ಆಸೀಸ್​ನಲ್ಲಿ ಜೋಕೋ ಸಪ್ತ ಸಂಭ್ರಮ

ಮೆಲ್ಬೋರ್ನ್: ದಾಖಲೆಯ ಏಳನೇ ಅಸ್ಟ್ರೇಲಿಯನ್ ಓಪನ್ ಪ್ರಶಸ್ತಿಯೊಂದಿಗೆ ಸೆರ್ಬಿಯಾದ ಸ್ಟಾರ್ ಆಟಗಾರ ನೊವಾಕ್ ಜೋಕೊವಿಕ್ 2019ರ ವರ್ಷವನ್ನು ಆರಂಭಿಸಿದ್ದಾರೆ. ಭಾನುವಾರ ರಾಡ್ ಲೆವರ್ ಅರೇನಾದಲ್ಲಿ ನಡೆದ ಪ್ರಶಸ್ತಿ ಕದನದಲ್ಲಿ ಸ್ಪೇನ್​ನ ದಿಗ್ಗಜ ಆಟಗಾರ ರಾಫೆಲ್ ನಡಾಲ್​ರನ್ನು ನೇರ ಸೆಟ್​ಗಳಲ್ಲಿ ಮಣಿಸಿದ ಜೋಕೊವಿಕ್, ಗರಿಷ್ಠ ಬಾರಿ ಆಸ್ಟ್ರೇಲಿಯನ್ ಓಪನ್ ಜಯಿಸಿದ ದಾಖಲೆಯನ್ನು ನಿರ್ವಿುಸಿದರು. ಈವರೆಗೂ 6 ಬಾರಿ ಪ್ರಶಸ್ತಿ ಗೆದ್ದಿದ್ದ ಆಸ್ಟ್ರೇಲಿಯಾದ ರಾಯ್ ಎಮರ್ಸನ್ ಹಾಗೂ ಸ್ವಿಜರ್ಲೆಂಡ್​ನ ರೋಜರ್ ಫೆಡರರ್ ಜತೆ ಜೋಕೊವಿಕ್ ಈ ದಾಖಲೆಯನ್ನು ಹಂಚಿಕೊಂಡಿದ್ದರು.

ಎರಡು ಗಂಟೆ ನಾಲ್ಕು ನಿಮಿಷಗಳ ಕಾಲ ನಡೆದ ಪ್ರಶಸ್ತಿ ಹೋರಾಟದಲ್ಲಿ 31 ವರ್ಷದ ಜೋಕೊವಿಕ್, ರಾಫೆಲ್ ನಡಾಲ್​ಗೆ ತಮ್ಮ ಸರ್ವ್ ಅನ್ನು ಬ್ರೇಕ್ ಮಾಡುವ ಅವಕಾಶ ನೀಡದೆ 6-3, 6-2, 6-3 ನೇರಸೆಟ್​ಗಳಿಂದ ಗೆಲುವು ಸಾಧಿಸಿದರು. ವೃತ್ತಿಜೀವನದ 15ನೇ ಗ್ರಾಂಡ್ ಸ್ಲಾಂ ಮತ್ತು ಸತತ 3ನೇ ಗ್ರಾಂಡ್ ಸ್ಲಾಂ ಪ್ರಶಸ್ತಿ ಸಾಧನೆ ಮಾಡಿದ ಜೋಕೊವಿಕ್, ಗರಿಷ್ಠ ಗ್ರಾಂಡ್ ಸ್ಲಾಂ ಪ್ರಶಸ್ತಿ ಗೆದ್ದ ಪಟ್ಟಿಯಲ್ಲಿ ಅಮೆರಿಕದ ಪೀಟ್ ಸಾಂಪ್ರಸ್​ರನ್ನು (14) ಹಿಂದೆ ಹಾಕಿ 3ನೇ ಸ್ಥಾನಕ್ಕೇರಿದರು. 20 ಗ್ರಾಂಡ್ ಸ್ಲಾಂ ಗೆದ್ದಿರುವ ರೋಜರ್ ಫೆಡರರ್ ಹಾಗೂ 17 ಸ್ಲಾಂ ಗೆದ್ದಿರುವ ನಡಾಲ್ ಮೇಲಿನ ಸ್ಥಾನದಲ್ಲಿದ್ದಾರೆ.

ವಿಶ್ವ ನಂ.1 ಜೋಕೊವಿಕ್ ಹಾಗೂ ವಿಶ್ವ ನಂ.2 ರಾಫೆಲ್ ನಡಾಲ್ ನಡುವಿನ 53ನೇ ಮುಖಾಮುಖಿ ನಿರೀಕ್ಷೆಯ ಮಟ್ಟ ಮುಟ್ಟಲಿಲ್ಲ. ಇಡೀ ಪಂದ್ಯದಲ್ಲಿ ಜೋಕೊವಿಕ್​ರ ಅದ್ಭುತ ಆಟದ ಮುಂದೆ ಶರಣಾಗತಿಯ ಮನಸ್ಥಿತಿಯಲ್ಲಿದ್ದ ನಡಾಲ್, 3ನೇ ಸೆಟ್​ನಲ್ಲಿ ಮಾತ್ರವೇ ಬ್ರೇಕ್​ಪಾಯಿಂಟ್ ಅವಕಾಶ ಪಡೆಯುವಲ್ಲಿ ಯಶ ಕಂಡಿದ್ದರು. ಆದರೆ, ಜೋಕೊವಿಕ್ ಸರ್ವ್

ಅನ್ನು ರಕ್ಷಿಸಿಕೊಂಡಿದ್ದರಿಂದ ಸುಲಭ ಜಯ ಕಂಡರು. ಇದು ನಡಾಲ್ ವಿರುದ್ಧ ಜೋಕೊವಿಕ್​ಗೆ 28ನೇ ಗೆಲುವಾಗಿದ್ದರೆ, ಎಟಿಪಿ ಮಟ್ಟದಲ್ಲಿ 73ನೇ ಪ್ರಶಸ್ತಿ ಎನಿಸಿದೆ. 3ನೇ ಸೆಟ್​ನ 9ನೇ ಗೇಮ್ಲ್ಲಿ ಜೋಕೊವಿಕ್ ಬಾರಿಸಿದ ಆಕರ್ಷಕ ಫೋರ್​ಹ್ಯಾಂಡ್ ಶಾಟ್​ಗೆ ಉತ್ತರವಾಗಿ ನಡಾಲ್ ಬಾರಿಸಿದ ಬ್ಯಾಕ್​ಹ್ಯಾಂಡ್ ಶಾಟ್ ಕೋರ್ಟ್​ನ ಹೊರ ದಾಟಿದ ಬೆನ್ನಲ್ಲಿಯೇ ಜೋಕೊವಿಕ್ ಜಯದ ನಗು ಬೀರಿದರು. ಕೋರ್ಟ್​ನಲ್ಲಿ ಮೊಣಕಾಲೂರಿ ಕುಳಿತ ಜೋಕೊವಿಕ್, ಆಕಾಶಕ್ಕೆ ಕೈಎತ್ತಿ ಸಂಭ್ರಮಿಸಿದರು. -ಏಜೆನ್ಸೀಸ್

20 ಕೋಟಿ ಬಹುಮಾನ

ಚಾಂಪಿಯನ್ ಜೋಕೊವಿಕ್ 20 ಕೋಟಿ ರೂಪಾಯಿ ಬಹುಮಾನದೊಂದಿಗೆ 2016ರ ಬಳಿಕ ಮೊದಲ ಬಾರಿಗೆ ನಾರ್ಮನ್ ಬ್ರೂಕ್ಸ್ ಚಾಲೆಂಜ್ ಕಪ್ ಗೆದ್ದುಕೊಂಡರು. ನಡಾಲ್ 4ನೇ ಬಾರಿಗೆ ಆಸ್ಟ್ರೇಲಿಯನ್ ಓಪನ್​ನಲ್ಲಿ ರನ್ನರ್​ಅಪ್ ಆಗಿ 10 ಕೋಟಿ ರೂ. ಬಹುಮಾನ ಪಡೆದರು.

ಸರಿಯಾಗಿ 12 ತಿಂಗಳ ಹಿಂದೆ ನಾನು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದೆ. ಬಳಿಕ ಇಲ್ಲಿ ನಿಮ್ಮ ಮುಂದೆ ನಿಂತಿದ್ದೇನೆ ಎಂದರೆ ಆ ಸಂಭ್ರಮವನ್ನು ಹೇಳಲಾಗದು. ಕಳೆದ ಮೂರೂ ಗ್ರಾಂಡ್ ಸ್ಲಾಂಗಳಲ್ಲಿ ಜಯ ಸಾಧಿಸಿದ್ದು ನಿಜಕ್ಕೂ ಹೆಮ್ಮೆ ತಂದಿದೆ. ದೂರದ ಯುರೋಪ್​ನಲ್ಲಿರುವ ನನ್ನ ಪತ್ನಿ ಹಾಗೂ ಮಕ್ಕಳು ಈ ಪಂದ್ಯವನ್ನು ನೋಡಿರಬಹುದು. ಅವರೊಂದಿಗೆ ಈ ಟ್ರೋಫಿಯನ್ನು ಹಂಚಿಕೊಳ್ಳುತ್ತೇನೆ.

| ನೋವಾಕ್ ಜೋಕೊವಿಕ್ ಚಾಂಪಿಯನ್

ಮುಂದಿನ ಗ್ರಾಂಡ್ ಸ್ಲಾಂ ಫ್ರೆಂಚ್ ಓಪನ್

ಮೇ 26-ಜೂ.9, ಎಲ್ಲಿ: ಪ್ಯಾರಿಸ್, ಫ್ರಾನ್ಸ್

ಕೆಲವೊಮ್ಮೆ ಆಸ್ಟ್ರೇಲಿಯನ್ ಓಪನ್ ನನಗೆ ಬಹಳ ಕಠಿಣವೆನಿಸುತ್ತದೆ. ಒಂದು ಗಾಯದ ಕಾರಣದಿಂದಾಗಿ, ಇನ್ನೊಂದು ಜೋಕೊವಿಕ್​ರಂಥ ಎದುರಾಳಿ ಇರುವ ಕಾರಣಕ್ಕಾಗಿ. ಕಂಗ್ರಾಟ್ಸ್ ನೊವಾಕ್. ಗಾಯದಿಂದಾಗಿ ಈ ಹಂತದವರೆಗೆ ಬರುವ ನಿರೀಕ್ಷೆ ಇಟ್ಟಿರಲಿಲ್ಲ. ಆದರೆ, ಇಂದು ನನ್ನ ದಿನವಾಗಿರಲಿಲ್ಲ. ಇದಕ್ಕಿಂತ ಉತ್ತಮವಾಗಿ ನಾನು ಆಡಬಹುದಿತ್ತು. ಮತ್ತಷ್ಟು ಹೋರಾಟ ತೋರುತ್ತೇನೆ. ಮತ್ತಷ್ಟು ಪರಿಶ್ರಮ ಪಡುತ್ತೇನೆ. ಪ್ರತಿ ಟೂರ್ನಿಯ ಬಳಿಕವೂ ಉತ್ತಮ ಆಟಗಾರನಾಗಲು ಪ್ರಯತ್ನಿಸುತ್ತೇನೆ.

| ರಾಫೆಲ್ ನಡಾಲ್ ರನ್ನರ್​ಅಪ್