ರಿಕ್ಷಾಚಾಲಕಿ ವಿಜಯಲಕ್ಷ್ಮಿಮಾದರಿ ಹೆಜ್ಜೆ

ಲೋಕೇಶ್ ಸುರತ್ಕಲ್

ಮಾರ್ಚ್ ತಿಂಗಳು ಸಾಧಕ ಮಹಿಳೆಯರನ್ನು ಗುರುತಿಸಿ, ಪ್ರೋತ್ಸಾಹಿಸುವ ಮಾಸವಾಗಿ ಎಲ್ಲೆಡೆ ಗುರುತಿಸಲ್ಪಡುತ್ತಿದೆ. ಸುರತ್ಕಲ್ ರಿಕ್ಷಾ ಪಾರ್ಕ್‌ನ ಪ್ರಥಮ ಮಹಿಳಾ ರಿಕ್ಷಾ ಚಾಲಕಿಯಾಗಿ ಇತ್ತೀಚೆಗೆ ವಿಜಯಲಕ್ಷ್ಮಿಎಂಬುವರು ವೃತ್ತಿ ಜೀವನ ಆರಂಭಿಸುವುದರೊಂದಿಗೆ ಈ ನಿಟ್ಟಿನಲ್ಲಿ ಹೊಸ ಭಾಷ್ಯವೊಂದಕ್ಕೆ ಸುರತ್ಕಲ್‌ನಲ್ಲಿ ಮುನ್ನುಡಿ ಬರೆದಂಥಾಗಿದೆ.

ವಿಜಯಲಕ್ಷ್ಮಿ ಕುಟುಂಬಕ್ಕೆ ರಿಕ್ಷಾ ಬದುಕಿನ ಆಸರೆಯಾಗಿರುವುವುದು ಆಕಸ್ಮಿಕವೇನಲ್ಲ. ಅವರು ಇದೇ ಸುರತ್ಕಲ್ ಪಾರ್ಕ್‌ನಲ್ಲಿ ಸುಮಾರು 10 ವರ್ಷದಿಂದ ರಿಕ್ಷಾ ಚಲಾಯಿಸುತ್ತಿದ್ದ ಹೊಸಬೆಟ್ಟು ನಿವಾಸಿ ದಿ.ಎಚ್.ಟಿ.ಮೂರ್ತಿ ಅವರ ಪತ್ನಿ. ಅವರ ಬಡ ಕುಟುಂಬ ಬಾಡಿಗೆಮನೆಯಲ್ಲಿ ವಾಸಿಸುತ್ತಿದ್ದು ಇಬ್ಬರು ಮಕ್ಕಳಿದ್ದಾರೆ. ಪತಿ ಇತ್ತೀಚೆಗೆ ಹೃದಯಾಘಾತದಿಂದ ನಿಧನರಾಗಿದ್ದರು. ಅವರು ತಾನು ನಿಧನರಾಗುವ ಮೊದಲೇ ಪತ್ನಿಗೆ ರಿಕ್ಷಾ ಚಲಾಯಿಸಲು ಕಲಿಸಿ, ಲೈಸನ್ಸ್ ಕೂಡಾ ಮಾಡಿಸಿಕೊಟ್ಟಿದ್ದರು.

ಮಹಿಳೆಯರು ಹಿಂಜರಿಯದೆ, ನಿರುದ್ಯೋಗಿಗಳಾಗಿ ಉಳಿಯದೆ ಬದುಕಿನಲ್ಲಿ ಸ್ವಾವಲಂಬಿಗಳಾಗಬೇಕು ಎಂದು ಸುರತ್ಕಲ್ ರಿಕ್ಷಾಚಾಲಕ ಮಾಲೀಕರ ಸಂಘ ಅವರ ಬೆಂಬಲಕ್ಕೆ ನಿಂತಿದೆ ಎನ್ನುತ್ತಾರೆ ಸುರತ್ಕಲ್ ರಿಕ್ಷಾಚಾಲಕ ಮಾಲೀಕರ ಸಂಘ ಅಧ್ಯಕ್ಷ ಲಾಲ್ವಿಕ್ರಾಸ್ತ ಹಾಗೂ ಕಾರ್ಯದರ್ಶಿ ಮೋಹನ್‌ದಾಸ್. ವಿಜಯಲಕ್ಷ್ಮಿ ಅವರನ್ನು ಸನ್ಮಾನಿಸಿ ಪ್ರೋತ್ಸಾಹಿಸಲು ಅನೇಕ ಸಂಘ ಸಂಸ್ಥೆಗಳು ತುದಿಗಾಲಲ್ಲಿ ನಿಂತಿವೆ. ಸುರತ್ಕಲ್‌ನಲ್ಲಿ ಸುಸಜ್ಜಿತ ರಿಕ್ಷಾಪಾರ್ಕ್ ಇಲ್ಲಿನ ರಿಕ್ಷಾ ಚಾಲಕರ ಬಹುದಿನದ ಬೇಡಿಕೆಯಾಗಿದೆ. ಈ ನಿಟ್ಟಿನಲ್ಲಿ ಸೂಕ್ತ ಭರವಸೆ ಇತ್ತೀಚೆಗೆ ದೊರೆತಿದೆ.

ಮಹಿಳಾ ಸಬಲಿಕರಣ ಎನ್ನುವುದು ಬರೇ ಬಾಯಿಮಾತಿನಲ್ಲಿ ಉಳಿಯಬಾರದು ಸ್ವಾವಲಂಬಿಗಳಾಗಲು ಮಹಿಳೆಯರಿಗೆ ಎಲ್ಲ ಕ್ಷೇತ್ರಗಳಲ್ಲಿ ಪ್ರೋತ್ಸಾಹ ಅಗತ್ಯ. ಈ ನಿಟ್ಟಿನಲ್ಲಿ ವಿಜಯಲಕ್ಷ್ಮಿ ಅವರ ನಿರ್ಧಾರ ಸರಿಯಾಗಿದೆ. ಅವರಿಗೆ ಸಮಾಜದ, ಸಂಘ ಸಂಸ್ಥೆಗಳ ಪ್ರೋತ್ಸಾಹ ಅಗತ್ಯ.
ಗುಣವತಿ ರಮೇಶ್, ಸುರತ್ಕಲ್ ಶ್ರೀ ಶಾರದಾ ಮಾತೃ ಮಂಡಳಿ ಅಧ್ಯಕ್ಷೆ

ಮಂಗಳೂರಿನಲ್ಲಿ ಅನೇಕ ಮಂದಿ ಮಹಿಳೆಯರು ರಿಕ್ಷಾ ಚಲಾಯಿಸಿ ಜೀವನ ನಡೆಸುತ್ತಿದ್ದಾರೆ. ವಿಜಯಲಕ್ಷ್ಮಿ ಅವರು ಸುರತ್ಕಲ್‌ನ ಪ್ರಥಮ ರಿಕ್ಷಾ ಚಾಲಕಿಯಾಗಿದ್ದಾರೆ. ಅವರನ್ನು ಗುರುತಿಸಿ ಪ್ರೋತ್ಸಾಹಿಸಲು ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ.
ಉಮೇಶ್ ದೇವಾಡಿಗ ಇಡ್ಯಾ, ಸುರತ್ಕಲ್ ಆಪದ್ಭಾಂಧವ ಸಮಾಜ ಸೇವಾ ಸಂಘ ಅಧ್ಯಕ್ಷ

One Reply to “ರಿಕ್ಷಾಚಾಲಕಿ ವಿಜಯಲಕ್ಷ್ಮಿಮಾದರಿ ಹೆಜ್ಜೆ”

Leave a Reply

Your email address will not be published. Required fields are marked *