ಶಿಗ್ಗಾಂವಿ: ವಾರದ 6 ದಿನ ಶಾಲಾ ಮಕ್ಕಳಿಗೆ ಪೂರೈಸುತ್ತಿರುವ ಪೂರಕ ಪೌಷ್ಟಿಕ ಆಹಾರ ಯೋಜನೆ ಅಭಿನಂದನಾರ್ಹ. ಶಾಲಾ ಮಟ್ಟದಲ್ಲಿ ವಿತರಣೆಯ ಹೆಚ್ಚಿನ ಹೊರೆ ಮುಖ್ಯ ಶಿಕ್ಷಕರ ಮೇಲಾಗುತ್ತಿದ್ದು, ಅವರಿಗೆ ಆಡಳಿತಾತ್ಮಕವಾಗಿ ಹೆಚ್ಚಿನ ಒತ್ತಡದ ಪರಿಣಾಮ ಬೀರುತ್ತಿದೆ. ಪೂರಕ ಪೌಷ್ಟಿಕ ಆಹಾರ ವಿತರಣೆಯ ಜವಾಬ್ದಾರಿಯನ್ನು ಖಾಸಗಿ ಏಜೆನ್ಸಿಗಳಿಗೆ ನೀಡಬೇಕು ಎಂದು ಒತ್ತಾಯಿಸಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ತಾಲೂಕು ಘಟಕ ಸೋಮವಾರ ತಹಸೀಲ್ದಾರ್ ಸಂತೋಷ ಹಿರೇಮಠ ಅವರಿಗೆ ಮನವಿ ಸಲ್ಲಿಸಿತು.
ಶಿಗ್ಗಾಂವಿ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಅರುಣ ಹುಡೇದಗೌಡ್ರ ಮಾತನಾಡಿ, ಶಾಲಾ ಮಕ್ಕಳಿಗೆ ಪೂರಕ ಪೌಷ್ಟಿಕ ಆಹಾರ ಪೂರೈಕೆ ಯೋಜನೆ ಮಕ್ಕಳ ದೈಹಿಕ, ಬೌದ್ಧಿಕ, ಮಾನಸಿಕ ವಿಕಸನಕ್ಕೆ ಪೂರಕವಾಗಿದೆ. ಆದರೂ ನಿತ್ಯ ಮೊಟ್ಟೆ, ಬಾಳೆಹಣ್ಣು ಅಥವಾ ಶೇಂಗಾ ಚಿಕ್ಕಿ ವಿತರಣೆ ಹೆಚ್ಚುವರಿ ಕಾರ್ಯ ಮುಖ್ಯ ಶಿಕ್ಷಕರ ಕಾರ್ಯಗಳ ಮೇಲೆ ಒತ್ತಡ ಮತ್ತು ತಾಂತ್ರಿಕ ಸಮಸ್ಯೆ ಉಂಟು ಮಾಡುತ್ತಿದೆ.
ಈ ಆಹಾರ ಪದಾರ್ಥಗಳ ಖರೀದಿ, ದಾಸ್ತಾನು ಪ್ರಕ್ರಿಯೆಯಲ್ಲಿ ಸಮಸ್ಯೆಗಳಿವೆ. ನಗರ ಪ್ರದೇಶಗಳಿಗಿಂತ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಸಮಸ್ಯೆಗಳಿವೆ. ನಿತ್ಯದ ಬೆಲೆ ಏರಿಳಿತದಲ್ಲಿ ಸರ್ಕಾರ ನಿಗದಿಪಡಿಸಿರುವ ದರದಲ್ಲಿ ಮೊಟ್ಟೆ ಮತ್ತು ಬಾಳೆಹಣ್ಣು ಖರೀದಿಯಲ್ಲಿ ಶಿಕ್ಷಕರಿಗೆ ಅನೇಕ ಹೊರೆಯಾಗುತ್ತಿದೆ. ಈ ಆಹಾರ ಪದಾರ್ಥಗಳ ಸಂಗ್ರಹಣೆ ಸಾಧ್ಯವಾಗದಿರುವುದರಿಂದ ನಿತ್ಯ ಖರೀದಿ ಮತ್ತು ವಿತರಣೆ ಮಾಡಬೇಕಾಗುತ್ತಿದೆ. ಗುಣಮಟ್ಟದ ಆಹಾರ ಕೆಲವೆಡೆ ಪೂರೈಕೆಗೆ ಪೂರೈಕೆದಾರರು ನಿರಾಕರಿಸುತ್ತಾರೆ. ಹಲವು ಕಾರ್ಯಭಾರಗಳು ಉತ್ತಮ ಶೈಕ್ಷಣಿಕ ಚಟುವಟಿಕೆಯ ಮೇಲೆ ಪ್ರಭಾವ ಬೀರುತ್ತಿದೆ ಎಂದರು.
ಪೂರಕ ಪೌಷ್ಟಿಕ ಆಹಾರ ಪೂರೈಕೆ ಹೊಣೆ ಏಜೆನ್ಸಿ ಅಥವಾ ಸಗಟು ಪೂರೈಕೆದಾರರಿಗೆ ವಹಿಸಿ, ಶಿಕ್ಷಕರಿಗೆ ಉನ್ನತ ಬೋಧನಾ ಸಾಮರ್ಥ್ಯ ಮರೆಯಲು ಅವಕಾಶ ನೀಡಬೇಕು ಎಂದರು.
ತಹಸೀಲ್ದಾರ್ ಸಂತೋಷ ಹಿರೇಮಠ ಮನವಿ ಸ್ವೀಕರಿಸಿ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಮತ್ತು ಮೇಲಾಧಿಕಾರಿಗಳ ಜತೆ ರ್ಚಚಿಸಿ ಸೂಕ್ತ ಕ್ರಮ ಜರುಗಿಸುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಎಫ್.ಸಿ. ರಾಚಪ್ಪಗೌಡ್ರ, ಲತಾ ಗುಳೇರ, ಬಿ.ವೈ. ಉಪ್ಪಾರ, ಸೈಯದ ಹುಸೇನ, ಎ.ಎಫ್. ಹೊಸಮನಿ, ಆರ್.ಎಚ್. ಕೊಪ್ಪ, ಎಸ್.ಎನ್. ಮುಗಳಿ, ಎನ್.ಆರ್. ಸೇತಸನದಿ, ಆರ್.ಎಂ. ಹಾರೋಗೇರಿ, ಶಿಕ್ಷಕರಿದ್ದರು.