ಆವಾಸ್​ಗೆ ಏಜೆಂಟರ ರಗಳೆ

ದಾಂಡೇಲಿ: ನಗರಸಭೆ ಸಾಮಾನ್ಯ ಸಭೆಯು ಬುಧವಾರ ನಗರಸಭೆಯ ಸಭಾಂಗಣದಲ್ಲಿ ಅಧ್ಯಕ್ಷ ನಾಗೇಶ ಸಾಳುಂಕೆ ಅಧ್ಯಕ್ಷತೆಯಲ್ಲಿ ಜರುಗಿತು.

ಸದಸ್ಯ ಕೀರ್ತಿ ಗಾಂವಕರ್ ಮಾತನಾಡಿ, ಫಲಾನುಭವಿಗಳಿಗೆ ಅಡುಗೆ ಅನಿಲ ದೊರಕಿಸಿ ಕೊಡುವುದಾಗಿ ಕೆಲ ಏಜೆಂಟರು ಹಾಗೂ ಸದಸ್ಯರು ಕೆಲವರಿಂದ ಹಣ ವಸೂಲಿ ಮಾಡುತ್ತಿದ್ದಾರೆ. ಅಲ್ಲದೆ, ನಗರಸಭೆ ವತಿಯಿಂದ ಪ್ರಧಾನ ಮಂತ್ರಿ ಆವಾಸ್ ಯೋಜನೆಯಲ್ಲಿ 7.25 ಕೋಟಿ ರೂ.ಅನುದಾನದಡಿ 40 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದ್ದು, ಇವರಿಗೆ 1.50 ಲಕ್ಷ ಅನುದಾನ ನೀಡಬೇಕಾಗಿದೆ. ಅದಕ್ಕಾಗಿ ಕೂಡ ಕೆಲ ಏಜೆಂಟರು, ಸದಸ್ಯರು 30 ರಿಂದ 70 ಸಾವಿರವರೆಗೆ ಹಣ ಕೇಳುತ್ತಿದ್ದಾರೆ ಎಂದು ಆರೋಪಿಸಿದರು.

ರಿಯಾಜ್ ಶೇಖ್ ಮಾತನಾಡಿ, ‘ಕಳೆದ 2 ವರ್ಷಗಳಿಂದ ಉಚಿತ ಅಡುಗೆ ಅನಿಲ ವಿತರಿಸುವ ಫಲಾನುಭವಿಗಳ ಪಟ್ಟಿ ಸಿದ್ದವಾಗಿದ್ದರೂ ಇದುವರೆಗೆ ವಿತರಣೆ ಕಾರ್ಯ ಏಕೆ ಪೂರ್ಣಗೊಂಡಿಲ್ಲ ಎಂದು ಆಯುಕ್ತ ಆರ್. ವಿ. ಜತ್ತಣ್ಣ ಅವರನ್ನು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಆಯುಕ್ತರು, ಫಲಾನುಭವಿಗಳ ಪಟ್ಟಿಯ ಸಂಖ್ಯೆ ಹೆಚ್ಚಾಗಿದ್ದು ನಗರಸಭೆಯ ಆಯಾ ವಾರ್ಡ್ ಗಳ ಸದಸ್ಯರೊಡನೆ ರ್ಚಚಿಸಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿ ಪಟ್ಟಿಯನ್ನು ಅಂತಿಮಗೊಳಿಸಿ ವಿತರಣಾ ಕಾರ್ಯ ಪೂರ್ಣಗೊಳಿಸುವ ಭರವಸೆ ನೀಡಿದರು.

ಪಟೇಲನಗರದ ನೀರು ಸರಬರಾಜು ಘಟಕದ ಪಂಪ್​ಸೆಟ್ ಪದೇಪದೆ ದುರಸ್ತಿಗೆ ಬರುತ್ತಿದ್ದು ಸದಸ್ಯ ಅನಿಲ ದಂಡಗಲ್ ಹಾಗೂ ನಂದೀಶ ಮುಂಗರವಾಡಿ ಪಂಪ್​ಸೆಟ್ ಆಪರೇಟ್​ರಗಳ ನಿರ್ಲಕ್ಷ್ಯೇ ಕಾರಣ ಎಂದು ಆರೋಪಿಸಿದರು. ಈ ಎಲ್ಲ ಆಪಾದನೆ ಆಲಿಸಿದ ಆಯುಕ್ತರು ಈ ಕುರಿತು ಸೂಕ್ತ ಕ್ರಮ ಕೈಕೊಳ್ಳುವ ಭರವಸೆ ನಿಡಿದರು.  2017ನೇ ಸಾಲಿನ ಶೇ. 3ರ ಅನುದಾನದಲ್ಲಿ ಅಂಗವಿಕಲರಿಗೆ ಸ್ಕೂಟಿ ಮತ್ತು ವಿಲ್​ಚೇರ್ ನೀಡಲು ಒತ್ತಡ ಹೆಚ್ಚಿರುವುದರಿಂದ ಅಧ್ಯಕ್ಷರು ಪಾರದರ್ಶಕವಾಗಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿ ಪಟ್ಟಿಯನ್ನು ಅಂತಿಮಗೊಳಿಸಲು 7 ಸದಸ್ಯರ ಸಮಿತಿ ರಚಿಸಿ ಶೀಘ್ರ ಸಲ್ಲಿಸಲು ತಿಳಿಸಿದರು.

ನೂತನವಾಗಿ ನಿರ್ವಣಗೊಂಡಿರುವ ಇಂದಿರಾ ಕ್ಯಾಂಟೀನ್ ಹಸ್ತಾಂತರಗೊಳಿಸುವ ಬಗ್ಗೆ ಚರ್ಚೆ ನಡೆದು ನಂತರ ಸಂಪೂರ್ಣವಾಗಿ ಕ್ಯಾಂಟೀನ್ ಸಿದ್ಧಗೊಂಡ ನಂತರ ಹಸ್ತಾಂತರ ಮಾಡಿಕೊಳ್ಳುವುದು ಸೂಕ್ತ ಎಂದು ಆಯುಕ್ತರಿಗೆ ಸದಸ್ಯರು ಮನವರಿಕೆ ಮಾಡಿಕೊಟ್ಟರು.

ಉಪಾಧ್ಯಕ್ಷ ಮಹಮ್ಮದ್ ಫನಿಬಂದ್, ಸ್ಥಾಯಿ ಸಮಿತಿಯ ಅಧ್ಯಕ್ಷೆ ಫಾತಿಮಾ ಬ್ಯಾಪಾರಿ, ಸದಸ್ಯರಾದ ಅಶ್ಪಾಕ್ ಶೇಖ್, ಮುನ್ನಾ ವಹಾಬ್, ಯಾಸ್ಮಿಂ ಕಿತ್ತೂರ, ರವಿ ಸುತಾರ ಉಪಸ್ಥಿತರಿದ್ದರು.