ನವದೆಹಲಿ: ಆಟೋ ಚಾಲಕನೋರ್ವನಿಗೆ ಪೊಲೀಸರು 10,000 ರೂಪಾಯಿ ದಂಡ ವಿಧಿಸಿದ್ದನ್ನು ಪ್ರಶ್ನಿಸಿ ದೆಹಲಿ ಹೈಕೋರ್ಟ್ ಚುನಾವಣಾ ಆಯೋಗಕ್ಕೆ, ದೆಹಲಿ ಸರ್ಕಾರಕ್ಕೆ ಮತ್ತು ಪೊಲೀಸರಿಗೆ ನೋಟಿಸ್ ನೀಡಿದೆ.
ಆಟೋ ಚಾಲಕ ರಾಜೇಶ್ ಎಂಬುವರು ತಮಗೆ ಪೊಲೀಸರು ದಂಡ ವಿಧಿಸಿದ್ದರ ವಿರುದ್ಧ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಆಟೋದ ಮೇಲೆ ಐ ಲವ್ ಕೇಜ್ರಿವಾಲ್ ಎಂದು ಬರೆಸಿದ್ದಕ್ಕೆ ನನಗೆ 10,000 ರೂಪಾಯಿ ದಂಡ ಹಾಕಲಾಗಿದೆ. ನನ್ನ ಆಟೋದ ಮೇಲೆ ಇರುವ ಬರಹ, ಪೋಸ್ಟರ್ಗಳು ಕಳೆದ ವರ್ಷ ಸೆಪ್ಟೆಂಬರ್ ಮತ್ತು ಅಕ್ಟೋಬರ್ನಲ್ಲಿ ಹಾಕಿದ್ದು. ಅದೂ ನನ್ನ ಸ್ವಂತ ಇಚ್ಛೆಯಿಂದ ಹಾಕಿದ್ದು ಹೊರತು ಯಾವುದೇ ರಾಜಕೀಯ ಪಕ್ಷಗಳ ಆಮಿಷಕ್ಕೆ ಒಳಗಾಗಿ ಬರೆದಿಲ್ಲ. ಆದರೆ ಜನವರಿ 15ರಂದು ಪೊಲೀಸರು ಇದೇ ಕಾರಣಕ್ಕೆ ದಂಡ ವಿಧಿಸಿದ್ದಾರೆ. ಐ ಲವ್ ಕೇಜ್ರಿವಾಲ್ ಎಂದು ಬರೆಸಿದ್ದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ರಾಜೇಶ್ ಅರ್ಜಿಯಲ್ಲಿ ಆರೋಪಿಸಿದ್ದಾರೆ.
ಜ.15ರಂದು ಕಾಲಿಂದಿ ಕುಂಜ್ನಿಂದ ಅಪೋಲೋ ಆಸ್ಪತ್ರೆಯೆಡೆಗೆ ನಾನು ಪ್ರಯಾಣ ಮಾಡುತ್ತಿದ್ದೆ. ಆಗ ನನ್ನನ್ನು ತಡೆದ ಟ್ರಾಫಿಕ್ ಪೊಲೀಸರು, ಆಟೋದ ಹಿಂದೆ ಆಮ್ ಆದ್ಮಿ ಪಕ್ಷದ ಜಾಹೀರಾತುಗಳುಳ್ಳ ಪೋಸ್ಟರ್ ಹಾಕಿದ್ದರ ಬಗ್ಗೆ ಪ್ರಶ್ನಿಸಿ ದಂಡ ವಿಧಿಸಿದ್ದಾರೆ. ಅದು ಜಾಹೀರಾತು ಅಲ್ಲ ಎಂದು ಹೇಳಿದರೂ ಕೇಳಲಿಲ್ಲ. ಪೊಲೀಸರ ಈ ಕ್ರಮದಿಂದ ನಾಗರಿಕ ಹಕ್ಕು ಉಲ್ಲಂಘನೆಯಾಗಿದೆ ಎಂದು ರಾಜೇಶ್ ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಾಧೀಶ ನವೀನ್ ಚಾವ್ಲಾ, ದೆಹಲಿ ಸರ್ಕಾರ, ಪೊಲೀಸ್ ಇಲಾಖೆ ಮತ್ತು ಚುನಾವಣಾ ಆಯೋಗದಿಂದ ಪ್ರತಿಕ್ರಿಯೆ ಕೇಳಿದೆ. ಮಾರ್ಚ್ 3ಕ್ಕೆ ಮುಂದಿನ ವಿಚಾರಣೆಯನ್ನು ನಿಗದಿಪಡಿಸಿದೆ.(ಏಜೆನ್ಸೀಸ್)