ್ನು ಸಭೆಯಲ್ಲಿ ಮಾಡಲಾಗಿದೆ ಎಂದು ವಿಶ್ವ ಹಿಂದು ಪರಿಷತ್ ದಕ್ಷಿಣ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಕೇಶವ ಹೆಗಡೆ ತಿಳಿಸಿದ್ದಾರೆ.

ಬಹುಮತ ಇದೆಯಲ್ಲ?

ಈ ಹಿಂದೆ ಅಟಲ್ ಬಿಹಾರಿ ವಾಜಪೇಯಿ ಅವರ ಸರ್ಕಾರವಿದ್ದಾಗಲೂ ಆಯೋಧ್ಯೆಗೆ ಪ್ರತ್ಯೇಕ ಕಾನೂನು ಮಾಡಬೇಕು ಎಂಬ ಒತ್ತಾಯ ಕೇಳಿಬಂದಿತ್ತು. ಆದರೆ ಅಂದು ಸಮ್ಮಿಶ್ರ ಸರ್ಕಾರ ಇದ್ದಿದ್ದರಿಂದ ಎಲ್ಲ ಪಕ್ಷಗಳಿಗೂ ಒಪ್ಪಿತವಾಗದು ಎಂಬ ಕಾರಣ ನೀಡಲಾಗಿತ್ತು. ಅನೇಕ ರಾಜಕೀಯ ಪಕ್ಷಗಳು ರಾಮಮಂದಿರ ನಿರ್ವಣಕ್ಕೆ ವಿರೋಧ ವ್ಯಕ್ತಪಡಿಸಿದ್ದವು. ಹಿಂದು ಸಂಸ್ಕೃತಿ ಪರ ರಾಜಕೀಯ ವಾತಾವರಣ ಇರಲಿಲ್ಲ. ಈ ವಿಚಾರವೂ ಚುನಾವಣೆಯಲ್ಲಿ ಬಿಜೆಪಿಗೆ ಸಾಕಷ್ಟು ತೊಂದರೆ ನೀಡಿತು. ಆದರೆ ಈಗ ಸಂಪೂರ್ಣ ಬಿಜೆಪಿಗೇ ಸರಳ ಬಹುಮತವಿದೆ. ರಾಷ್ಟ್ರೀಯ ವಿಚಾರಧಾರೆ ಒಪು್ಪವವರೇ ನೇತೃತ್ವ ವಹಿಸಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಕಾಂಗ್ರೆಸ್ ಸೇರಿ ದೇಶದ ಯಾವುದೇ ರಾಜಕೀಯ ಪಕ್ಷ ಸಹ ರಾಮಮಂದಿರ ಬೇಡ ಎನ್ನುತ್ತಿಲ್ಲ. ಎಲ್ಲರೂ ಹಿಂದು ಪರ ಮಾತನಾಡುತ್ತಿದ್ದಾರೆ, ದೇವಸ್ಥಾನಗಳಿಗೆ ಮುಕ್ತವಾಗಿ ಭೇಟಿ ನೀಡುತ್ತಿದ್ದಾರೆ. ಈ ಸಮಯದಲ್ಲೂ ಕ್ರಮಕ್ಕೆ ಮುಂದಾಗದಿದ್ದರೆ ಅಸಂಖ್ಯಾತ ಕಾರ್ಯಕರ್ತರ ಉತ್ಸಾಹ ಕುಗ್ಗುತ್ತದೆ ಎಂದು ಉನ್ನತ ಪದಾಧಿಕಾರಿಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ.