ಆಸ್ಟ್ರೇಲಿಯಾ ಮೊದಲ ಏಕದಿನ ಪಂದ್ಯದಲ್ಲಿ ಭಾರತಕ್ಕೆ ಮುಖಭಂಗ

ಸಿಡ್ನಿ: ಆಸ್ಟ್ರೇಲಿಯಾದಲ್ಲಿ ಐತಿಹಾಸಿಕ ಟೆಸ್ಟ್ ಸರಣಿ ಜಯದ ಸಂಭ್ರಮದಲ್ಲಿರುವ ಟೀಂ ಇಂಡಿಯಾ ರೋಹಿತ್​ ಶರ್ಮಾ (133) ಗಳಿಸಿದ ಭರ್ಜರಿ ಶತಕದ ಹೊರತಾಗಿಯೂ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಸೋಲನುಭವಿಸಿದೆ.

ಆಸ್ಟ್ರೇಲಿಯಾ ನೀಡಿದ 289 ರನ್​ ಗುರಿ ಬೆನ್ನತ್ತಿದ ಭಾರತ ತಂಡ 50 ಓವರ್​ಗಳಲ್ಲಿ 9 ವಿಕೆಟ್​ ನಷ್ಟಕ್ಕೆ 254 ರನ್​ ಗಳಿಸಿ 34 ರನ್​ಗಳಿಂದ ಸೋಲೊಪ್ಪಿಕೊಂಡಿತು. ಈ ಮೂಲಕ ಆಸ್ಟ್ರೇಲಿಯಾ ತಂಡ ಏಕದಿನ ಕ್ರಿಕೆಟ್​ನಲ್ಲಿ 1000ನೇ ಜಯ ದಾಖಲಿಸಿತು.

ಬೃಹತ್ತ ಗುರಿ ಬೆನ್ನತ್ತಿದ ಭಾರತಕ್ಕೆ ಆಸ್ಟ್ರೇಲಿಯಾ ತಂಡ ಆರಂಭದಲ್ಲೇ ಪೆಟ್ಟು ನೀಡಿತು. ಭಾರತ ತಂಡ ನಾಲ್ಕು ರನ್​ ಗಳಿಸುವಷ್ಟರಲ್ಲಿ ಶಿಖರ್​ ಧವನ್​ (0), ನಾಯಕ ವಿರಾಟ್​ ಕೊಹ್ಲಿ (3) ಮತ್ತು ಅಂಬಟಿ ರಾಯುಡು (0) ವಿಕೆಟ್​ ಕಳೆದುಕೊಂಡಿತು. ಈ ಹಂತದಲ್ಲಿ ಕ್ರೀಸ್​ಗೆ ಬಂದ ಅನುಭವಿ ಆಟಗಾರ ಮಹೇಂದ್ರ ಸಿಂಗ್​ ಧೋನಿ (51) ಮತ್ತು ಆರಂಭಿಕ ಆಟಗಾರ ರೋಹಿತ್​ ಶರ್ಮಾ (133) ನಾಲ್ಕನೇ ವಿಕೆಟ್​ಗೆ 137 ರನ್​ ಸೇರಿಸಿ ತಂಡಕ್ಕೆ ಆಸರೆಯಾದರು. ಧೋನಿ ಔಟಾದ ನಂತರ ಬ್ಯಾಟ್ಸ್​ಮನ್​ಗಳು ಹೆಚ್ಚು ಹೊತ್ತು ಕ್ರೀಸ್​ನಲ್ಲಿ ನಿಲ್ಲಲಿಲ್ಲ.

ಆಸ್ಟ್ರೇಲಿಯಾ ಪರ ರಿಚರ್ಡ್​ಸನ್ 26 ಕ್ಕೆ 4 ಮತ್ತು ಬೆಹ್ರೆನ್​ಡ್ರೋಫ್ 39 ಕ್ಕೆ 2 ವಿಕೆಟ್​ ಪಡೆದರು.

ಇದಕ್ಕೂ ಮೊದಲು ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಮಾಡಿದ ಆಸ್ಟ್ರೇಲಿಯಾ ತಂಡ ನಿಗದಿತ 50 ಓವರ್​ಗಳಲ್ಲಿ 5 ವಿಕೆಟ್​ ನಷ್ಟಕ್ಕೆ 288 ರನ್​ ಗಳಿಸಿತು. ಖವಾಜ (59), ಶಾನ್ ಮಾರ್ಷ್ (54), ಹ್ಯಾಂಡ್ಸ್​ಕೊಂಬ್ (73), ಸ್ಟೋಯಿನಿಸ್ (47) ಜವಾಬ್ದಾರಿಯುತ ಬ್ಯಾಟಿಂಗ್​ ಮಾಡಿದರು. ಭಾರತದ ಪರ ಭುವನೇಶ್ವರ್​ ಕುಮಾರ್​ ಮತ್ತು ಕುಲದೀಪ್​ ಯಾದವ್​ ತಲಾ 2 ವಿಕೆಟ್​ ಪಡೆದರು. (ಏಜೆನ್ಸೀಸ್​)