ಆಯೋಧ್ಯೆ ವಿವಾದ: ಜ.4ರಿಂದ ಸುಪ್ರೀಂ ಕೋರ್ಟ್​ನಲ್ಲಿ ವಿಚಾರಣೆ ಆರಂಭ

ನವದೆಹಲಿ: ಆಯೋಧ್ಯೆ ವಿವಾದ ಸಂಬಂಧ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಸುಪ್ರೀಂ ಕೋರ್ಟ್​ನ ಮುಖ್ಯ ನ್ಯಾಯಮೂರ್ತಿಯುಳ್ಳ ಪೀಠ ಜನವರಿ ನಾಲ್ಕರಿಂದ ವಿಚಾರಣೆ ನಡೆಸಲಿದೆ.

ಆಯೋಧ್ಯೆ ವಿವಾದದ ನ್ಯಾಯದಾನದಲ್ಲಿ ಆಗುತ್ತಿರುವ ವಿಳಂಬ ಮತ್ತು ತ್ವರಿತಗತಿಯಲ್ಲಿ ವಿವಾದ ವಿಚಾರಣೆ ನಡೆಸುವಂತೆ ಕೋರಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಕೈಗೆತ್ತಿಕೊಳ್ಳಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ಕಳೆದ ಅಕ್ಟೋಬರ್​ನಲ್ಲಿ ವಿಚಾರಣೆ ನಡೆಸಿದ್ದ ನ್ಯಾಯಾಲಯ, ” ಯಾವ ವಿಚಾರಕ್ಕೆ ಎಷ್ಟು ಪ್ರಾಮುಖ್ಯತೆ ನೀಡಬೇಕು ಎಂಬುದು ನ್ಯಾಯಾಲಯಕ್ಕೆ ತಿಳಿದಿದೆ,” ಎಂದು ಹೇಳಿತ್ತು. ಕೇವಲ ನಾಲ್ಕೇ ನಿಮಿಷಗಳಲ್ಲಿ ತನ್ನ ಅಭಿಪ್ರಾಯ ತಿಳಿಸಿದ್ದ ನ್ಯಾಯಾಲಯ ಜನವರಿಯಿಂದ ವಿವಾದದ ವಿಚಾರಣೆ ನಡೆಸುವುದಾಗಿ ತಿಳಿಸಿತ್ತು.
ಸದ್ಯ ಕೋರ್ಟ್​ ಅಧಿಕಾರಿಗಳೇ ನೀಡಿರುವ ಮಾಹಿತಿ ಪ್ರಕಾರ ಜ.4ರಿಂದ ವಿಚಾರಣೆ ನಡೆಯಲಿದೆ.

https://twitter.com/ANI/status/1077198775855149056

ವಿವಾದದ ವಿಚಾರಣೆಯನ್ನು ಕೋರ್ಟ್​ ಜನವರಿಗೆ ನಿಗದಿ ಮಾಡುತ್ತಲೇ, ರಾಮ ಮಂದಿರ ನಿರ್ಮಾಣಕ್ಕಾಗಿ ಸುಗ್ರೀವಾಜ್ಞೆ ಜಾರಿಗೆ ತರುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡಗಳು ಬಂದಿದ್ದವು. ಬಿಜೆಪಿ, ಸಂಘ ಪರಿವಾರ, ಹಿಂದೂ ಸಂಘಟನೆಗಳು ಸುಗ್ರೀವಾಜ್ಞೆ ಅಥವಾ ಕಾನೂನನ್ನು ಜಾರಿಗೆ ಒತ್ತಾಯಿಸಿದ್ದವು.

ಇದೇ ವಿಚಾರವಾಗಿ ಬಿಜೆಪಿಯ ಮಿತ್ರ ಪಕ್ಷ ಶಿವಸೇನೆ ಬಿಜೆಪಿ ವಿರುದ್ಧ ಆಗಾಗ ಗುಡುತ್ತಲೇ ಬಂದಿದೆ. ಅಲ್ಲದೆ, ರಾಮ ಮಂದಿರ ನಿರ್ಮಾಣದ ದಿನಾಂಕವನ್ನು ಕೇಂದ್ರ ಸರ್ಕಾರ ಪ್ರಕಟಿಸಬೇಕು ಎಂಬ ನಿರ್ಣಯವನ್ನೂ ಇತ್ತೀಚೆಗೆ ನಡೆದಿದ್ದ ಧರ್ಮ ಸಂಸತ್​ನಲ್ಲಿ ಕೈಗೊಳ್ಳಲಾಗಿತ್ತು.