ನವದೆಹಲಿ: ಮುಂಬರುವ ಐಪಿಎಲ್ 18ನೇ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸಲು ಆಲ್ರೌಂಡರ್ ಅಕ್ಷರ್ ಪಟೇಲ್ ಮತ್ತು ವಿಕೆಟ್ ಕೀಪರ್-ಬ್ಯಾಟರ್ ಕೆಎಲ್ ರಾಹುಲ್ ನಡುವೆ ಪೈಪೋಟಿ ಏರ್ಪಟ್ಟಿದೆ. ಐಸಿಸಿ ಚಾಂಪಿಯನ್ಸ್ ಟ್ರೋಫಿ ವಿಜೇತ ಭಾರತ ತಂಡದ ಆಟಗಾರರಾಗಿರುವ ಇವರಿಬ್ಬರ ನಡುವೆ ಸದ್ಯ, ಕಳೆದ ಆವೃತ್ತಿಯ ಉಪನಾಯಕ ಅಕ್ಷರ್ ಮುಂಚೂಣಿಯಲ್ಲಿದ್ದಾರೆ ಎನ್ನಲಾಗಿದೆ.
ಅಕ್ಷರ್ ಕಳೆದ ಮೆಗಾ ಹರಾಜಿಗೆ ಮುನ್ನ 16.50 ಕೋಟಿ ರೂ.ಗೆ ಡೆಲ್ಲಿ ತಂಡದಲ್ಲಿ ರಿಟೇನ್ ಆಗಿದ್ದರೆ, ರಾಹುಲ್ ಹರಾಜಿನಲ್ಲಿ 14 ಕೋಟಿ ರೂ.ಗೆ ಡೆಲ್ಲಿ ತಂಡಕ್ಕೆ ಸೇರ್ಪಡೆಯಾಗಿದ್ದರು. ಐಪಿಎಲ್ನ ಉಳಿದೆಲ್ಲ ತಂಡಗಳು ಮುಂದಿನ ಆವೃತ್ತಿಗೆ ಈಗಾಗಲೆ ನಾಯಕರನ್ನು ಹೆಸರಿಸಿದ್ದು, ಡೆಲ್ಲಿ ಕೂಡ ಇನ್ನು ಕೆಲದಿನಗಳಲ್ಲೇ ನಾಯಕನನ್ನು ಅಂತಿಮಗೊಳಿಸಲಿದೆ.
ರಾಹುಲ್ ಕೆಲ ಪಂದ್ಯಗಳಿಗೆ ಗೈರು: ಪತ್ನಿ ಆಥಿಯಾ ಶೆಟ್ಟಿ ಮೊದಲ ಮಗುವಿಗೆ ಜನ್ಮ ನೀಡುವ ನಿರೀಕ್ಷೆಯಲ್ಲಿರುವ ಕನ್ನಡಿಗ ಕೆಎಲ್ ರಾಹುಲ್ ಐಪಿಎಲ್ ಟೂರ್ನಿಯ 1 ಅಥವಾ 2 ಪಂದ್ಯಗಳಿಗೆ ಗೈರಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಹೀಗಾಗಿ ರಾಹುಲ್ ನಾಯಕರಾಗಿ ನೇಮಕಗೊಂಡರೂ, ಒಂದೆರಡು ಪಂದ್ಯಗಳಲ್ಲಿ ಅಕ್ಷರ್ ಪಟೇಲ್ ಅವರೇ ಡೆಲ್ಲಿ ತಂಡವನ್ನು ಮುನ್ನಡೆಸಬೇಕಾಗುತ್ತದೆ.
