ಸರ್ಕಾರಿ ಇಲಾಖೆಗಳ ಆಡಳಿತದಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಜನರ ಕೈಗೆ ಸಿಕ್ಕ ಅಸ್ತ್ರವೇ ಮಾಹಿತಿ ಹಕ್ಕು ಕಾಯ್ದೆ (ಆರ್ಟಿಐ). ಸರ್ಕಾರದ ಯೋಜನೆ ಯಾವುದು, ಅದಕ್ಕೆ ಎಷ್ಟು ಖರ್ಚು ಆಗಿದೆ, ಯಾವಾಗ ಕಾಮಗಾರಿ ಪೂರ್ಣಗೊಳ್ಳುತ್ತದೆ… ಹೀಗೆ ಪ್ರತಿಯೊಂದನ್ನೂ ಪ್ರಶ್ನಿಸಿ ಮಾಹಿತಿ ತಿಳಿದುಕೊಳ್ಳಲು ಸರ್ಕಾರವೇ ಜನರಿಗೆ ಒದಗಿಸಿದ ಸೌಲಭ್ಯ ಇದು. ಆದರೆ ಇದು ಕೆಲವು ವ್ಯಕ್ತಿಗಳಿಂದ ದುರ್ಬಳಕೆ ಆಗುತ್ತಿರುವುದು ಈಗ ಗುಟ್ಟಾಗಿ ಉಳಿದಿಲ್ಲ.
ಸರ್ಕಾರದ ಎಲ್ಲ ಇಲಾಖೆಗಳಿಗೂ ಆರ್ಟಿಐನಡಿ ಸಾವಿರಾರು ಅರ್ಜಿಗಳನ್ನು ಸಲ್ಲಿಸುವುದನ್ನೇ ಕೆಲವರು ವೃತ್ತಿ ಮಾಡಿಕೊಂಡಿದ್ದಾರೆ. ಹುಬ್ಬಳ್ಳಿಯ ದಾವಲ್ಸಾಬ್ ಎಂ. ಮಿಯಾನವರ್ ಎಂಬಾತ ಬರೋಬ್ಬರಿ 9,646 ಅರ್ಜಿಗಳನ್ನು ಸಲ್ಲಿಸಿದ್ದು ಇದಕ್ಕೆ ಸಾಕ್ಷಿ. ಈ ಎಲ್ಲ ಅರ್ಜಿಗಳನ್ನು ಮಾಹಿತಿ ಹಕ್ಕು ಆಯೋಗ ವಜಾಗೊಳಿಸಿತ್ತು. ಈ ಕ್ರಮವನ್ನು ಹೈಕೋರ್ಟ್ ಕೂಡ ಈಗ ಪುರಸ್ಕರಿಸಿದೆ. ‘ಅರ್ಜಿದಾರರು ಆರ್ಟಿಐ ಕಾಯ್ದೆಯನ್ನು ದುರ್ಬಳಕೆ ಮಾಡಿಕೊಂಡಿರುವುದು ಸ್ಪಷ್ಟವಾಗಿ ಕಂಡುಬಂದಿದೆ. ನ್ಯಾಯಸಮ್ಮತ ಕಾರಣಗಳಿಲ್ಲದೆ ಸಾವಿರಾರು ಅರ್ಜಿಗಳನ್ನು ವಿವಿಧ ಇಲಾಖೆಗಳಿಗೆ ಸಲ್ಲಿಸುವ ಮೂಲಕ ಕಾನೂನು ಪ್ರಕ್ರಿಯೆಯನ್ನು ದುರುಪಯೋಗ ಮಾಡಿಕೊಂಡಿದ್ದಾರೆ’ ಎಂದು ನ್ಯಾಯಮೂರ್ತಿ ಸಚಿನ್ ಶಂಕರ್ ಮಗ್ದುಂ ತರಾಟೆಗೆ ತೆಗೆದುಕೊಂಡಿದ್ದಾರೆ.
9,64,600 ರೂ. ಕೋರ್ಟ್ ಶುಲ್ಕವನ್ನು ಅರ್ಜಿದಾರರಿಂದ ವಸೂಲಿ ಮಾಡುವಂತೆಯೂ ಆದೇಶಿಸಿದ್ದಾರೆ. ಆರ್ಟಿಐ ದುರ್ಬಳಕೆಗೆ ಇದೊಂದು ಸ್ಪಷ್ಟ ಉದಾಹರಣೆ. ಇಂತಹ ನೂರಾರು ಪ್ರಕರಣಗಳಿವೆ. ಇಲಾಖೆಗೆ ಪದೇಪದೆ ಆರ್ಟಿಐನಡಿ ಅರ್ಜಿಗಳನ್ನು ಸಲ್ಲಿಸಿ ದೊಡ್ಡ ಪ್ರಮಾಣದಲ್ಲಿ ಮಾಹಿತಿ ಕೇಳುವುದು, ಅರ್ಜಿದಾರರಿಗೆ ಸಂಬಂಧವೇ ಇಲ್ಲದ ಮಾಹಿತಿಯನ್ನು ಕೇಳುವುದು, ಅಧಿಕಾರಿಗಳು ಮಾಹಿತಿ ನೀಡದ ಸ್ಥಿತಿಯಲ್ಲಿದ್ದರೆ ಹಣ ಕೀಳುವುದು ಹಾಗೂ ಅಧಿಕಾರಿಗಳಿಗೆ ಕಿರಿಕಿರಿ ಉಂಟು ಮಾಡುವ ಉದ್ದೇಶದಿಂದಲೇ ಅರ್ಜಿ ಸಲ್ಲಿಸುವುದು – ಹೀಗೆ ಮಾಡುವ ಮೂಲಕ ಕಾಯ್ದೆಯನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಕರ್ನಾಟಕ ಮಾಹಿತಿ ಹಕ್ಕು ಆಯೋಗದಲ್ಲಿ ಬೆರಳೆಣಿಕೆಯಷ್ಟು ವ್ಯಕ್ತಿಗಳು ಸಲ್ಲಿಸಿರುವ ಸಾವಿರಾರು ಅರ್ಜಿಗಳು ಬಾಕಿ ಉಳಿದಿವೆ.
ಇದರಿಂದಾಗಿಯೇ ಸದುದ್ದೇಶದಿಂದ ಸಾಮಾನ್ಯ ಜನರು ಮತ್ತು ರೈತರು ಸಲ್ಲಿಸಿರುವ ಒಂದೋ ಎರಡೋ ಅರ್ಜಿಗಳು ಸಹ ವಿಲೇವಾರಿಯಾಗದೆ ಉಳಿದಿವೆ. ಇದೇ ಕಾರಣಕ್ಕಾಗಿ ಈ ಹಿಂದೆ 2023ರ ಆ. 31ರವರೆಗೆ ಮಾಹಿತಿ ಹಕ್ಕು ಆಯೋಗದಲ್ಲಿ ವಿಚಾರಣೆಗೆ ಬಾಕಿ ಉಳಿದಿರುವ 300ಕ್ಕಿಂತ ಹೆಚ್ಚು ಮೇಲ್ಮನವಿಗಳನ್ನು ಸಲ್ಲಿಸಿರುವ ಅರ್ಜಿದಾರರ ಪಟ್ಟಿ ಸಿದ್ಧಪಡಿಸಿಕೊಂಡು ಅದರಂತೆ ಪ್ರತಿ ವಾರ ಪೂರ್ಣಪೀಠ ರಚಿಸಿಕೊಂಡು ಪ್ರಕರಣಗಳನ್ನು ವಿಲೇವಾರಿ ಮಾಡುವ ಪ್ರಕ್ರಿಯೆ ಆರಂಭಿಸಲಾಗಿತ್ತು. ಆಗ ಸಾರ್ವಜನಿಕ ಹಿತಾಸಕ್ತಿ ಇಲ್ಲವೆಂಬ ಕಾರಣಕ್ಕೆ ಬರೀ ಮೂವರು ಸಲ್ಲಿಸಿದ್ದ 12,382 ಅರ್ಜಿಗಳನ್ನು ಪೂರ್ಣಪೀಠ ವಜಾಗೊಳಿಸಿತ್ತು. ಇದೆಲ್ಲವೂ ಆರ್ಟಿಐ ಹೇಗೆ ಕೆಲವರಿಂದ ದುರ್ಬಳಕೆ ಆಗುತ್ತಿದೆ ಎಂಬುದಕ್ಕೆ ಸಾಕ್ಷಿ. ಇದನ್ನು ತಪ್ಪಿಸಲು ಮತ್ತು ದುರ್ಬಳಕೆ ಮಾಡಿಕೊಂಡವರನ್ನು ಶಿಕ್ಷೆಗೊಳಪಡಿಸಲು ಸಾಧ್ಯವಾಗುವಂತೆ ಕೇಂದ್ರ ಸರ್ಕಾರ ಇನ್ನಷ್ಟು ಕಟ್ಟುನಿಟ್ಟಿನ ನಿಯಮಗಳನ್ನು ರೂಪಿಸಬೇಕಾಗಿದೆ.