ಗೌರವ ಕೇಳಿ ಪಡೆಯಬಾರದು

ಅಜ್ಜಂಪುರ: ಪ್ರಶಸ್ತಿಗಾಗಿ ಅರ್ಜಿ ಹಾಕುವುದಕ್ಕಿಂತ ದೊಡ್ಡ ಅವಮಾನ ಮತ್ತೊಂದಿಲ್ಲ. ಸಾಧನೆ ಗುರುತಿಸಿ ಸಂಬಂಧಪಟ್ಟವರು ಪ್ರಕಟಿಸಬೇಕೇ ಹೊರುತು ನನಗೆ ಪ್ರಶಸ್ತಿ ಕೊಡಿ ಎಂದು ಅಂಗಾಲಾಚುವುದು ಅಸಹ್ಯ ಎಂದು ತರಳಬಾಳು ಜಗದ್ಗುರು ಡಾ. ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಸಾಣೇಹಳ್ಳಿಯಲ್ಲಿ ಆಯೋಜಿಸಿರುವ ರಾಷ್ಟ್ರೀಯ ನಾಟಕೋತ್ಸವ ಸಮಾರೋಪ ಮತ್ತು ಶ್ರೀ ಶಿವಕುಮಾರ ಪ್ರಶಸ್ತಿ ಪ್ರದಾನ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ನಮ್ಮ ಗುರುವರ್ಯರ ಹೆಸರಿನಲ್ಲಿರುವ ‘ಶ್ರೀ ಶಿವಕುಮಾರ ಪ್ರಶಸ್ತಿ’ ಪಡೆಯಲು ಅರ್ಜಿ ಹಾಕಬೇಕಿಲ್ಲ. ಪ್ರಶಸ್ತಿ ರೂಪರೇಷೆಗೆ ಅನುಗುಣವಾಗಿ, ಶ್ರೀ ಶಿವಕುಮಾರ ಶ್ರೀಗಳ ಆಶಯಕ್ಕನುಗುಣವಾಗಿ ಪ್ರಶಸ್ತಿಯೇ ಅವರನ್ನು ಹುಡುಕಿಕೊಂಡು ಹೋಗುವುದು. ಇಂಥ ಪ್ರಶಸ್ತಿ ದೇಶದಲ್ಲಿಯೇ ಮೊದಲು ಎಂದರು.

ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಿ ಪ್ರಶಸ್ತಿ ನೀಡುವ ಕ್ರಮ ತಪ್ಪಬೇಕು. ಪ್ರಶಸ್ತಿಗೆ ಅರ್ಜಿ ಹಾಕಿರುವವರನ್ನು ಅನರ್ಹರು ಎಂದು ಪರಿಗಣಿಸಬೇಕು. ದೇಶದಲ್ಲಿ ವೈವಿಧ್ಯತೆ ಇದ್ದರೂ ಸಾಮರಸ್ಯದ ಬೆಸುಗೆ ಇದೆ. ಈ ಸಂಸ್ಕೃತಿ ಉಳಿಸಿಕೊಳ್ಳಬೇಕಿದೆ. ಸಂಸ್ಕೃತಿ ಅವನತಿ ಹೊಂದದಂತೆ ಮುಂದುವರಿಸಿಕೊಂಡು ಹೋಗಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ ಎಂದರು.

ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಹಿಂದಿನ ಪರಂಪರೆ ಗಮನದಲ್ಲಿ ಇಟ್ಟುಕೊಂಡು ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು. ತಂತ್ರಜ್ಞಾನ ಸರಿಯಾಗಿ ಬಳಸುವ ವಿವೇಕ ನಮಗಿರಬೇಕು. ಇಂದು ನಮ್ಮ ಅವನತಿ-ಉನ್ನತಿ ತಂತ್ರಜ್ಞಾನವನ್ನುಅವಲಂಬಿಸಿದೆ. ರೈತರಿಗೆ ನೀರು, ವಿದ್ಯುತ್ ಮತ್ತು ಸೂಕ್ತ ಬೆಲೆ ದೊರೆತರೆ ಯಾವ ಸಾಲ ಮನ್ನವೂ ಬೇಕಿಲ್ಲ. ಆದ್ಯತೆ ಮೇರೆಗೆ ಸರ್ಕಾರಗಳು ಕೆರೆ ತುಂಬಿಸುವ ಕೆಲಸ ಮಾಡಬೇಕು ಎಂದರು.

ಪ್ರತಿಯೊಬ್ಬರಲ್ಲೂ ಪ್ರತಿಭೆ ಇರುತ್ತದೆ. ಅದನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ಇಂದು ಜನರಲ್ಲಿ ಮಾನವೀಯತೆ ಕಾಣೆಯಾಗುತ್ತಿದೆ. ಮತ ಮಾರುವ, ಕೊಳ್ಳುವ ಜನರಿಂದ ಪ್ರಜಾಪ್ರಭುತ್ವದ ಅವನತಿಯಾಗುತ್ತದೆ. ಮತದಾರ ಸರಿಯಾದರೆ ನೇತಾರ ಸರಿಹೋಗುತ್ತಾನೆ. ಮಠಗಳು ಜನರ ಮನಸ್ಸನ್ನು ಕಟ್ಟಬೇಕು. ಜನರಿಗೆ ಜ್ಞಾನದ ಹಸಿವು ಇಂಗಿಸಿ ಮೌಢ್ಯಗಳನ್ನು ಕಳೆದು ವಿಚಾರಶೀಲರನ್ನಾಗಿಸಬೇಕು ಎಂದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ಮಠವೆಂದರೆ ಶಿಕ್ಷಣ, ಧರ್ಮ, ದಾಸೋಹ ಮಾತ್ರ ಎನ್ನುವ ಕಲ್ಪನೆ ಇದೆ. ಆದರೆ ರಂಗಭೂಮಿಯನ್ನೇ ತನ್ನ ಕಾರ್ಯಕ್ಷೇತ್ರವನ್ನಾಗಿಸಿಕೊಂಡ ಏಕೈಕ ಮಠ ಸಾಣೇಹಳ್ಳಿಯ ಶ್ರೀಮಠ. ವಿದೇಶಿಗರೂ ಸಾಣೇಹಳ್ಳಿಯನ್ನು ಕರ್ನಾಟಕದ ಸಾಂಸ್ಕೃತಿಕ ಕೇಂದ್ರ ಎಂದು ಬಣ್ಣಿಸಿದ್ದಾರೆ ಎಂದರು.

ಶಾಸಕ ಗೂಳಿಹಟ್ಟಿ ಡಿ.ಶೇಖರ್ ಮಾತನಾಡಿ, ರಾಜಕಾರಣಿಗಳು ಪಂಡಿತಾರಾಧ್ಯ ಶ್ರೀಗಳನ್ನು ನೋಡಿ ಕಲಿಯಬೇಕು. ಪೂಜ್ಯರು ನಾಟಕವಷ್ಟೇ ಅಲ್ಲ, ಜನರ ಬದುಕಿಗೆ ಬೇಕಾಗಿರುವುದೆಲ್ಲ ಮಾಡುವ ಸಂಕಲ್ಪ ಶಕ್ತಿ ಹೊಂದಿದ್ದಾರೆ ಎಂದು ಹೇಳಿದರು.

ಶಾಸಕ ಡಿ.ಎಸ್.ಸುರೇಶ್, ರಂಗಕರ್ವಿು ಶ್ರೀನಿವಾಸ ಜಿ.ಕಪ್ಪಣ್ಣ, ಲಲಿತಾ ಕಪ್ಪಣ್ಣ, ಸುವರ್ಣ ಬಸವರಾಜ ಬೆಂಗೇರಿ, ಸಿ.ಬಸವಲಿಂಗಯ್ಯ, ಶ್ರೀಮತಿ ಚಂದ್ರಾ ಅಶ್ವತ್ಥ್ ಮತ್ತಿತರರು ಉಪಸ್ಥಿತರಿದ್ದರು.

ಕೆರೆ ತುಂಬಿಸಲು ಮುಂದಾಗಿ: ಈ ಬಾರಿ ತುಂಗಭದ್ರ ನದಿಯಲ್ಲಿ 127 ಟಿಎಂಸಿ ನೀರು ವ್ಯರ್ಥವಾಗಿ ಸಮುದ್ರಕ್ಕೆ ಹರಿದು ಹೋಗಿದೆ. ನಮಗೆ ಬೇಕಾಗಿರುವುದು 1 ಟಿಎಂಸಿ ಮಾತ್ರ. ಅಂದರೆ 127 ವರ್ಷ ಬಳಸಬಹುದಾದ ನೀರನ್ನು ವ್ಯರ್ಥ ಮಾಡಲಾಗಿದೆ. ಇದಕ್ಕೆ ಯಾರು ಹೊಣೆ ಎಂದು ಡಾ. ಶ್ರೀ ಶಿವಮೂರ್ತಿ ಶಿವಾಚಾರ್ಯರು ಪ್ರಶ್ನಿಸಿದರು. ಕೆರೆ ತುಂಬಿಸುವ ಕಾರ್ಯಕ್ಕೆ ವಿರೋಧವಾಗಿ ವಿರೋಧ ಪಕ್ಷದವರು ಆಡಳಿತ ಪಕ್ಷಗಳಿಗೆ ಸಹಕಾರ ನೀಡಬೇಕು. ಕೆರೆ ತುಂಬಿಸುವ ಯೋಜನೆ ಪೂರ್ಣಗೊಂಡರೆ ನಮ್ಮ ರಾಜ್ಯ ದೇಶದಲ್ಲಿಯೇ ಸಂಪದ್ಭರಿತ ರಾಜ್ಯವಾಗುವುದು. ತರಳಬಾಳು ಹುಣ್ಣಿಮೆ ಸಂದರ್ಭದಲ್ಲಿ ಜಗಳೂರು ಮತ್ತು ಭರಮಸಾಗರದ ಸುತ್ತಮುತ್ತಲಿನ ಕೆರೆ ತುಂಬಿಸುವ 2 ಯೋಜನೆ ಮಂಜೂರಾಗಿವೆ. ಅವು ಆದಷ್ಟು ಬೇಗ ಕಾರ್ಯರೂಪಕ್ಕೆ ಬರುವಂತಾಗಲಿ ಎಂದರು.

ಬಸವರಾಜ್​ಗೆ ಶಿವಕುಮಾರ ಪ್ರಶಸ್ತಿ: ವೃತ್ತಿ ರಂಗಭೂಮಿಯಲ್ಲಿ ಅಪರೂಪದ ಸಾಧನೆ ಮಾಡಿದ ಧಾರವಾಡದ ಹಿರಿಯ ರಂಗಕರ್ವಿು ಬಸವರಾಜ್ ಬೆಂಗೇರಿಗೆ ಶ್ರೀ ಶಿವಕುಮಾರ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಬಸವರಾಜ ಬೆಂಗೇರಿ, ಇಂದು ನನ್ನ ಬಣ್ಣದ ಬದುಕು ಸಾರ್ಥಕವಾಗಿದೆ. ಪ್ರಶಸ್ತಿ ಹುಡುಕಿಕೊಂಡು ಹೋಗುವ ದಿನಮಾನಗಳಲ್ಲಿ ಪ್ರಶಸ್ತಿಯೇ ನನ್ನನ್ನು ಹುಡುಕಿಕೊಂಡು ಬಂದಿರುವುದು ಅತ್ಯಂತ ಸಂತೋಷ ತಂದಿದೆ. ಸತ್ಯ, ಶುದ್ಧ ಕಾಯಕ ಪರಿಕಲ್ಪನೆ ಮೇರೆಗೆ ರಂಗ ಸೇವೆ ಮಾಡುತ್ತೇನೆ ಎಂದರು.