16ರ ಘಟ್ಟಕ್ಕೆ ಸೆರೇನಾ, ಹಲೆಪ್

ಮೆಲ್ಬೋರ್ನ್: ಸೆರ್ಬಿಯಾ ಸ್ಟಾರ್ ನೊವಾಕ್ ಜೋಕೊವಿಕ್ ಕೆನಡದ ಸೆನ್ಸೇಶನಲ್ ಆಟಗಾರ ಡೆನಿಸ್ ಶಫವಲೋವ್ ಅವರೆದುರು ಕಠಿಣ ಪ್ರತಿರೋಧ ಎದುರಿಸಿದರೂ ಆಸ್ಟ್ರೇಲಿಯನ್ ಓಪನ್​ನಲ್ಲಿ 4ನೇ ಸುತ್ತಿಗೇರುವಲ್ಲಿ ಸಫಲರಾಗಿದ್ದಾರೆ. ಇದರೊಂದಿಗೆ ಜೋಕೋ ವಿಶ್ವ ನಂ.1 ಪಟ್ಟವನ್ನು ಭದ್ರಪಡಿಸಿಕೊಂಡಿದ್ದಾರೆ. ಮಹಿಳಾ ಸಿಂಗಲ್ಸ್ ವಿಭಾಗದಲ್ಲೂ ಸೋಲಿನಂಚಿನಿಂದ ಪಾರಾದ ಯುಎಸ್ ಓಪನ್ ಹಾಲಿ ಚಾಂಪಿಯನ್ ನವೊಮಿ ಒಸಾಕ ಹಾಗೂ 6ನೇ ಶ್ರೇಯಾಂಕಿತೆ ಎಲಿನಾ ಸ್ವಿಟೋಲಿನಾ 3ನೇ ಸುತ್ತಿನಲ್ಲಿ ಗೆಲುವಿನ ನಗೆ ಬೀರಿದರು. ಇನ್ನು ಸೆರೇನಾ ವಿಲಿಯಮ್್ಸ ಹಾಗೂ ವಿಶ್ವ ನಂ.1 ಸಿಮೊನಾ ಹಲೆಪ್ ಸುಲಭ ಜಯದೊಂದಿಗೆ ಮುನ್ನಡೆದಿದ್ದು, 4ನೇ ಸುತ್ತಿನಲ್ಲಿ ಪರಸ್ಪರ ಮುಖಾಮುಖಿಗೆ ಸಜ್ಜಾಗಿದ್ದಾರೆ. ವಿಶ್ವ ನಂ.6 ಉಕ್ರೇನ್ ಆಟಗಾರ್ತಿ ಎಲಿನಾ ಸ್ವಿಟೋಲಿನಾ, ವಿಶ್ವ ನಂ.7 ಕ್ಯಾರೊಲಿನಾ ಪ್ಲಿಸ್ಕೋವಾ, ಅಮೆರಿಕ ಯುವ ತಾರೆ ಮ್ಯಾಡಿಸನ್ ಕೀಯ್್ಸ ಸ್ಪೇನ್​ನ ಗಾರ್ಬಿನ್ ಮುಗುರುಜಾ, ಯುಎಸ್ ಓಪನ್ ಸೆಮಿಫೈನಲಿಸ್ಟ್ ಅನಸ್ತೆಸಿಯಾ ಸೆವಸ್ಟೊವಾ 16ರ ಘಟ್ಟಕ್ಕೇರಿದರೆ, ವೀನಸ್ ವಿಲಿಯಮ್್ಸ ಆಘಾತ ಕಂಡರು. ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್, ಜಪಾನ್​ನ ಕಿ ನಿಶಿಕೋರಿ, ಕೆನಡದ ಮಿಲೋಸ್ ರಾವೊನಿಕ್ ಕೂಡ 4ನೇ ಸುತ್ತಿಗೆ ಲಗ್ಗೆ ಇಟ್ಟರು.

ಜೋಕೋ ಅಗ್ರಸ್ಥಾನ ಸೇಫ್: ಜೋಕೋ 3ನೇ ಸುತ್ತಿನಲ್ಲಿ ಡೆನಿಸ್ ಶಫವಲೋವ್​ರನ್ನು 2 ಗಂಟೆ, 22 ನಿಮಿಷಗಳ ಹೋರಾಟದಲ್ಲಿ 6-3, 6-4, 4-6, 6-0ಯಿಂದ ಸೋಲಿಸಿದರು. ಇದರಿಂದ ಜೋಕೋ ವಿಶ್ವ ನಂ.1 ಪಟ್ಟವನ್ನು ಭದ್ರಪಡಿಸಿಕೊಂಡರೆ, ಅಗ್ರಸ್ಥಾನಕ್ಕೇರುವ ನಿರೀಕ್ಷೆಯಲ್ಲಿದ್ದ ವಿಶ್ವ ನಂ.2 ರಾಫೆಲ್ ನಡಾಲ್​ರ ಯೋಜನೆಗೆ ಸದ್ಯಕ್ಕೆ ಹಿನ್ನಡೆಯಾಗಿದೆ. ಜೋಕೋ 3ನೇ ಸುತ್ತಿನಲ್ಲಿ ಸೋತಿದ್ದರೆ, ನಡಾಲ್​ಗೆ ಚಾಂಪಿಯನ್ ಆಗುವ ಮೂಲಕ ಅಗ್ರಸ್ಥಾನಕ್ಕೇರುವ ಅವಕಾಶವಿತ್ತು. ವಿಶ್ವ ನಂ.4 ಅಲೆಕ್ಸಾಂಡರ್ ಜ್ವೆರೆವ್ 6-3, 6-3, 6-2ರಿಂದ ಆಸ್ಟ್ರೇಲಿಯಾದ ಅಲೆಕ್ಸ್ ಬೋಲ್ಟ್​ರನ್ನು ಸೋಲಿಸಿದರು. ನಿಶಿಕೋರಿ 7-6, 6-1, 6-2ರಿಂದ ಪೋರ್ಚುಗಲ್​ನ ಜಾವೊ ಸೌಸಾ ವಿರುದ್ಧ ಗೆದ್ದರೆ, ಮಿಲೋಸ್ ರಾವೊನಿಕ್ 6-4, 6-4, 7-6 ರಿಂದ ಫ್ರಾನ್ಸ್​ನ ಪೈರ್ ಹರ್ಬರ್ಟ್​ರನ್ನು ಮಣಿಸಿದರು. ಬೆಲ್ಜಿಯಂ ಅನುಭವಿ ಡೆವಿಡ್ ಗೊಫಿನ್ 2-6, 6-7, 3-6ರಿಂದ ರಷ್ಯಾದ ಡ್ಯಾನಿ ಮೆಡ್ವೆಡೆವ್ ಎದುರು ಅನಿರೀಕ್ಷಿತ ಸೋಲು ಕಂಡರು. -ಪಿಟಿಐ/ಏಜೆನ್ಸೀಸ್

ಪೇಸ್ ಗೆಲುವು ಬೋಪಣ್ಣ ಔಟ್

ಭಾರತದ ಅನುಭವಿ ಲಿಯಾಂಡರ್ ಪೇಸ್ ಮಿಶ್ರ ಡಬಲ್ಸ್ ವಿಭಾಗದಲ್ಲಿ ಶುಭಾರಂಭ ಕಂಡರೆ, ರೋಹನ್ ಬೋಪಣ್ಣ ಮೊದಲ ಸುತ್ತಿನಲ್ಲೆ ನಿರ್ಗಮಿಸಿ ದರು. ಪೇಸ್ ಹಾಗೂ ಆಸ್ಟ್ರೇಲಿಯಾದ ಸಮಂತಾ ಸ್ಟೋಸರ್ ಜೋಡಿ 6-4, 7-5ರಿಂದ ಜೆಕ್ ಗಣರಾಜ್ಯದ ಕ್ವಿಟಾ ಪೆಶ್ಕೆ ಮತ್ತು ನೆದರ್ಲೆಂಡ್​ನ ವೆಸ್ಲಿ ಕೂಲ್ಹೊಫ್ ಜೋಡಿಯನ್ನು ಸೋಲಿಸಿತು.

ಒಸಾಕ, ಸ್ವಿಟೋಲಿನಾ, ಮುಗುರುಜಾ ಮುನ್ನಡೆ

ಒಸಾಕ ಚೀನಾ ಚೈಪೆಯ ಶು ವೈಶಿ ಎದುರು ಮೊದಲ ಸೆಟ್​ನಲ್ಲಿ ಸೋತರೂ, ನಂತರ ಪುಟಿದೇಳುವ ಮೂಲಕ 5-7, 6-4, 6-1ರಿಂದ ಗೆದ್ದರು. ಸ್ವಿಟೋಲಿನಾ ಕೂಡ 4-6, 6-4, 7-5 ರಿಂದ ಶ್ರೇಯಾಂಕ ರಹಿತ ಚೀನಾ ಆಟಗಾರ್ತಿ ಶುವೈ ಜಂಗ್ ಎದುರು ಪ್ರಯಾಸಕರವಾಗಿ ಗೆದ್ದರು. ಜೆಕ್ ಗಣರಾಜ್ಯದ ಕ್ಯಾರೊಲಿನಾ ಪ್ಲಿಸ್ಕೊವಾ 6-4, 3-6, 6-2 ರಿಂದ ಇಟಲಿಯಾ ಕ್ಯಾಮಿಲಾ ಜಿಯೊರ್ಜಿ ಅವರೆದುರು ಗೆದ್ದರು. ಮ್ಯಾಡಿಸನ್ ಕೀಯ್್ಸ 6-3, 6-2ರಿಂದ ಬೆಲ್ಜಿಯಂನ ಎಲೈಸ್ ಮಾರ್ಟಿನ್ಸ್ ಎದುರು ಜಯಿಸಿದರೆ, 2 ಬಾರಿಯ ಗ್ರಾಂಡ್ ಸ್ಲಾಂ ವಿಜೇತೆ ಗಾರ್ಬಿನ್ ಮುಗುರುಜಾ 7-6, 6-2ರಿಂದ ಸ್ವಿಜರ್ಲೆಂಡ್​ನ ಟಿಮಿಯಾ ಬಾಕ್ಸಿನ್​ರೆೈರನ್ನು ಸುಲಭವಾಗಿ ಸೋಲಿಸಿದರು. ವಿಶ್ವ ನಂ.13 ಅನಸ್ತೆಸಿಯಾ ಕೂಡ ಮುನ್ನಡೆದರು.

ಎದುರಾಳಿಗೆ ಸೆರೇನಾ ಸಮಾಧಾನ!

ಉಕ್ರೇನ್​ನ 18 ವರ್ಷದ ಡಯಾನ ಯಸ್ಟ್ರೆಮ್್ಕಾ ಸುಲಭವಾಗಿ ಸೋತ ನಿರಾಸೆಯಿಂದ ಅಂಗಣದಲ್ಲೇ ಅತ್ತಾಗ ಸೆರೇನಾ ಬಂದು ಸಮಾಧಾನಪಡಿಸುವ ಮೂಲಕ ಕ್ರೀಡಾಸ್ಪೂರ್ತಿ ಮೆರೆದರು. ‘ನೀನು ಇನ್ನೂ ಯುವ ಆಟಗಾರ್ತಿ. ಈ ಪಂದ್ಯದಲ್ಲಿ ಅದ್ಭುತವಾಗಿ ಆಡಿದೆ. ಅಳಬೇಡ’ ಎಂದು ಡಯಾನಗೆ ಹೇಳುವ ಮೂಲಕ ಸೆರೇನಾ ಸಮಾಧಾನ ಗೊಳಿಸಿದರು. ‘ನನಗೆ ಆಕೆಯ ಮನೋಭಾವ ಇಷ್ಟವಾಯಿತು. ಆಕೆಯಲ್ಲಿ ಆಡುವ ಮಾತ್ರವಲ್ಲದೆ ಗೆದ್ದೆ ಗೆಲ್ಲಬೇಕೆಂಬ ಛಲವಿತ್ತು. ಆಕೆ ಅತ್ತಿದ್ದನ್ನು ನೋಡಿ ನನಗೆ ನಿಜಕ್ಕೂ ಆಘಾತವಾಯಿತು ಎಂದು ಸೆರೇನಾ ಹೇಳಿದರು.

ಸೆರೇನಾ-ಹಲೆಪ್ ಮುಖಾಮುಖಿ

7 ಬಾರಿಯ ಚಾಂಪಿಯನ್ ಸೆರೇನಾ ವಿಲಿಯಮ್್ಸ 6-2, 6-1ರಿಂದ ಉಕ್ರೇನ್​ನ 18 ವರ್ಷದ ಡಯಾನ ಯಸ್ಟ್ರೆಮ್್ಕಾರ ಎದುರು ಅಬ್ಬರಿಸಿದರು. ಆದರೆ ಮುಂದಿನ ಸುತ್ತಿನಲ್ಲಿ ಸೆರೇನಾಗೆ ಹಲೆಪ್​ರ ಕಠಿಣ ಸವಾಲು ಎದುರಾಗಲಿದೆ. ಹಲೆಪ್ 3ನೇ ಸುತ್ತಿನ ಹೋರಾಟದಲ್ಲಿ ಸೆರೇನಾ ಸಹೋದರಿ ವೀನಸ್ ವಿಲಿಯಮ್ಸ್​ರನ್ನು 6-2, 6-3ರಿಂದ ಸುಲಭವಾಗಿ ಮಣಿಸಿದರು.