ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸುವಂತೆ ಜಾಗೃತಿ

ಕೊಳ್ಳೇಗಾಲ: ಪೊಲೀಸ್ ಇಲಾಖೆ, ತಾಲೂಕು ಕಾನೂನು ಸೇವೆಗಳ ಸಮಿತಿ, ವಿವಿಧ ಸಂಘಟನೆಗಳ ಆಶ್ರಯದಲ್ಲಿ ಮಂಗಳವಾರ ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಸಂಚರಿಸುವ ವಾಹನ ಸವಾರರಿಗೆ ಹೆಲ್ಮೆಟ್ ಕಡ್ಡಾಯವಾಗಿ ಧರಿಸುವಂತೆ ಜಾಗೃತಿ ಜಾಥಾ ನಡೆಸಲಾಯಿತು.

ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಎಸ್.ಜೆ.ಕೃಷ್ಣ ಅವರು ಜಾಥಾಕ್ಕೆ ಚಾಲನೆ ನೀಡಿದರು. ಬಳಿಕ ರಸ್ತೆ ಸುರಕ್ಷತಾ ಕಾರ್ಯಕ್ರಮ, ಹೆಲ್ಮೆಟ್ ಧರಿಸುವುದರಿಂದ ಆಗುವ ಉಪಯೋಗದ ಬಗ್ಗೆ ಕರಪತ್ರ ಬಿಡುಗಡೆ ಮಾಡಿದರು.

ನಂತರ ಪಟ್ಟಣದ ನ್ಯಾಯಾಲಯದ ಆವರಣದಿಂದ ಹೆಲ್ಮೆಟ್ ಧರಿಸಿದ ಪೊಲೀಸ್ ಸಿಬ್ಬಂದಿ, ವಿದ್ಯಾರ್ಥಿಗಳನ್ನೊಳಗೊಂಡ ಜಾಥಾ, ಡಾ.ಬಿ.ಆರ್.ಅಂಬೇಡ್ಕರ್ ರಸ್ತೆ, ಮಸೀದಿ ವೃತ್ತ, ಡಾ.ರಾಜ್‌ಕುಮಾರ್ ರಸ್ತೆ, ಡಾ.ವಿಷ್ಣುವರ್ಧನ್ ರಸ್ತೆ, ಎಂಜಿಎಸ್‌ವಿ ಕಾಲೇಜು ರಸ್ತೆ ಮಾರ್ಗ ನ್ಯಾಷನಲ್ ಶಾಲಾ ಆವರಣದಲ್ಲಿ ಕೊನೆಯಾಯಿತು.

ಇದೇ ವೇಳೆ ಸರ್ಕಲ್ ಇನ್ಸ್‌ಪೆಕ್ಟರ್ ಆರ್.ಶ್ರೀಕಾಂತ್ ಮಾತನಾಡಿ, ಹೆಲ್ಮೆಟ್ ಕಡ್ಡಾಯಗೊಳಿಸಿ ಸುಪ್ರೀಂಕೋರ್ಟ್ ಹಿಂದೆಯೇ ಆದೇಶ ಹೊರಡಿಸಿದೆ. ರಸ್ತೆಗಳಲ್ಲಿ ಸಂಭವಿಸುವ ನೂರರಷ್ಟು ಅಪಘಾತಗಳಲ್ಲಿ ಶೇ.90ರಷ್ಟು ಸಾವು ಬೈಕ್ ಸವಾರರ ತಲೆಗೆ ಬಿದ್ದ ಪೆಟ್ಟಿನಿಂದಲೇ ಆಗಿರುತ್ತವೆ. ದ್ವಿಚಕ್ರ ವಾಹನ ಚಾಲನೆ ಮಾಡುವವರು, ಹಿಂಬದಿ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಜನರ ಪ್ರಾಣ ರಕ್ಷಣೆ ಗಮನದಲ್ಲಿಟ್ಟುಕೊಂಡು ನ್ಯಾಯಾಲಯ ಹೆಲ್ಮೆಟ್ ಕಡ್ಡಾಯಗೊಳಿಸಿದೆ ಎಂಬುವುದು ಗಮನಾರ್ಹ. ಇದನ್ನು ಉಲ್ಲಂಘಿಸುವರಿಗೆ ಕಾನೂನುಬದ್ಧವಾದ ದಂಡ, ಶಿಕ್ಷೆ ಖಚಿತ ಎಂದು ಎಚ್ಚರಿಸಿದರು. ಅಲ್ಲದೆ ಈ ಬಗ್ಗೆ ಎಲ್ಲರೂ ಜಾಗೃತಿಗೊಳ್ಳಬೇಕು ಎಂದು ಹೇಳಿದರು.

ಜಾಥಾದಲ್ಲಿ ಪ್ರಧಾನ ಸಿವಿಲ್ ನ್ಯಾಯಾಧೀಶ ಟಿ.ಶ್ರೆಕಾಂತ್, ಅಪರ ಸಿವಿಲ್ ನ್ಯಾಯಾಧೀಶ ಸಂತೋಷ್ ಕೊಠಾರಿ, ವಕೀಲರ ಸಂಘದ ಅಧ್ಯಕ್ಷ ಪಿ.ಮಹದೇವ, ಪಟ್ಟಣ ಠಾಣೆ ಪಿಎಸ್‌ಐ ರಾಜೇಂದ್ರ, ಗ್ರಾಮಾಂತರ ಠಾಣೆ ಪಿಎಸೈ ವಿ.ಸಿ.ಅಶೋಕ್ ಮತ್ತಿತರರಿದ್ದರು.

 

Leave a Reply

Your email address will not be published. Required fields are marked *