ಅಯೋಧ್ಯೆ ವಿಚಾರಣೆಯಿಂದ ಹಿಂದೆ ಸರಿದ ನ್ಯಾಯಮೂರ್ತಿ, ವಿಚಾರಣೆ ಮತ್ತೆ ಮುಂದಕ್ಕೆ

ನವದೆಹಲಿ: ಬಹು ಚರ್ಚಿತ, ವಿವಾದಿತ ಅಯೋಧ್ಯೆ ಭೂ ಒಡೆತನ ಕುರಿತ ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್​ ಜನವರಿ 29ಕ್ಕೆ ಮತ್ತೆ ಮುಂದೂಡಿದೆ.

ಪ್ರಕರಣದ ವಿಚಾರಣೆಗೆ ಇತ್ತೀಚೆಗಷ್ಟೆ ರಚಿಸಲಾಗಿದ್ದ ಐವರು ನ್ಯಾಯಮೂರ್ತಿಗಳನ್ನೊಳಗೊಂಡ ಸಾಂವಿಧಾನಿಕ ಪೀಠದಿಂದ ಒಬ್ಬ ನ್ಯಾಯಮೂರ್ತಿಗಳು ಹೊರ ನಡೆದ ಹಿನ್ನೆಲೆಯಲ್ಲಿ ವಿಚಾರಣೆ ಮುಂದೂಡಿರುವುದಾಗಿ ಮುಖ್ಯ ನ್ಯಾಯಮೂರ್ತಿ ರಂಜನ್​ ಗೊಗೊಯ್ ಗುರುವಾರ ಬೆಳಗ್ಗೆ ವಿಚಾರಣೆಗೆ ಕೈಗೆತ್ತಿಕೊಂಡ ನಂತರ ತಿಳಿಸಿದ್ದಾರೆ.

ನ್ಯಾಯಮೂರ್ತಿಯಾದ ಉದಯ್​ ಲಲಿತ್​ 1994ರಲ್ಲಿ ಇದೇ ಪ್ರಕರಣ ಸಂಬಂಧ ವಾದ ಮಂಡಿಸಿದ್ದರು. ಈಗ ಪಂಚ ಸದಸ್ಯರ ಪೀಠದಲ್ಲಿ ಲಲಿತ್​ ಕೂಡ ಇರುವುದಕ್ಕೆ ಮುಸ್ಲಿಂ ಅರ್ಜಿದಾರರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹಾಗಾಗಿ, ಲಲಿತ್​ ಪಂಚ ಪೀಠದಿಂದ ಹಿಂದೆ ಸರಿದಿದ್ದು, ಸಾಂವಿಧಾನಿಕ ಪೀಠವನ್ನು ಪುನಃ ರಚಿಸಬೇಕಾಗಿರುವುದರಿಂದ ಅರ್ಜಿ ವಿಚಾರಣೆಯನ್ನು ಕೋರ್ಟ್​ ಮುಂದೂಡಿದೆ.

ಮುಖ್ಯ ನ್ಯಾಯಮೂರ್ತಿಗಳಾದ ರಂಜನ್​ ಗೊಗಯ್ ನೇತೃತ್ವದ ಪಂಚ ಸದಸ್ಯರ ಪೀಠದಲ್ಲಿ ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ್​, ಉದಯ್​ ಲಲಿತ್​, ಎಸ್​.ಎ ಬೊಬ್ಡೆ, ಎಸ್​.ವಿ. ರಮಣ್​ ಇದ್ದರು. (ಏಜೆನ್ಸೀಸ್​)