ಬ್ರಿಸ್ಬೇನ್: ಆಸ್ಟ್ರೇಲಿಯಾವನ್ನು ವ್ಯಾಪಕವಾಗಿ ಕಾಡುತ್ತಿರುವ ಕಾಡ್ಗಿಚ್ಚಿನಿಂದಾಗಿ ಕ್ರೀಡಾ ಚಟುವಟಿಕೆಗಳಿಗೂ ದೊಡ್ಡ ಹೊಡೆತ ಬೀಳುತ್ತಿದೆ. ಇದರ ಪರಿಣಾಮವಾಗಿ ವರ್ಷದ ಮೊದಲ ಗ್ರಾಂಡ್ ಸ್ಲಾಂ ಟೆನಿಸ್ ಟೂರ್ನಿ ಆಸ್ಟ್ರೇಲಿಯನ್ ಓಪನ್ಅನ್ನು ಮುಂದೂಡುವ ಚಿಂತನೆಯೂ ಶುರುವಾಗಿದೆ. ಜನವರಿ 20ರಿಂದ ಮೆಲ್ಬೋರ್ನ್ನಲ್ಲಿ ನಡೆಯಲಿರುವ ಟೂರ್ನಿಯನ್ನು ಮುಂದೂಡಲು ತನ್ನ ಸಹಮತ ಇದೆ ಎಂದು ಸೆರ್ಬಿಯಾದ ಆಟಗಾರ ನೊವಾಕ್ ಜೋಕೊವಿಕ್ ಹೇಳಿದ್ದಾರೆ. ವಿಶ್ವ ನಂ. 2 ಆಟಗಾರ ಜೋಕೋ, ಎಟಿಪಿ ಆಟಗಾರರ ಕೌನ್ಸಿಲ್ನ ಅಧ್ಯಕ್ಷರೂ ಆಗಿದ್ದಾರೆ.
ಕಳೆದ ಒಂದು ವಾರದಿಂದ ಆಸ್ಟ್ರೇಲಿಯಾದಲ್ಲಿ ಕಾಡ್ಗಿಚ್ಚಿನ ಸಮಸ್ಯೆ ಹೆಚ್ಚಾಗಿದ್ದು, ಇದುವರೆಗೆ 24 ಜನರು ಬಲಿಯಾಗಿದ್ದಾರೆ ಮತ್ತು ಅಪಾರ ಆಸ್ತಿಪಾಸ್ತಿಗೆ ಹಾನಿಯಾಗಿದೆ. ಕಾಡ್ಗಿಚ್ಚಿನ ಭಾರಿ ಹೊಗೆಯಿಂದಾಗಿ ವಾಯು ಮಾಲಿನ್ಯ ಉಂಟಾಗಿದ್ದು, ಇದರಿಂದ ಆಟಗಾರರ ಆರೋಗ್ಯ ಕೆಡುವ ಭೀತಿಯೂ ಇದೆ. ಆದರೆ ಸದ್ಯಕ್ಕೆ ಆಸ್ಟ್ರೇಲಿಯನ್ ಓಪನ್ ಟೂರ್ನಿಯನ್ನು ಮುಂದೂಡುವುದು ಕೊನೆಯ ಆಯ್ಕೆ ಆಗಿರುತ್ತದೆ ಎನ್ನಲಾಗಿದೆ.
‘ವಾತಾವರಣವನ್ನೂ ನಾವು ಪರಿಗಣಿಸಬೇಕಾಗಿದೆ. ಟೂರ್ನಿ ಮುಂದೂಡುವುದು ಕೊನೆಯ ಆಯ್ಕೆ. ಆದರೆ ವಾತಾವರಣದಿಂದ ಆಟಗಾರರ ಆರೋಗ್ಯಕ್ಕೆ ತೊಂದರೆಯಾಗುವುದಾದರೆ ಖಂಡಿತವಾಗಿಯೂ ಅದನ್ನು ಪರಿಗಣಿಸಬೇಕು’ ಎಂದು ಜೋಕೊವಿಕ್ ಹೇಳಿದ್ದಾರೆ. ಅವರು ಸದ್ಯ ಆಸ್ಟ್ರೇಲಿಯಾದಲ್ಲಿ ಎಟಿಪಿ ಕಪ್ನಲ್ಲಿ ಸೆರ್ಬಿಯಾ ಪರ ಆಡುತ್ತಿದ್ದಾರೆ. ಆಸ್ಟ್ರೇಲಿಯನ್ ಓಪನ್ಗೆ ಮುನ್ನ ಮುಂದಿನ ವಾರ ಎಟಪಿ ಆಟಗಾರರ ಕೌನ್ಸಿಲ್ ಸಭೆ ಸೇರಲಿದ್ದು, ಟೂರ್ನಿ ಭವಿಷ್ಯ ಆಗ ನಿರ್ಧಾರವಾಗುವ ನಿರೀಕ್ಷೆ ಇದೆ.
ಸಹಾಯಾರ್ಥ ಕ್ರಿಕೆಟ್ ಪಂದ್ಯ?
ಕಾಡ್ಗಿಚ್ಚು ಸಂತ್ರಸ್ತರ ಸಹಾಯಾರ್ಥ ಕ್ರಿಕೆಟ್ ಪಂದ್ಯವೊಂದನ್ನು ಆಯೋಜಿಸುವ ಬಗ್ಗೆ ಕ್ರಿಕೆಟ್ ಆಸ್ಟ್ರೇಲಿಯಾ ಚಿಂತನೆ ನಡೆಸಿದೆ. ಕಾಡ್ಗಿಚ್ಚಿಗೆ ಬಲಿಯಾದವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಸಲುವಾಗಿ ಸಿಡ್ನಿ ಟೆಸ್ಟ್ ಪಂದ್ಯದ ವೇಳೆ ಆಸ್ಟ್ರೇಲಿಯಾ-ನ್ಯೂಜಿಲೆಂಡ್ ತಂಡಗಳ ಆಟಗಾರರು ಭುಜಕ್ಕೆ ಕಪು್ಪಪಟ್ಟಿ ಧರಿಸಿ ಆಡುತ್ತಿದ್ದಾರೆ. ಬಾಕ್ಸಿಂಗ್ ಟೆಸ್ಟ್ ವೇಳೆ ಆಸೀಸ್ ತಂಡದ ಆಟಗಾರರು ಹಸ್ತಾಕ್ಷರ ಹಾಕಿ ಜೆರ್ಸಿಯನ್ನು ಹರಾಜು ಹಾಕಿ 20 ಲಕ್ಷ ರೂ. ಸಂಗ್ರಹಿಸಲಾಗಿತ್ತು. ಮಾರ್ಚ್ನಲ್ಲಿ ಆಸೀಸ್-ಕಿವೀಸ್ ನಡುವೆ ನಡೆಯುವ ಏಕದಿನ ಪಂದ್ಯದಿಂದ ಸಂಗ್ರಹವಾಗುವ ಹಣವನ್ನು ಕಾಡ್ಗಿಚ್ಚು ನಿವಾರಿಸಲು ನೆರವಾಗುತ್ತಿರುವ ರೆಡ್ಕ್ರಾಸ್ ಸಂಸ್ಥೆಗೆ ನೀಡಲು ಕ್ರಿಕೆಟ್ ಆಸ್ಟ್ರೇಲಿಯಾ ಈಗಾಗಲೆ ನಿರ್ಧರಿಸಿದೆ.
ಪ್ರತಿ ಸಿಕ್ಸರ್, ಏಸ್ ಮೂಲಕ ಸಹಾಯ!
ಆಸ್ಟ್ರೇಲಿಯಾದ ಆಟಗಾರರಾದ ಗ್ಲೆನ್ ಮ್ಯಾಕ್ಸ್ವೆಲ್, ಕ್ರಿಸ್ ಲ್ಯಾನ್ ಮತ್ತು ಡಾರ್ಸಿ ಶಾರ್ಟ್ ಬಿಗ್ ಬಾಷ್ ಲೀಗ್ನಲ್ಲಿ ಸಿಡಿಸುವ ಪ್ರತಿ ಸಿಕ್ಸರ್ಗೆ 12,500 ರೂ.ನಂತೆ ಕಾಡ್ಗಿಚ್ಚು ಸಂತ್ರಸ್ತರಿಗೆ ದೇಣಿಗೆ ನೀಡುತ್ತಿದ್ದಾರೆ. ಆಸ್ಟ್ರೇಲಿಯಾದ ಟೆನಿಸ್ ಆಟಗಾರ ನಿಕ್ ರ್ಕಿಗಿಯೋಸ್ ಹಾಲಿ ಟೆನಿಸ್ ಋತುವಿನಲ್ಲಿ ಸಿಡಿಸುವ ಪ್ರತಿ ಏಸ್ಗೆ 10 ಸಾವಿರ ರೂ.ನಂತೆ ಸಂತ್ರಸ್ತರಿಗೆ ದೇಣಿಗೆ ನೀಡಲು ನಿರ್ಧರಿಸಿದ್ದಾರೆ.
ವಿಶ್ವ ನಂ. 1 ಆಟಗಾರ್ತಿಯಾಗಿರುವ ಆಸ್ಟ್ರೇಲಿಯಾದ ಆಶ್ಲೆಗ್ ಬಾರ್ಟಿ ಈ ವಾರ ಬ್ರಿಸ್ಬೇನ್ ಓಪನ್ನಲ್ಲಿ ತಾವು ಗೆಲ್ಲುವ ಬಹುಮಾನ ಮೊತ್ತವನ್ನು ಕಾಡ್ಗಿಚ್ಚು ಸಂತ್ರಸ್ತರಿಗೆ ನೀಡಲು ನಿರ್ಧರಿಸಿದ್ದಾರೆ. ಅಲ್ಲದೆ ಈಗಾಗಲೆ 15 ಲಕ್ಷ ರೂ. ನೀಡಿರುವುದಾಗಿ ತಿಳಿಸಿದ್ದಾರೆ.