ಕಡ್ಡಾಯ ಮತದಾನಕ್ಕೆ ಕಾರ್ ಮೂಲಕ ಜಾಗೃತಿ

ಕಳಸ: ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಕೆಲವೆಡೆ ಚುನಾವಣಾ ಬಹಿಷ್ಕಾರದ ಮಾತುಗಳು ಬರುತ್ತಿದ್ದರೆ, ಮರಸಣಿಗೆ ಗ್ರಾಪಂ ವ್ಯಾಪ್ತಿಯ ಎಡೂರು ಗ್ರಾಮದ ಕೃಷಿಕ ಕಿರಣ್ ಶೆಟ್ಟಿ ಕಡ್ಡಾಯವಾಗಿ ಮತದಾನ ಮಾಡಿ ಎಂದು ತನ್ನ ಕಾರ್​ನ ಹಿಂದೆ ಪ್ರತಿ ದಿನ ಒಂದೊಂದು ಸ್ಲೋಗನ್​ಗಳನ್ನು ಹಾಕಿ ಜಾಗೃತಿ ಮೂಡಿಸುತ್ತಿದ್ದಾರೆ.

ಕಡ್ಡಾಯವಾಗಿ ಮತದಾನ ಮಾಡಿ, ಕುಟುಂಬದ ಸಮಾರಂಭಗಳಿಗೆ ಮಹತ್ವ ನೀಡುವಂತೆ ಮತದಾನಕ್ಕೂ ಪ್ರಾಮುಖ್ಯತೆ ನೀಡಿ, ನಾವು ಮತದಾನ ಮಾಡೋಣ ನಮ್ಮ ಸುತ್ತಮುತ್ತಲಿನವರನ್ನೂ ಮತದಾನಕ್ಕೆ ಪ್ರೇರಣೆ ನೀಡಬೇಕು, ಮತದಾನದಿಂದ ದೂರ ಉಳಿದವರಿಗೆ ಮತದಾನದ ಮಹತ್ವ ಕುರಿತು ತಿಳಿ ಹೇಳೋಣ, ನಾವು ಮತದಾನ ಮಾಡುವ ಮೂಲಕ ರಾಷ್ಟ್ರದ ಭವಿಷ್ಯದ ನಿರ್ವಣಕ್ಕೆ ಕೈಜೋಡಿಸೋಣ ಹೀಗೆ ಪ್ರತಿ ದಿನ ಹತ್ತು ಹಲವು ಬರಹಗಳನ್ನು ತನ್ನ ಕಾರ್​ನ ಹಿಂಬದಿಯಲ್ಲಿ ಹಾಕಿಕೊಳ್ಳುತ್ತಿದ್ದಾರೆ.

ಯಾವುದೇ ಪಕ್ಷದಲ್ಲಿ ಗುರುತಿಸಿಕೊಳ್ಳದ ಇವರು ಕಳಸ ರೋಟರಿ ಸಂಸ್ಥೆ ಅಧ್ಯಕ್ಷರಾಗಿದ್ದಾರೆ. ಸಾಮಾಜಿಕ ಕಾರ್ಯಗಳಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುವ ಇವರು ಚುನಾವಣೆ ಸಂದರ್ಭದಲ್ಲಿಯೂ ನನ್ನ ದೇಶಕ್ಕಾಗಿ ನನ್ನದೊಂದು ಸಣ್ಣ ಕೊಡುಗೆ ಇರಲಿ ಎನ್ನುವ ಆಶಯ ವ್ಯಕ್ತಡಿಸುತ್ತಾರೆ.

ಯುವಜನತೆ ಮತದಾನದ ಆಸಕ್ತಿ ಕಳೆದುಕೊಳ್ಳುತ್ತಿದೆ. ಮತದಾನದ ಅವಶ್ಯಕತೆ ಮತ್ತು ಪ್ರಾಮುಖ್ಯತೆ ಅರಿವು ಇರುವುದಿಲ್ಲ. ಚುನಾವಣೆಗೆ ಸರ್ಕಾರ ರಜೆ ಕೊಟ್ಟರೆ ಮತದಾನ ಮಾಡದೆ ದುರ್ಬಳಕೆ ಮಾಡಿಕೊಳ್ಳುವವರಿದ್ದಾರೆ. ಈ ನಿಟ್ಟಿನಲ್ಲಿ ಕಡ್ಡಾಯವಾಗಿ ಪ್ರತಿಯೊಬ್ಬರೂ ಮತದಾನ ಮಾಡಿ ತನ್ನ ಹಕ್ಕನ್ನು ಚಲಾಯಿಸಲಿ ಎಂದು ಈ ದೇಶದ ಪ್ರಜೆಯಾಗಿ ನನ್ನ ಕರ್ತವ್ಯ ಮಾಡುತ್ತಿದ್ದೇನೆ ಎನ್ನುತ್ತಾರೆ ಕಿರಣ್ ಶೆಟ್ಟಿ.