ಸಿಎಂ ವಿರುದ್ಧ ದೂರು ದಾಖಲಿಸಿ

ಶಿವಮೊಗ್ಗ: ಶಿರಾಳಕೊಪ್ಪದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹಲವು ಭರವಸೆಗಳನ್ನು ನೀಡುವ ಮೂಲಕ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ. ಮಧು ಬಂಗಾರಪ್ಪ ಗೆದ್ದರೆ ನೀರಾವರಿ ಯೋಜನೆ ಜಾರಿಗೆ ತರುವುದಾಗಿ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಗಳು ಸಿಎಂ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳಬೇಕೆಂದು ಬಿಜೆಪಿ ವಿಭಾಗೀಯ ಪ್ರಭಾರಿ ಆಯನೂರು ಮಂಜುನಾಥ್ ಒತ್ತಾಯಿಸಿದ್ದಾರೆ.

ನವೆಂಬರ್ 1ರಿಂದ ಬೀದಿ ಬದಿ ವ್ಯಾಪಾರಿಗಳಿಗೆ ಬಡ್ಡಿ ರಹಿತ ಸಾಲ, ಹಿರಿಯ ನಾಗರಿಕರ ಪಿಂಚಣಿಯಲ್ಲಿ ಹೆಚ್ಚಳ, ಗರ್ಭಿಣಿಯರಿಗೆ ಸಹಾಯಧನ ಎಂದು ಘೊಷಣೆ ಮಾಡುವ ಮೂಲಕ ಮಾದರಿ ನೀತಿ ಸಂಹಿತೆಯನ್ನು ಸಿಎಂ ಉಲ್ಲಂಘಿಸಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆಕ್ಷೇಪ ವ್ಯಕ್ತಪಡಿಸಿದರು.

ಭಾವನಾತ್ಮಕ ಭಾಷಣ: ಸಿಎಂ ಕುಮಾರಸ್ವಾಮಿ ಎಲ್ಲ ಕಡೆಯೂ ತಮ್ಮ ಅನಾರೋಗ್ಯದ ಪ್ರಸ್ತಾಪ ಮಾಡುತ್ತಾ ಜನರನ್ನು ಭಾವನಾತ್ಮಕವಾಗಿ ಸೆಳೆಯಲು ಅದನ್ನು ಮತವಾಗಿ ಪರಿವರ್ತನೆ ಮಾಡಿಕೊಳ್ಳಲು ಯತ್ನಿಸುತ್ತಿದ್ದಾರೆ. ಪದೇಪದೆ ಕಣ್ಣೀರು ಹಾಕುವ ಮೂಲಕ ಅನುಕಂಪ ಗಿಟ್ಟಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆಯನೂರು ದೂರಿದರು.

ಮಧು ಬಂಗಾರಪ್ಪ ಅವರ ತಂದೆಯ ಆತ್ಮದ ಶಾಂತಿಗಾಗಿ ತಮ್ಮನ್ನು ಗೆಲ್ಲಿಸುವಂತೆ ಮನವಿ ಮಾಡುತ್ತಿರುವುದು ಹಾಸ್ಯಾಸ್ಪದವಾಗಿದೆ. ತಮ್ಮ ತಂದೆ ಬಂಗಾರಪ್ಪ ಅವರ ಕೊನೆಯ ಚುನಾವಣೆಯಲ್ಲಿ ಪ್ರಚಾರಕ್ಕೇ ಹೋಗದ ಮಧು ಈಗ ತಂದೆಯ ಆತ್ಮದ ಶಾಂತಿ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಜೆಡಿಎಸ್ ಪ್ರತಿ ಚುನಾವಣೆಯಲ್ಲೂ ಹೊಸ ನಾಣ್ಯವನ್ನು ಚಲಾವಣೆಗೆ ತರುತ್ತಿದೆ. ಕಳೆದ ಚುನಾವಣೆಯಲ್ಲಿ ಗೀತಾ ಶಿವರಾಜ್​ಕುಮಾರ್ ಅವರನ್ನು ಕಣಕ್ಕಿಳಿಸಿತ್ತು. ಈಗ ಅವರು ಪ್ರಚಾರ ಕಣದಲ್ಲಿ ಕಾಣುತ್ತಿಲ್ಲ. ಬಂಗಾರಪ್ಪ ಹೆಸರಿನಲ್ಲಿ ಜನರನ್ನು ಭಾವನಾತ್ಮಕವಾಗಿ ಕಟ್ಟಿಹಾಕುವ ಕೆಲಸವಾಗುತ್ತಿದೆ ಎಂದು ದೂರಿದರು.

ಸುದ್ದಿಗೋಷ್ಠಿಯಲ್ಲಿ ಅಲ್ಪಸಂಖ್ಯಾತ ಮೋರ್ಚಾ ರಾಜ್ಯಾಧ್ಯಕ್ಷ ಅಬ್ದುಲ್ ಅಜೀಂ, ಜಿಲ್ಲಾಧ್ಯಕ್ಷ ತಸ್ವೀರ್ ಅಹಮದ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ಎಸ್.ಅರುಣ್, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಎಚ್.ಸಿ.ಬಸವರಾಜಪ್ಪ, ಪ್ರಮುಖರಾದ ರತ್ನಾಕರ ಶೆಣೈ, ವಿ.ರಾಜು, ತಲ್ಕೀನ್ ಅಹಮದ್ ಮುಂತಾದವರಿದ್ದರು.