ಮಡಿಕೇರಿ:
ಪ್ರಯಾಣಿಕರೊಬ್ಬರು ಆಕಸ್ಮಿಕವಾಗಿ ಯುಪಿಐ ಮೂಲಕ ತಮಗೆ ಪಾವತಿಸಿದ್ದ 34 ಸಾವಿರ ರೂ. ಹಣವನ್ನು ಮಡಿಕೇರಿಯಲ್ಲಿ ಆಟೋ ಚಾಲಕ ಸತೀಶ್ ಎಂಬವರು ಹಿಂತಿರುಗಿಸಿದ್ದಾರೆ. ಜೂ. 11ರಂದು ಎಮ್ಮೆಮಾಡು ನಿವಾಸಿ ಅಲಿ ಎಂಬವರು ಮಡಿಕೇರಿಯ ಕಾನ್ವೆಂಟ್ ಜಂಕ್ಷನ್ ಬಳಿಯಿಂದ ಆಟೋ ಏರಿ ಸಬ್‌ರಿಜಿಸ್ಟಾçರ್ ಕಚೇರಿ ಬಳಿ ಇಳಿದಿದ್ದರು. ಆಟೋ ಬಾಡಿಗೆ ಹಣ 40 ರೂ. ನೀಡಬೇಕಿತ್ತು. ಈ ಸಂದರ್ಭ ಬಾಡಿಗೆ ಹಣ ಸೇರಿಸಿ 500 ರೂ. ಗೂಗಲ್ ಪೇ ಮಾಡುವುದಾಗಿ ಹೇಳಿದ ಅಲಿ ಉಳಿದ 460 ರೂ. ನಗದು ನೀಡುವಂತೆ ಆಟೋ ಚಾಲಕನಲ್ಲಿ ಕೇಳಿಕೊಂಡಿದ್ದರು. ಆದರೆ, ಸತೀಶ್ ಬಳಿ ಅಷ್ಟು ಹಣ ಇಲ್ಲದ ಕಾರಣ 300 ರೂ. ಅಲಿ ಅವರಿಗೆ ಕೊಟ್ಟು 340 ರೂ. ಗೂಗಲ್ ಪೇ ಮಾಡುವಂತೆ ಹೇಳಿದ್ದಾರೆ. ಅಲಿ 340 ರೂ. ಬದಲಿಗೆೆ ಅರಿವಿಲ್ಲದೆ 34,000 ರೂ. ಚಾಲಕನ ಸ್ಕ್ಯಾನರ್‌ಗೆ ಸ್ಕ್ಯಾನ್ ಮಾಡಿ ತೆರಳಿದ್ದರು.
ಇದಾದ ಕೆಲ ಹೊತ್ತಿನ ಬಳಿಕ ಟ್ರಾನ್ಸಾಕ್ಷನ್ ಹಿಸ್ಟರಿ ಪರಿಶೀಲಿಸಿದ ಆಟೋ ಚಾಲಕ ಸತೀಶ್ ಅವರಿಗೆ ವಿಷಯ ಗಮನಕ್ಕೆ ಬಂದ ಕೂಡಲೇ ಅಲಿ ಅವರನ್ನು ಹುಡುಕುವ ಪ್ರಯತ್ನ ಮಾಡಿದ್ದಾರೆ. ಇತ್ತ ಅಲಿ ಅವರಿಗೂ ಜೂ. 12ರ ಮಧ್ಯಾಹ್ನದವರೆಗೂ ಈ ವಿಷಯ ಗೊತ್ತಾಗಿರಲಿಲ್ಲ. ವಿಷಯ ಅರಿವಾದ ನಂತರ ಆಟೋ ಮಾಲೀಕರು ಹಾಗೂ ಚಾಲಕರ ಸಂಘಕ್ಕೆ ಮಾಹಿತಿ ನೀಡಿದ ಬಳಿಕ ಸಂಘದ ಮುಖಾಂತರ ಮಾಹಿತಿಯನ್ನು ವಾಟ್ಸಾಪ್ ಗ್ರೂಪ್‌ನಲ್ಲಿ ಶೇರ್ ಮಾಡಲಾಗಿತ್ತು. ಇತರೆ ಚಾಲಕರು ತಾ. 11ರಂದು ನಡೆದ ಘಟನೆ ಬಗ್ಗೆ ಚಾಲಕ ಸತೀಶ್ ತಮ್ಮ ಬಳಿ ತಿಳಿಸಿರುವುದಾಗಿ ಸಂಘದವರಲ್ಲಿ ಮಾಹಿತಿ ನೀಡಿದ್ದರು. ಕೂಡಲೇ
ಸತೀಶ್ ಅವರನ್ನು ಸಂಪರ್ಕಿಸಿ ಸಂಘದ ಮಧ್ಯಸ್ಥಿಕೆಯಲ್ಲಿ ಹಣವನ್ನು ಅಲಿ ಅವರಿಗೆ ಹಿಂತಿರುಗಿಸಲಾಯಿತು.
ಇದಕ್ಕೂ ಮೊದಲು ಜೂನ್ 11ರಂದೇ ಅಲಿ ಅವರ ಖಾತೆಗೆ 1 ರೂ. ಗೂಗಲ್ ಪೇ ಮಾಡಿ ಅವರದ್ದೇ ಖಾತೆ ಎಂಬ ಬಗ್ಗೆ ಖಾತರಿಪಡಿಸುವಂತೆ ಮೆಸೇಜ್ ಮಾಡಿರುವುದಾಗಿ ಚಾಲಕ ಸತೀಶ್ ಕೇಳಿದ್ದರು. ಆದರೆ ಅಲಿ ಅವರು ಅದನ್ನು ಗಮನಿಸಿರಲಿಲ್ಲ.