ಹಾವೇರಿ: ರಾಣೆಬೆನ್ನೂರ ತಾಲೂಕಿನಾದ್ಯಂತ ಖಾಸಗಿ ಮೈಕ್ರೊ ಫೈನಾನ್ಸ್ಗಳ ಹಾವಳಿ ವಿಪರೀತವಾಗಿದ್ದು, ಇವರ ಕಾಟಕ್ಕೆ ಹಲವು ಮಹಿಳೆಯರು ಚಿನ್ನದ ಮಾಂಗಲ್ಯ ಸರ ಒತ್ತೆ ಇಟ್ಟಿದ್ದಾರೆ. ಮೈಕ್ರೊ ಫೈನಾನ್ಸ್ಗಳ ಕಿರುಕುಳ ತಪ್ಪಿಸಿ ಮಾಂಗಲ್ಯ ಉಳಿಸಿ ಎಂದು ಆಗ್ರಹಿಸಿ ನೊಂದ ಮಹಿಳೆಯರು ಬುಧವಾರ ಮಾಂಗಲ್ಯ ಸಮೇತವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಅಂಚೆ ಮೂಲಕ ಪತ್ರ ರವಾನಿಸಿದರು.
ರಾಜ್ಯ ರೈತ ಸಂಘದ ರಾಣೆಬೆನ್ನೂರ ತಾಲೂಕು ಘಟಕದ ಅಧ್ಯಕ್ಷ ಹನುಮಂತಪ್ಪ ಕಬ್ಬಾರ ನೇತೃತ್ವದಲ್ಲಿ ಬುಧವಾರ ನಗರದ ಹೊಸಮನಿ ಸಿದ್ದಪ್ಪ ವೃತ್ತದಿಂದ ಎಸ್ಪಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಎಸ್ಪಿಗೆ ಮನವಿ ಪತ್ರ ಸಲ್ಲಿಸ ಲಾಯಿತು. ನಂತರ ಎಂಜಿ ರಸ್ತೆಯ ಅಂಚೆ ಕಚೇರಿಗೆ ತೆರಳಿ ಮಹಿಳೆಯರು ಮಾಂಗಲ್ಯದೊಂದಿಗೆ ಸಿಎಂಗೆ ಪತ್ರ ಬರೆದು ಅಂಚೆ ಮೂಲಕ ರವಾನಿಸಿ ದರು. ಬಳಿಕ ಅಲ್ಲಿಂದ ಡಿಸಿ ಕಚೇರಿವರೆಗೆ ಪಾದಯಾತ್ರೆ ಮೂಲಕ ಸಾಗಿ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.
ಫೈನಾನ್ಸ್ಗಳು
ನಿಯಮಾವಳಿಗಳನ್ನು ಗಾಳಿಗೆ ತೂರಿ ಬಡವರ ರಕ್ತ ಹೀರುತ್ತಿವೆ. ಮಹಿಳೆಯರ ಆಧಾರ್ ಕಾರ್ಡ್ ಪಡೆದು ಬೇರೆಡೆ ಸಾಲ ಪಡೆಯುತ್ತಿದ್ದಾರೆ. ಸಾಲದ ಹಣ ವಾಪಸ್ಗಾಗಿ ಗೃಹಲಕ್ಷ್ಮೀ ಹಣಕ್ಕೂ ಕಣ್ಣು ಹಾಕುತ್ತಿದ್ದಾರೆ. ಇವರ ಕಾಟಕ್ಕೆ ಹಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆಲವರು ಊರು ತೊರೆದಿದ್ದಾರೆ. ಫೈನಾನ್ಸ್ ಹಾವಳಿ ತಡೆಗಟ್ಟುವಲ್ಲಿ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಮುಖ್ಯಮಂತ್ರಿಗಳು ಈ ಬಗ್ಗೆ ಗಮನಹರಿಸಿ ಸೂಕ್ತ ಕ್ರಮ ಜರುಗಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಗಮನ ಸೆಳೆದಿದ್ದ ವಿಜಯವಾಣಿ
ಮೈಕ್ರೊ ಫೈನಾನ್ಸ್ ಗಳ ಹಾವಳಿ ಕುರಿತು ‘ವಿಜಯವಾಣಿ’ ಮುಖಪುಟದಲ್ಲಿ ವರದಿ ಪ್ರಕಟಿಸಿ ಸರ್ಕಾರದ ಗಮನ ಸೆಳೆಯುತ್ತಿದ್ದಂತೆ ಹಲವೆಡೆ ಪ್ರತಿಭಟನೆಗಳು ಆರಂಭವಾಗಿವೆ. ಇನ್ನಾದರೂ ಸರ್ಕಾರ ಈ ಬಗ್ಗೆ ಕಠಿಣ ನೀತಿ ರೂಪಿಸಲಿ ಎಂದು ಸಂತ್ರಸ್ತರು ಆಗ್ರಹಿಸಿದ್ದಾರೆ.
ಮೈಕ್ರೋ ಫೈನಾನ್ಸ್ ಸಂಸ್ಥೆಗಳ ದಂಧೆ ಹಾಗೂ ಮೀಟರ್ ಬಡ್ಡಿ ಮಾಫಿಯಾಕ್ಕೆ ಕಡಿವಾಣ ಹಾಕಲು ನೂತನ ಕಾಯ್ದೆ ಜಾರಿಗೆ ತರಲು ಸರ್ಕಾರ ನಿರ್ಧರಿಸಿದೆ. ಮುಂದಿನ ಅಧಿವೇಶನದಲ್ಲಿಯೇ ಈ ಬಗ್ಗೆ ವಿಧೇಯಕ ಮಂಡಿಸಲಾಗುವುದು.
| ಎಚ್.ಕೆ. ಪಾಟೀಲ ಕಾನೂನು ಸಚಿವ