ವೋಜ್ನಿಯಾಕಿ ಹೊರದಬ್ಬಿದ ಶರಪೋವಾ

ಮೆಲ್ಬೋರ್ನ್: ಆಸ್ಟ್ರೇಲಿಯನ್ ಓಪನ್ ಗ್ರಾಂಡ್ ಸ್ಲಾಂ ಟೆನಿಸ್ ಟೂರ್ನಿಯ ಮಹಿಳಾ ಸಿಂಗಲ್ಸ್ ವಿಭಾಗದ ಹಾಲಿ ಚಾಂಪಿಯನ್ ಕ್ಯಾರೊಲಿನ್ ವೋಜ್ನಿಯಾಕಿಗೆ ಸೋಲುಣಿಸುವ ಮೂಲಕ ರಷ್ಯಾದ ಬೆಡಗಿ ಮರಿಯಾ ಶರಪೋವಾ ಉದ್ದೀಪನ ನಿಷೇಧದಿಂದ ವಾಪಸಾದ ಬಳಿಕ ಬಹುದೊಡ್ಡ ಬೇಟೆಯಾಡಿದ ಸಾಧನೆ ಮಾಡಿದ್ದಾರೆ. ಶೆರ್ಪಿ ಜತೆಗೆ ದ್ವಿತೀಯ ಶ್ರೇಯಾಂಕಿತೆ ಏಂಜೆಲಿಕ್ ಕೆರ್ಬರ್, ಆತಿಥೇಯರ ಆಶಾಕಿರಣ ಆಶ್ಲೆಗ್ ಬಾರ್ಟಿ, 8ನೇ ಶ್ರೇಯಾಂಕಿತೆ ಪೆಟ್ರಾ ಕ್ವಿಟೋವಾ, ಅಮೆರಿಕದ ಸ್ಲೋನ್ ಸ್ಟೀಫನ್ಸ್, ಟೂರ್ನಿಯ ಅತಿಕಿರಿಯ ಆಟಗಾರ್ತಿ 17 ವರ್ಷದ ಅಮಂಡಾ ಅನಿಸಿಮೋವಾ, ರಷ್ಯಾದ ಅನಾಸ್ಟೆಸಿಯಾ ಪಾವ್ಲುಚೆಂಕೋವಾ 4ನೇ ಸುತ್ತಿಗೆ ಮುನ್ನಡೆದಿದ್ದಾರೆ. ಪುರುಷರ ಸಿಂಗಲ್ಸ್​ನಲ್ಲಿ ಹಾಲಿ ಚಾಂಪಿಯನ್ ರೋಜರ್ ಫೆಡರರ್ ಮತ್ತು ಮಾಜಿ ಚಾಂಪಿಯನ್ ರಾಫೆಲ್ ನಡಾಲ್ ಸುಲಭ ಜಯದೊಂದಿಗೆ ಪ್ರಿ ಕ್ವಾರ್ಟರ್​ಫೈನಲ್ ಪ್ರವೇಶಿಸಿದರು.

ಶರಪೋವಾ ಶೈನಿಂಗ್: 5 ಬಾರಿಯ ಗ್ರಾಂಡ್ ಸ್ಲಾಂ ವಿಜೇತೆ ಶರಪೋವಾ ಮೆಲ್ಬೋರ್ನ್ ಪಾರ್ಕ್​ನಲ್ಲಿ ಶುಕ್ರವಾರ ನಡೆದ ರೋಚಕ ಪಂದ್ಯದಲ್ಲಿ ವಿಶ್ವ ನಂ. 3 ಡೆನ್ಮಾರ್ಕ್ ತಾರೆ ವೋಜ್ನಿಯಾಕಿಗೆ 6-4, 4-6, 6-3ರಿಂದ ಸೋಲುಣಿಸಿದರು. ಮಾಜಿ ವಿಶ್ವ ನಂ. 1 ಆಟಗಾರ್ತಿಯರ ಕಾದಾಟ ಸಾಕಷ್ಟು ಜಿದ್ದಾಜಿದ್ದಿನಿಂದ ಕೂಡಿದ್ದರೂ, ನಿರ್ಣಾಯಕ ಸೆಟ್​ನಲ್ಲಿ ಶೆರ್ಪಿ ಮೇಲುಗೈ ಸಾಧಿಸಿದರು. 30ನೇ ಶ್ರೇಯಾಂಕಿತೆ ಶರಪೋವಾ 16ರ ಘಟ್ಟದಲ್ಲಿ ಆಸೀಸ್ ಮಾಜಿ ಕ್ರಿಕೆಟರ್ ಆಶ್ಲೆಗ್ ಬಾರ್ಟಿ ಸವಾಲು ಎದುರಿಸಲಿದ್ದಾರೆ.

ಕ್ವಿಟೋವಾ, ಕೆರ್ಬರ್ ಮುನ್ನಡೆ: ಜೆಕ್ ಗಣರಾಜ್ಯದ ತಾರೆ ಕ್ವಿಟೋವಾ 3ನೇ ಸುತ್ತಿನಲ್ಲಿ ಸ್ವಿಜರ್ಲೆಂಡ್​ನ ಬೆಲಿಂಡಾ ಬೆನ್ಸಿಕ್​ಗೆ 6-1, 6-4 ನೇರಸೆಟ್​ಗಳಿಂದ ಸೋಲುಣಿಸಿದರು. ಜರ್ಮನಿಯ ಕೆರ್ಬರ್ 6-1, 6-0ಯಿಂದ ವೈಲ್ಡ್ ಕಾರ್ಡ್ ಆಟಗಾರ್ತಿ ಬಿರೆಲ್ ವಿರುದ್ಧ ನಿರಾಯಾಸದ ಗೆಲುವು ಸಾಧಿಸಿದರು. 19ನೇ ಶ್ರೇಯಾಂಕಿತೆ ಫ್ರಾನ್ಸ್​ನ ಕ್ಯಾರೊಲಿನ್ ಗಾರ್ಸಿಯಾ 3ನೇ ಸುತ್ತಿನಲ್ಲೇ ನಿರ್ಗಮಿಸಿದರು.

ನಡಾಲ್ ಮುನ್ನಡೆ: ಸ್ಪೇನ್ ತಾರೆ ರಾಫೆಲ್ ನಡಾಲ್ ಆತಿಥೇಯ ಆಸ್ಟ್ರೇಲಿಯಾದ 19 ವರ್ಷದ ಆಟಗಾರ ಅಲೆಕ್ಸ್ ಡಿ ಮಿನೌರ್ ವಿರುದ್ಧ 6-1, 6-2, 6-4 ನೇರಸೆಟ್​ಗಳಿಂದ ಗೆದ್ದರು. ನಡಾಲ್ ಮುಂದಿನ ಸುತ್ತಿನಲ್ಲಿ ಜೆಕ್ ಗಣರಾಜ್ಯದ ಥಾಮಸ್ ಬೆರ್ಡಿಕ್ ವಿರುದ್ಧ ಸೆಣಸಲಿದ್ದಾರೆ. ಬಲ್ಗೇರಿಯಾದ ಡಿಮಿಟ್ರೋವ್, ಸ್ಪೇನ್​ನ ಬೌಟಿಸ್ಟಾ ಅಗುಟ್, ಅಮೆರಿಕದ ಫ್ರಾನ್ಸೆಸ್ ಟಿಯಾಫೋಯಿ 4ನೇ ಸುತ್ತಿಗೇರಿದ ಇತರ ಆಟಗಾರರು.

ಫೆಡ್​ಗೆ 100ನೇ ಪಂದ್ಯದಲ್ಲಿ ಜಯ: ರಾಡ್ ಲೆವರ್ ಅರೇನಾದಲ್ಲಿ 100ನೇ ಪಂದ್ಯ ಆಡಿದ ದಿಗ್ಗಜ ಫೆಡರರ್ 6-2, 7-5, 6-2ರಿಂದ ಅಮೆರಿಕದ ಯುವ ಆಟಗಾರ ಟೈಲರ್ ಫ್ರಿಟ್ಜ್​ಗೆ ಸೋಲುಣಿಸಿ ಬೀಗಿದರು. 20 ಗ್ರಾಂಡ್ ಸ್ಲಾಂ ಪ್ರಶಸ್ತಿಗಳ ಒಡೆಯ ಫೆಡ್ ಅನುಭವಿ ಆಟದೆದುರು 21 ವರ್ಷದ ಫ್ರಿಟ್ಜ್ ನಿರುತ್ತರವಾದರು. ಗ್ರಾಂಡ್ ಸ್ಲಾಂ ಟೂರ್ನಿಯಲ್ಲಿ ಅತ್ಯಧಿಕ ಬಾರಿ 4ನೇ ಸುತ್ತಿಗೇರಿರುವ ತನ್ನದೇ ವಿಶ್ವದಾಖಲೆಯನ್ನು ಫೆಡರರ್ 63ಕ್ಕೆ ವಿಸ್ತರಿಸಿದರು. -ಪಿಟಿಐ/ಏಜೆನ್ಸೀಸ್

ಅನಿಸಿಮೋವಾ ಕನಸಿನ ಓಟ

ಅಮೆರಿಕದ ಸೆನ್ಸೇಶನಲ್ ಯುವ ಆಟಗಾರ್ತಿ ಅಮಂಡಾ ಅನಿಸಿಮೋವಾ 11ನೇ ಶ್ರೇಯಾಂಕಿತೆ ಬೆಲಾರಸ್​ನ ಆರಿನಾ ಸಬಲೆಂಕಾಗೆ 6-3, 6-2ರಿಂದ ಸೋಲುಣಿಸಿ ಅಚ್ಚರಿಯ ಓಟ ಮುಂದುವರಿಸಿದರು. 17 ವರ್ಷದ ಅನಿಸಿಮೋವಾ ಆಡಿದ ಕಳೆದೆರಡು ಗ್ರಾಂಡ್ ಸ್ಲಾಂಗಳಲ್ಲಿ ಮೊದಲ ಸುತ್ತಿನಲ್ಲೇ ಹೊರಬಿದ್ದಿದ್ದರು. ರಷ್ಯಾ ಮೂಲದವರಾಗಿರುವ ಅನಿಸಿಮೋವಾರನ್ನು ‘ಭವಿಷ್ಯದ ಶರಪೋವಾ’ ಎಂದೇ ಬಣ್ಣಿಸಲಾಗುತ್ತಿದೆ.