ರಾಷ್ಟ್ರೀಯ ಪ್ರಶಸ್ತಿ ಪ್ರದಾನ, ಸಂಗೀತೋತ್ಸವ ನಾಳೆ

ವಿಜಯವಾಣಿ ಸುದ್ದಿಜಾಲ ಧಾರವಾಡ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸ್ವರಸಾಮ್ರಾಟ್ ಪಂ. ಬಸವರಾಜ ರಾಜಗುರು ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಸಹಯೋಗದಲ್ಲಿ ಪಂ. ಬಸವರಾಜ ರಾಜಗುರು ಜನ್ಮದಿನಾಚರಣೆ ಅಂಗವಾಗಿ ಆ. 24ರಂದು ಸಂಜೆ 6ಕ್ಕೆ ನಗರದ ಡಾ. ಅಣ್ಣಾಜಿರಾವ್ ಶಿರೂರ ರಂಗಮಂದಿರದಲ್ಲಿ (ಸೃಜನಾ) ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಹಾಗೂ ಸಂಗೀತೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ದೇಶದ ಸುಪ್ರಸಿದ್ಧ ಗಾಯಕ ಮುಂಬೈನ ಪಂ. (ಡಾ) ಅಜಯ್ ಪೋಹಣಕರ್ 2019ನೇ ಸಾಲಿನ ‘ರಾಷ್ಟ್ರೀಯ ಪ್ರಶಸ್ತಿ’ಗೆ ಭಾಜನರಾಗಿದ್ದಾರೆ. ಪ್ರಶಸ್ತಿ ಮೊತ್ತ 1 ಲಕ್ಷ ರೂ. ಒಳಗೊಂಡಿದೆ. ಪುಣೆಯ ಸಾವನಿ ಶೇಂಡೆ ಹಾಗೂ ಬಾಗಲಕೋಟೆಯ ಕೇಶವ ಜೋಶಿ ‘ಯುವ ಪ್ರಶಸ್ತಿ’ಗೆ ಭಾಜನರಾಗಿದ್ದು, ಪ್ರಶಸ್ತಿಯು 25,000 ರೂ. ನಗದು ಹಾಗೂ ಸ್ಮರಣಿಕೆ ಒಳಗೊಂಡಿದೆ.

ಸಚಿವ ಪ್ರಲ್ಹಾದ ಜೋಶಿ ಪ್ರಶಸ್ತಿ ಪ್ರದಾನ ಮಾಡುವರು. ಸಚಿವ ಜಗದೀಶ ಶೆಟ್ಟರ್ ಕಾರ್ಯಕ್ರಮ ಉದ್ಘಾಟಿಸುವರು. ಶಾಸಕ ಅರವಿಂದ ಬೆಲ್ಲದ ಅಧ್ಯಕ್ಷತೆ ವಹಿಸುವರು. ಪ್ರಶಸ್ತಿ ಪ್ರದಾನದ ನಂತರ ಪ್ರಶಸ್ತಿ ಪುರಸ್ಕೃತ ಪಂ. ಅಜಯ್ ಪೋಹಣಕರ್ ಅವರು ಹಿಂದುಸ್ತಾನಿ ಶಾಸ್ತ್ರೀಯ ಗಾಯನ, ಯುವ ಪ್ರಶಸ್ತಿ ಪುರಸ್ಕೃತರಾದ ಸಾವಣಿ ಶೇಂಡೆ ಮತ್ತು ಕೇಶವ ಜೋಶಿ ಗಾಯನ ಪ್ರಸ್ತುತಪಡಿಸುವರು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಮಂಜುಳಾ ಯಲಿಗಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಶಸ್ತಿ ಪುರಸ್ಕೃತರ ಪರಿಚಯ

ಪಂ. (ಡಾ) ಅಜಯ್ ಪೋಹಣಕರ್ ಮುಂಬೈ: ಇವರು ಜನಿಸಿದ್ದು ಜಬಲಪುರದಲ್ಲಿ. ತಾಯಿ ಡಾ. ಸುಶೀಲಾ ಪೋಹಣಕರ್ ಕಿರಾಣಾ ಘರಾಣೆಯ ಗಾಯಕಿ. ಅವರಿಂದಲೇ ಸಂಗೀತಾಭ್ಯಾಸ ಆರಂಭಿಸಿದ ಪಂ. ಅಜಯ್, ಖ್ಯಾತ ಗಾಯಕ ಉಸ್ತಾದ್ ಅಮೀರ ಖಾನ್​ರ ಅನುಗ್ರಹದಿಂದ 10ನೇ ವಯಸ್ಸಲ್ಲೇ ಸಂಗೀತ ಕ್ಷೇತ್ರಕ್ಕೆ ಪರಿಚಿತರಾದರು. ಕಿರಾಣಾ, ಪಟಿಯಾಲಾ, ಗ್ವಾಲಿಯರ್ ಘರಾಣೆಗಳಲ್ಲಿ ಸಾಧನೆಗೈದು ಪ್ರಬುದ್ಧ ಕಲಾವಿದರಾದರು. ಶಾಸ್ತ್ರೀಯ, ಲಘುಶಾಸ್ತ್ರೀಯ, ಭಕ್ತಿ ಸಂಗೀತ, ಪಾಶ್ಚಾತ್ಯ ಸಂಗೀತದಲ್ಲೂ ಪರಿಣತಿ ಪಡೆದು ವೈವಿಧ್ಯಮಯ ಗಾಯಕರಾಗಿ ಭಾರತ, ದಕ್ಷಿಣ ಆಫ್ರಿಕಾ, ಕೇಂಬ್ರಿಡ್ಜ್ ವಿಶ್ವವಿದ್ಯಾಲಯ ಹಾರ್ವರ್ಡ್, ಬೋಸ್ಟನ್, ದುಬೈ, ಜಕಾರ್ತಾ, ಲಾಸ್ ಏಂಜಲಿಸ್, ಇತರೆಡೆ ಸುಮಧುರ ಗಾಯನದಿಂದ ಕೇಳುಗರ ಮನ ಸೆಳೆದರು. ಹಲವಾರು ಧ್ವನಿಸುರುಳಿಗಳನ್ನು ಬಿಡುಗಡೆ ಮಾಡಿರುವ ಅವರು, ನೂರಾರು ಶಿಷ್ಯರನ್ನು ತಯಾರು ಮಾಡಿದ್ದಾರೆ. ಮಧ್ಯಪ್ರದೇಶದ ತಾನಸೇನ್ ಪ್ರಶಸ್ತಿ, ಮಾಣಿಕರತ್ನ ಪುರಸ್ಕಾರ, ವತ್ಸಲಾ ಭೀಮಸೇನ ಜೋಶಿ ಪುರಸ್ಕಾರ, ಕೇಂದ್ರದ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪ್ರಮುಖವಾದವು.

ಸಾವನಿ ಶೇಂಡೆ, ಪುಣೆ: ಸಂಗೀತಗಾರರ ಕುಟುಂಬದಲ್ಲಿ ಜನಿಸಿದ ಯುವ ಗಾಯಕಿ ಸಾವನಿ ಶೇಂಡೆ, ಅಜ್ಜಿ ಕಿರಾಣಾ ಘರಾಣೆಯ ಗಾಯಕಿ, ವಿದುಷಿ ಕುಸುಮಾ ಶೇಂಡೆ ಅವರಲ್ಲಿ ಸಂಗೀತ ಶಿಕ್ಷಣ ಆರಂಭಿಸಿದರು. ತಂದೆ ಸಂಜೀವ ಶೇಂಡೆ ಅವರಲ್ಲಿ ಲಘು ಶಾಸ್ತ್ರೀಯ ಸಂಗೀತ ತರಬೇತಿ ಪಡೆದರು. ಗ್ವಾಲಿಯರ್ ಘರಾಣೆಯ ಖ್ಯಾತ ಗಾಯಕಿ, ವಿದುಷಿ ವೀಣಾ ಸಹಸ್ರಬುದ್ದೆ ಅವರ ಮಾರ್ಗದರ್ಶನದಲ್ಲಿ ಸಾಧನೆ ಮಾಡಿ ಪ್ರಬುದ್ಧ ಗಾಯಕಿಯಾದರು. ಬಾಲ್ಯದಲ್ಲೇ ದೇಶದ ಪ್ರತಿಷ್ಠಿತ ಸಂಗೀತ ವೇದಿಕೆಗಳಲ್ಲಿ ಕಾರ್ಯಕ್ರಮ ನೀಡಿದ್ದಾರೆ. ದೇಶ- ವಿದೇಶಗಳಲ್ಲಿ ಸುಮಧುರ ಗಾಯನದಿಂದ ಜನಪ್ರಿಯರಾಗಿದ್ದಲ್ಲದೆ ಹಿನ್ನೆಲೆ ಗಾಯಕಿಯಾಗಿಯೂ ಪ್ರಸಿದ್ಧರಾಗಿದ್ದಾರೆ. ಉಸ್ತಾದ್ ಬಿಸ್ಮಿಲ್ಲಾಖಾನ್ ಯುವ ಪುರಸ್ಕಾರ, ಮಹಾರಾಷ್ಟ್ರ ಸರ್ಕಾರದ ಹಿನ್ನೆಲೆ ಗಾಯಕಿ ಪ್ರಶಸ್ತಿ, ಪಂ. ಜಸರಾಜ ಪುರಸ್ಕಾರ, ಮಾಣಿಕವರ್ವ ಪ್ರಶಸ್ತಿ ಪ್ರಮುಖವಾದವು.

ಕೇಶವ ಜೋಶಿ, ಬೆಂಗಳೂರು: ಬಾಗಲಕೋಟೆ ಮೂಲದ ಇವರು ಪ್ರತಿಭಾನ್ವಿತ ತಬಲಾ ವಾದಕ. 8ನೇ ವಯಸ್ಸಿನಿಂದ ಪಂ. ಎಚ್. ಮೋರೆ ಅವರಲ್ಲಿ 12 ವರ್ಷ ತಬಲಾ ಅಭ್ಯಾಸ ಮಾಡಿದರು. ನಂತರ ಬನಾರಸ್ ಘರಾಣೆಯ ತಬಲಾ ಮಾಂತ್ರಿಕ ಪಂ. ಈಶ್ವರಲಾಲ ಮಿಶ್ರಾ ಅವರಲ್ಲಿ ಮಾರ್ಗದರ್ಶನ ಪಡೆದರು. ಗಂಧರ್ವ ಮಹಾವಿದ್ಯಾಲಯದಿಂದ ತಬಲಾದಲ್ಲಿ ಅಲಂಕಾರ ಪದವಿ ಪಡೆದರು. ಪ್ರಸಿದ್ಧ ಕಲಾವಿದರೊಂದಿಗೆ ದೇಶ- ವಿದೇಶಗಳಲ್ಲಿ ತಬಲಾ ನುಡಿಸಿದ್ದಾರೆ. ಬೆಂಗಳೂರಿನಲ್ಲಿ ನಟರಾಜ ಸಂಗೀತ ವಿದ್ಯಾಲಯ ಆರಂಭಿಸಿ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದ್ದಾರೆ.

Leave a Reply

Your email address will not be published. Required fields are marked *