ತೀ.ನ.ಶ್ರೀನಿವಾಸ್​ಗೆ ಇಲ್ಲ ಬಿಎಸ್​ವೈ ತಾಕತ್ತಿನ ಅರಿವು

ಶಿವಮೊಗ್ಗ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಾಕತ್ತಿನ ಬಗ್ಗೆ ಕಾಂಗ್ರೆಸ್ ಜಿಲ್ಲಾಧ್ಯಕ್ಷರಿಗೆ ಸವಾಲು ಹಾಕುವ ಅರ್ಹತೆ ಇಲ್ಲ. ಇಡೀ ಜಿಲ್ಲೆ ಮತ್ತು ರಾಜ್ಯದ ಜನತೆಗೆ ಬಿಎಸ್​ವೈ ತಾಕತ್ತಿನ ಬಗ್ಗೆ ಅರಿವಿದ್ದು, ತೀ.ನ.ಶ್ರೀನಿವಾಸ್​ಗೆ ಇಲ್ಲದಿರುವುದು ಅವರ ಅಜ್ಞಾನವನ್ನು ಎತ್ತಿ ತೋರಿಸುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ತಿಳಿಸಿದರು.

ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೆ ತೀ.ನ.ಶ್ರೀನಿವಾಸ್ ಮಾಜಿ ಸಂಸದರಾದ ಯಡಿಯೂರಪ್ಪ ಮತ್ತು ಬಿ.ವೈ.ರಾಘವೇಂದ್ರ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಅವರ ಸಾಧನೆ ಬಗ್ಗೆ ಸರ್ಟಿಫಿಕೇಟ್ ಬೇಕಿದ್ದರೆ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರ ಮನೆಯಲ್ಲಿದ್ದು, ಕೇಳಿ ಪಡೆದುಕೊಳ್ಳಲಿ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಕಾಲೆಳೆದರು.

ಅವರದ್ದೇ ಪಕ್ಷದ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಜಿಲ್ಲೆಯ ಅಭಿವೃದ್ಧಿಗೆ ಅನುದಾನ ಬಿಡುಗಡೆಗೆ ಹಿಂದೇಟು ಹಾಕಿದರು. ಯಡಿಯೂರಪ್ಪ ಸಿಎಂ ಆಗಿದ್ದಾಗ ಜಿಲ್ಲೆ ಅಭಿವೃದ್ಧಿ ಕಂಡಿದೆ. ಮತ್ಯಾಕೆ ಅನುದಾನ ಬೇಕು ಎನ್ನುತ್ತಿದ್ದರು. ಆದರೆ ಶಿವಮೊಗ್ಗದಲ್ಲೇ ಇರುವ ತೀ.ನ.ಶ್ರೀನಿವಾಸ್​ಗೆ ಜಿಲ್ಲೆಯ ಅಭಿವೃದ್ಧಿ ಕಂಡಿಲ್ಲ ಎಂದಾದರೆ ರಾತ್ರಿ ಸಂಚಾರ ಮಾಡುತ್ತಿರಬೇಕು ಎಂದು ಲೇವಡಿ ಮಾಡಿದರು.

ಕಾಂಗ್ರೆಸ್ ನಾಯಕರಿಗೆ ಯಡಿಯೂರಪ್ಪ ಏನು ಎಂಬುದು ಗೊತ್ತಿದೆ. ಆದರೆ ಕಳೆದ ಐದು ವರ್ಷ ತಮ್ಮದೇ ಸರ್ಕಾರ ಇದ್ದರೂ, ಇಬ್ಬರು ಸಚಿವರಾಗಿದ್ದರೂ ಯಾವುದೇ ಅಭಿವೃದ್ಧಿ ಕೆಲಸಗಳು ನಡೆಯಲಿಲ್ಲ. ಅವರ ಸಾಧನೆ ಏನು ಎಂಬುದನ್ನು ಮೊದಲು ಜಿಲ್ಲಾಧ್ಯಕ್ಷರು ಅರ್ಥ ಮಾಡಿಕೊಳ್ಳಬೇಕು ಎಂದು ತಿರುಗೇಟು ನೀಡಿದರು.

ಜಿಲ್ಲಾಧ್ಯಕ್ಷರಿಗೆ ರಮ್ಯಾಳ ಚಾಳಿ: ನಟಿ ರಮ್ಯಾಳ ಚಾಳಿ ಇದೀಗ ಜಿಲ್ಲಾಧ್ಯಕ್ಷರಿಗೂ ಬಂದಿದೆ. ಮಂಡ್ಯದಲ್ಲಿ ರೈತರು ಮೃತಪಟ್ಟರೂ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಲು ಬರುತ್ತಿಲ್ಲ. ಬರೀ ಮೋದಿ ಬಗ್ಗೆ ಟ್ವಿಟ್ ಮಾಡಿಕೊಂಡು ಕಾಲ ಕಳೆಯುತ್ತಿದ್ದಾರೆ. ಅದೇ ರೀತಿ ಜಿಲ್ಲಾಧ್ಯಕ್ಷರು ಕೂಡ ಯಡಿಯೂರಪ್ಪ ಮತ್ತು ಅವರ ಪುತ್ರರ ಬಗ್ಗೆ ಆರೋಪ ಮಾಡುವುದನ್ನು ರೂಢಿಸಿಕೊಂಡಿದ್ದಾರೆ ಎಂದು ಹೇಳಿದರು.

ಸೋಲಿಗೆ ಜಿಲ್ಲಾಧ್ಯಕ್ಷರೇ ಕಾರಣ: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಇಬ್ಬರು ಮಾಜಿ ಸಚಿವರು ಸೇರಿ ಜಿಲ್ಲೆಯಲ್ಲಿ ಕಾಂಗ್ರೆಸ್ ಸರ್ವನಾಶಕ್ಕೆ ಜಿಲ್ಲಾಧ್ಯಕ್ಷ ತೀ.ನ.ಶ್ರೀನಿವಾಸ್ ಕಾರಣ. ಭದ್ರಾವತಿಯಲ್ಲಿ ಬಿ.ಕೆ.ಸಂಗಮೇಶ್ವರ್ ಇವರಿಂದ ಅಂತರ ಕಾಯ್ದುಕೊಂಡ ಕಾರಣ ಗೆದ್ದಿದ್ದಾರೆ ಎಂದರು.

ಮಾಜಿ ಶಾಸಕರಾದ ಕೆ.ಜಿ.ಕುಮಾರಸ್ವಾಮಿ, ಆರ್.ಕೆ.ಸಿದ್ದರಾಮಣ್ಣ, ಎಸ್.ಜ್ಞಾನೇಶ್ವರ್, ರತ್ನಾಕರ್ ಶೆಣೈ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಕಾಂಗ್ರೆಸ್-ಜೆಡಿಎಸ್ ಧೂಳಿಪಟ ನಿಶ್ಚಿತ: ಕಾಂಗ್ರೆಸ್-ಜೆಡಿಎಸ್ ಮಾತ್ರವಲ್ಲದೆ ಎಷ್ಟೇ ಪಕ್ಷಗಳು ಒಗ್ಗೂಡಿದರೂ ಲೋಕಸಭೆ ಚುನಾವಣೆಯಲ್ಲಿ ಧೂಳಿಪಟ ಮಾಡಲಿದ್ದೇವೆ. ಲೋಕಸಭೆಗೆ ಸ್ಪರ್ಧಿಸುವ ಕನಸು ಕಾಣುತ್ತಿರುವ ತೀ.ನ.ಶ್ರೀನಿವಾಸ್ ಮೊದಲು ಜಿಲ್ಲೆಯ ಟಿಕೆಟ್ ಉಳಿಸಿಕೊಳ್ಳಲಿ ಎಂದು ಆಯನೂರು ಮಂಜುನಾಥ್ ಸವಾಲು ಹಾಕಿದರು. ಲೋಕಸಭೆಯಲ್ಲೂ ಮೈತ್ರಿಯೊಂದಿಗೆ ಚುನಾವಣೆಗೆ ಸ್ಪರ್ಧಿಸಲು ಎರಡೂ ಪಕ್ಷಗಳು ಮುಂದಾಗಿವೆ. ಹಾಗಾಗಿ ಮೊದಲು ಟಿಕೆಟ್ ಯಾವ ಪಕ್ಷಕ್ಕೆ ಎಂಬುದೇ ಖಚಿತತೆ ಇಲ್ಲ. ಒಪ್ಪಂದದಂತೆ ಜೆಡಿಎಸ್​ಗೆ ಟಿಕೆಟ್ ಕೊಟ್ಟರೆ ಇದೇ ತೀ.ನ.ಶ್ರೀನಿವಾಸ್ ಜೆಡಿಎಸ್ ಅಭ್ಯರ್ಥಿಯನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡು ಓಡಾಡಬೇಕಾಗುತ್ತದೆ. ಜೆಡಿಎಸ್​ನೊಂದಿಗೆ ಒಟ್ಟಾಗಿ ಬಿಜೆಪಿ ಸೋಲಿಸುತ್ತೇವೆ ಎಂಬ ಹೇಳಿಕೆಯಿಂದಲೇ ಅವರ ಶಕ್ತಿ ಗೊತ್ತಾಗುತ್ತದೆ ಎಂದು ಕಾಲೆಳೆದರು.

ತುಮರಿ ಸೇತುವೆ ಬಗ್ಗೆ ಭಯ ಬೇಡ: ತುಮರಿ ಸೇತುವೆ ಬಗ್ಗೆ ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ತಾಂತ್ರಿಕ ಕಾರಣಗಳಿಂದ ವಿಳಂಬವಾಗಿದೆ ಎಂದು ಆಯನೂರು ಮಂಜುನಾಥ್ ತಿಳಿಸಿದರು. ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಯೋಜನೆಗೆ 600 ಕೋಟಿ ರೂ. ಅನುದಾನಕ್ಕೆ ಅನುಮೋದನೆ ನೀಡಿದ್ದಾರೆ. 30 ವರ್ಷಗಳಿಂದ ಸಾಗರದಲ್ಲಿ ರಾಜಕಾರಣದಲ್ಲಿದ್ದರೂ ಕಾಗೋಡು ತಿಮ್ಮಪ್ಪ ಅವರಿಂದಲೇ ಯೋಜನೆ ಜಾರಿ ಸಾಧ್ಯವಾಗಲಿಲ್ಲ. ಅದು ತಿಮ್ಮಪ್ಪ ಅವರಿಗೂ ಗೊತ್ತಿದೆ. ಕಾಂಗ್ರೆಸ್​ನವರು ಸಂಸದರಾಗಿದ್ದಾಗಲೂ ಮಾಡಲು ಯೋಜನೆ ಅನುಷ್ಠಾನ ಸಾಧ್ಯವಾಗಲಿಲ್ಲ. ಆ ಕೆಲಸವನ್ನು ಯಡಿಯೂರಪ್ಪ ಮತ್ತು ಬಿ.ವೈ.ರಾಘವೇಂದ್ರ ಅವರ ಅವಧಿಯಲ್ಲಿ ಮಾಡಿದ್ದಾರೆ. ಇದನ್ನು ಸಹಿಸದ ತೀ.ನ.ಶ್ರೀನಿವಾಸ್ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಹೇಳಿದರು.