ಜ. 10ರಿಂದ ಅಯೋಧ್ಯೆ ರಾಮ ಜನ್ಮ ಭೂ ವಿವಾದದ ವಿಚಾರಣೆ

ನವದೆಹಲಿ: ಅಯೋಧ್ಯೆ ಭೂ ವಿವಾದ ಕುರಿತು ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆಯನ್ನು ಜ. 10ರಿಂದ ವಿಚಾರಣೆಗೆ ಕೈಗೆತ್ತಿಕೊಳ್ಳಲಾಗುವುದು ಎಂದು ಸುಪ್ರೀಂ ಕೋರ್ಟ್​ನ ಮುಖ್ಯನ್ಯಾಯಮೂರ್ತಿ ರಂಜನ್​ ಗೊಂಗೋಯ್​ ಅವರ ನೇತೃತ್ವದ ಪೀಠ ಶುಕ್ರವಾರ ತಿಳಿಸಿದೆ. ಕೇವಲ 60 ನಿಮಿಷಗಳ ನಡೆದ ವಿಚಾರಣೆಯಲ್ಲಿ ಪೀಠವೂ ಯಾರ ಪರವಾದ ವಾದಗಳನ್ನೂ ಆಲಿಸಲಿಲ್ಲ.

ಅರ್ಜಿಗಳನ್ನು ಸೂಕ್ತ ಪೀಠಕ್ಕೆ ನಿಗದಿ ಮಾಡುವ ದಿನಾಂಕವನ್ನು ನಿರ್ಧಾರ ಮಾಡುವುದಾಗಿ ಸುಪ್ರೀಂ ಕೋರ್ಟ್​ನ ಮುಖ್ಯ ನ್ಯಾಯಮೂರ್ತಿಗಳು ಡಿ. 24ರಂದು ತಿಳಿಸಿದ್ದರು. ಅದೇ ದಿನ ಮಾತನಾಡಿದ್ದ ಕೇಂದ್ರ ಸಚಿವ ಪ್ರಕಾಶ್​ ಜಾವಡೇಕರ್​, ವಿವಾದವನ್ನು ದಿನಂಪ್ರತಿ ವಿಚಾರಣೆ ನಡೆಸಿ ಸುಪ್ರೀಂ ಕೋರ್ಟ್​ ಶೀಘ್ರ ತೀರ್ಪು ಪ್ರಕಟಿಸಿಬೇಕೆಂದು ಕೇಂದ್ರ ಸರ್ಕಾರ ಬಯಸುತ್ತದೆ ಎಂದು ಹೇಳಿದ್ದರು.

1992ರ ಡಿ. 6ರ ವರೆಗೆ ಇದ್ದ ಬಾಬ್ರಿ ಮಸೀದಿ ಇದ್ದ 2.7 ಎಕೆರೆ ಜಮೀನಿಗೆ ಸಂಬಂಧಿಸಿದ ವ್ಯಾಜ್ಯ ಇದಾಗಿದೆ. ಈ ಜಾಗದ ವಿಚಾರಣೆ ನಡೆಸಿದ್ದ ಅಲಹಾಬಾದ್​ ಹೈಕೋರ್ಟ್​ 2010ರಲ್ಲಿ ಭೂಮಿಯನ್ನು ಮೂರು ಭಾಗಗಳಾಗಿ ವಿಂಗಡಿಸಿ ಸುನ್ನಿ ವಕ್ಫ್​ ಬೋರ್ಡ್​, ನಿರ್ಮೋಹಿ ಅಖಾಡ ಮತ್ತು ರಾಮ್​ ಲಲ್ಲಾಗೆ ಹಂಚಿಕೆ ಮಾಡಿತ್ತು.

ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್​ನಲ್ಲಿ 14 ಅರ್ಜಿಗಳು ಸಲ್ಲಿಕೆಯಾಗಿದ್ದು, ಇವುಗಳ ಇತ್ಯರ್ಥ ಬಾಕಿ ಉಳಿದಿದೆ. ಇದೇ ಹಿನ್ನೆಲೆಯಲ್ಲಿ ಕಳೆದ ನವೆಂಬರ್​ನಲ್ಲಿ ಅರ್ಜಿ ಸಲ್ಲಿಸಿದ್ದ ಉತ್ತರ ಪ್ರದೇಶ ಸರ್ಕಾರ, ಬಾಕಿ ಉಳಿದಿರುವ ಅರ್ಜಿಗಳನ್ನು ಕ್ಷಿಪ್ರವಾಗಿ ವಿಚಾರಣೆ ನಡೆಸಿ ಇತ್ಯರ್ಥ ಮಾಡಬೇಕಾಗಿ ಕೋರಿತ್ತು. ಆದರೆ, ಅರ್ಜಿಯನ್ನು ತಳ್ಳಿ ಹಾಕಿದ್ದ ಸುಪ್ರೀಂ ಕೋರ್ಟ್​ ” ನಮಗೆ ನಮ್ಮದೇ ಆದ್ಯತೆಗಳಿವೆ” ಎಂದು ಹೇಳಿತ್ತು. ಅಲ್ಲದೆ, ಅರ್ಜಿಗಳನ್ನು ಸೂಕ್ತ ಪೀಠಗಳಿಗೆ ವಹಿಸುವ ವಿಚಾರಣೆಯನ್ನು ಜನವರಿಗೆ ನಿಗದಿ ಮಾಡಿತ್ತು.

ಇದೇ ವೇಳೆ ವಿವಾದಗಳ ದಿನಂಪ್ರತಿ ಆಧಾರದ ಮೇಲೆ ಕ್ಷಿಪ್ರ ವಿಚಾರಣೆ ನಡೆಸುವಂತೆ ಕೋರಿ ವಕೀಲ ಹೀರಾನಾಥ್​ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನೂ ಸುಪ್ರೀಂ ಕೋರ್ಟ್ ವಿಚಾರಣೆಗೆತ್ತಿಕೊಳ್ಳಲು ಶುಕ್ರವಾರ ನಿರಾಕರಿಸಿದೆ.

https://youtu.be/jHqJ43yg94c