ಇಂದು ಭಾರತ-ಆಸೀಸ್ ಏಕದಿನ ಕದನ

ಸಿಡ್ನಿ: ಐತಿಹಾಸಿಕ ಟೆಸ್ಟ್ ಸರಣಿ ವಿಜಯ ದಾಖಲಿಸಿದ ಐದು ದಿನಗಳ ಬಳಿಕ, ಟೀಮ್ ಇಂಡಿಯಾದ ಸಂಪೂರ್ಣ ಗಮನವೀಗ ಹಾಲಿ ವರ್ಷ ನಡೆಯಲಿರುವ ಪ್ರಮುಖ ಟೂರ್ನಿ ಏಕದಿನ ವಿಶ್ವಕಪ್​ನತ್ತ ನೆಟ್ಟಿದೆ. ಇಂಗ್ಲೆಂಡ್ ಆತಿಥ್ಯದಲ್ಲಿ ನಡೆಯಲಿರುವ ವಿಶ್ವಕಪ್​ಗೂ ಮುನ್ನ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಹಾಗೂ ಮಾಜಿ ಚಾಂಪಿಯನ್ ಭಾರತ ತಂಡಗಳು ಭಿನ್ನ ಸ್ಥಾನಗಳಲ್ಲಿ ನಿಂತಿವೆ. ಉಭಯ ದೇಶಗಳ ನಡುವೆ ಶನಿವಾರ ಆರಂಭವಾಗಲಿರುವ ಮೂರು ಪಂದ್ಯಗಳ ಏಕದಿನ ಸರಣಿ, ಮುಂದಿನ ವಿಶ್ವಕಪ್ ಸಿದ್ಧತೆಯ ಆರಂಭ ಮಾತ್ರ.

ಆಸೀಸ್​ನ ಅಗ್ರ ಮೂರು ಬ್ಯಾಟಿಂಗ್ ಕ್ರಮಾಂಕದಲ್ಲಿ ಆರನ್ ಫಿಂಚ್, ಅಲೆಕ್ಸ್ ಕ್ಯಾರಿ ಹಾಗೂ ಉಸ್ಮಾನ್ ಖವಾಜ, ಭಾರತದ ಅಗ್ರ ಮೂರು ಬ್ಯಾಟ್ಸ್​ಮನ್​ಗಳಾದ ರೋಹಿತ್ ಶರ್ಮ, ಶಿಖರ್ ಧವನ್ ಹಾಗೂ ವಿರಾಟ್ ಕೊಹ್ಲಿಗೆ ಯಾವ ಹಂತದಲ್ಲೂ ಸಮನಲ್ಲ. ಹಿಂದಿನ ಎಲ್ಲ ಏಕದಿನ ಪಂದ್ಯಗಳಂತೆ, ಭಾರತದ ಅಗ್ರ ಮೂರು ಬ್ಯಾಟಿಂಗ್ ಕ್ರಮಾಂಕ ಸಿಡ್ನಿಯಲ್ಲಿ ನಡೆಯಲಿರುವ ಮೊದಲ ಏಕದಿನ ಪಂದ್ಯದಲ್ಲೂ ಸಿಡಿದರೆ, ಹೊಸತನದಲ್ಲಿರುವ ಆಸೀಸ್ ಬೌಲಿಂಗ್ ಕ್ರಮಾಂಕ ದಿಕ್ಕು ತಪು್ಪವುದು ಖಚಿತ. 2017ರ ಜನವರಿ ಅಂತ್ಯದ ಬಳಿಕ ಆಸ್ಟ್ರೇಲಿಯಾ ಆಡಿದ 24 ಏಕದಿನ ಪಂದ್ಯಗಳ ಪೈಕಿ ಕೇವಲ ಮೂರರಲ್ಲಿ ಮಾತ್ರ ಜಯ ಸಾಧಿಸಿದೆ. ವಿಶ್ವಕಪ್​ಗೆ ಯಾವ ತಂಡ ತೆರಳಲಿದೆ ಎನ್ನುವ ಸಣ್ಣ ಸೂಚನೆಯೂ ಇಲ್ಲ. ಇನ್ನೊಂದೆಡೆ ವಿಶ್ವಕಪ್ ಗೆಲ್ಲುವ ಫೇವರಿಟ್ ತಂಡ ಎನಿಸಿಕೊಂಡಿರುವ ಭಾರತದ ವಿಶ್ವಕಪ್ ಸದಸ್ಯರ ಸ್ಥಾನ ಬಹುತೇಕವಾಗಿ ಅಂತಿಮಗೊಂಡಿದೆ. ಆಸೀಸ್​ನ ಟೆಸ್ಟ್ ತಂಡವೇ ಭಾರತದ ವಿರುದ್ಧ ಮಣ್ಣುಮುಕ್ಕಿರುವಾಗ, ಏಕದಿನ ತಂಡದಿಂದ ಸವಾಲು ನಿರೀಕ್ಷೆ ಮಾಡುವುದೇ ಕಷ್ಟ.

ತಮ್ಮ ಕೊನೆಯ ಅಸ್ಟ್ರೇಲಿಯಾ ಪ್ರವಾಸದಲ್ಲಿರುವ ಎಂಎಸ್ ಧೋನಿ, ವಿಶ್ವಕಪ್​ಗೂ ಮುನ್ನ ಲಯ ಕಂಡುಕೊಳ್ಳುವ ಗುರಿಯಲ್ಲಿದ್ದಾರೆ. ಕಳೆದ 14 ಇನಿಂಗ್ಸ್​ಗಳಲ್ಲಿ ಕನಿಷ್ಠ ಅರ್ಧಶತಕದ ಗಡಿಯನ್ನೂ ಧೋನಿ ದಾಟಿಲ್ಲ. ಬ್ಯಾಟಿಂಗ್​ನಲ್ಲಿ ಅವರ ನಿರ್ವಹಣೆ ಕಳವಳಕಾರಿಯಾಗಿದ್ದರೂ, ವಿಕೆಟ್ಕೀಪಿಂಗ್​ನಲ್ಲಿ ಈಗಲೂ ಯುವ ಆಟಗಾರರು ನಾಚುವಂತೆ ನಿರ್ವಹಣೆ ತೋರುತ್ತಿರುವುದು ತಂಡಕ್ಕೆ ಲಾಭ ತಂದಿದೆ. -ಪಿಟಿಐ/ಏಜೆನ್ಸೀಸ್

ಪಿಚ್ ರಿಪೋರ್ಟ್

ಮಳೆಯಿಂದಾಗಿ ಇಲ್ಲಿ ನಡೆದ ಅಂತಿಮ ಟೆಸ್ಟ್ ಪಂದ್ಯ ನೀರಸ ಡ್ರಾ ಕಂಡಿತ್ತು. ಆದರೆ, ಏಕದಿನ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆ ಕಡಿಮೆ ಇದೆ. ಬ್ಯಾಟಿಂಗ್ ಸ್ನೇಹಿ ಪಿಚ್ ಆಗಿರುವ ಕಾರಣ ದೊಡ್ಡ ಮೊತ್ತ ನಿರೀಕ್ಷೆ ಮಾಡಬಹುದು.

ಟೀಮ್ ನ್ಯೂಸ್

ಆಸ್ಟ್ರೇಲಿಯಾ: ಆತಿಥೇಯ ತಂಡ ಸಂಪೂರ್ಣ ಬದಲಾವಣೆಯೊಂದಿಗೆ ಕಣಕ್ಕಿಳಿಯಲಿದೆ. ಟೆಸ್ಟ್ ತಂಡದಂತೆ ಏಕದಿನ ತಂಡವೂ ಕೆಟ್ಟ ನಿರ್ವಹಣೆ ತೋರುತ್ತಿರುವುದು ಇದಕ್ಕೆ ಕಾರಣ. ಆರನ್ ಫಿಂಚ್ ಜತೆ ಕೀಪರ್ ಅಲೆಕ್ಸ್ ಕ್ಯಾರಿ ಇನಿಂಗ್ಸ್ ಆರಂಭಿಸಲಿದ್ದರೆ, ಖವಾಜ, ಶಾನ್ ಮಾರ್ಷ್ ಹಾಗೂ ಪೀಟರ್ ಹ್ಯಾಂಡ್ಸ್ ಕೊಂಬ್ ನಂತರದ ಸ್ಥಾನಗಳಲ್ಲಿ ಆಡಲಿದ್ದಾರೆ. ಎಂಟು ವರ್ಷಗಳ ಬಳಿಕ ಆಸೀಸ್ ಪರ ಏಕದಿನ ತಂಡ ಆಡುವ ಖುಷಿಯಲ್ಲಿ ವೇಗಿ ಪೀಟರ್ ಸಿಡಲ್ ಇದ್ದಾರೆ. ಆಡಂ ಜಂಪಾ ಅನುಭವಿ ಸ್ಪಿನ್ನರ್ ನಾಥನ್ ಲ್ಯಾನ್​ಗೆ ಸ್ಥಾನ ಬಿಟ್ಟುಕೊಟ್ಟಿದ್ದರೆ, ಮಿಚೆಲ್ ಮಾರ್ಷ್ ಅನಾರೋಗ್ಯದ ಕಾರಣ ಮೊದಲ ಪಂದ್ಯ ಆಡುತ್ತಿಲ್ಲ.

ತಂಡ: ಫಿಂಚ್ (ನಾಯಕ), ಅಲೆಕ್ಸ್ ಕ್ಯಾರಿ, ಖವಾಜ, ಶಾನ್ ಮಾರ್ಷ್, ಹ್ಯಾಂಡ್ಸ್​ಕೊಂಬ್, ಸ್ಟೋಯಿನಿಸ್, ಮ್ಯಾಕ್ಸ್​ವೆಲ್, ಸಿಡಲ್, ರಿಚರ್ಡ್​ಸನ್, ನಾಥನ್ ಲ್ಯಾನ್, ಬೆಹ್ರೆನ್​ಡ್ರೋಫ್.

ಭಾರತ: ಟಿವಿ ಶೋನಲ್ಲಿ ಮಹಿಳೆಯರ ಕುರಿತಾಗಿ ಅಸಭ್ಯವಾಗಿ ಮಾತನಾಡಿದ ಕಾರಣಕ್ಕೆ ಹಾರ್ದಿಕ್ ಪಾಂಡ್ಯ ಹಾಗೂ ಕೆಎಲ್ ರಾಹುಲ್​ರ ಆಸ್ಟ್ರೇಲಿಯಾ ಪ್ರವಾಸ ಮುಕ್ತಾಯ ಕಂಡಿದೆ. ಇದರಿಂದಾಗಿ ಇಬ್ಬರು ಪ್ರಮುಖ ಸ್ಪಿನ್ನರ್ ಹಾಗೂ ಮೂವರು ವೇಗಿಗಳೊಂದಿಗೆ ಆಡುವ ಭಾರತದ ಯೋಜನೆ ಹಾಳಾಗಿದೆ. ಆಲ್ರೌಂಡರ್ ಆಗಿ ರವೀಂದ್ರ ಜಡೇಜಾ ಕಣಕ್ಕಿಳಿದಲ್ಲಿ, ಯಜುವೇಂದ್ರ ಚಾಹಲ್ ಹಾಗೂ ಖಲೀಲ್ ಅಹ್ಮದ್ ನಡುವೆ ಆಡುವ 11ರ ಬಳಗದ ಸ್ಥಾನಕ್ಕಾಗಿ ಫೈಟ್ ನಡೆಯಲಿದೆ.

ಸಂಭಾವ್ಯ ತಂಡ: ರೋಹಿತ್ ಶರ್ಮ, ಶಿಖರ್ ಧವನ್, ಕೊಹ್ಲಿ (ನಾಯಕ), ರಾಯುಡು, ಧೋನಿ (ವಿ.ಕೀ), ಕೇದಾರ್ ಜಾಧವ್, ರವೀಂದ್ರ ಜಡೇಜಾ, ಭುವನೇಶ್ವರ್ ಕುಮಾರ್, ಕುಲದೀಪ್, ಯಜುವೇಂದ್ರ ಚಾಹಲ್/ಖಲೀಲ್ ಅಹ್ಮದ್, ಮೊಹಮದ್ ಶಮಿ.

16: ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಸಿಡ್ನಿಯಲ್ಲಿ 16 ಏಕದಿನ ಪಂದ್ಯ ಆಡಿವೆ. ಆಸೀಸ್ 13ರಲ್ಲಿ ಗೆದ್ದಿದ್ದರೆ, ಭಾರತ 2ರಲ್ಲಿ ಜಯ ಸಾಧಿಸಿದೆ. 1 ಪಂದ್ಯ ಮಳೆಯಿಂದಾಗಿ ರದ್ದಾಗಿದೆ. 2016ರಲ್ಲಿ ಕೊನೆಯ ಬಾರಿಗೆ ಇಲ್ಲಿ ನಡೆದಿದ್ದ ಏಕದಿನ ಪಂದ್ಯವನ್ನು ಭಾರತ 6 ವಿಕೆಟ್​ಗಳಿಂದ ಜಯಿಸಿತ್ತು. 331 ರನ್ ಬೆನ್ನಟ್ಟಿದ್ದ ಭಾರತ ತಂಡದ ಪರವಾಗಿ ಮನೀಷ್ ಪಾಂಡೆ 81 ಎಸೆತಗಳಲ್ಲಿ 104 ರನ್ ಬಾರಿಸಿ ನೆರವಾಗಿದ್ದರು. ಆಸೀಸ್ ಪರ ಡೇವಿಡ್ ವಾರ್ನರ್ ಹಾಗೂ ಮಿಚೆಲ್ ಮಾರ್ಷ್ ಶತಕ ಬಾರಿಸಿದ್ದರು.

ಆಸೀಸ್​ಗೆ ರೆಟ್ರೋ ಸ್ಟೈಲ್ ಜೆರ್ಸಿ!

ಏಕದಿನ ಸರಣಿಯಲ್ಲಿ ಆಸೀಸ್ ತಂಡ ರೆಟ್ರೋ ಸ್ಟೈಲ್ ಜೆರ್ಸಿ ಧರಿಸಿ ಆಡಲಿದೆ. 1980 ಹಾಗೂ 1990ರ ಅವಧಿಯಲ್ಲಿ ಆಸೀಸ್ ತಂಡ ಧರಿಸುತ್ತಿದ್ದ ಜೆರ್ಸಿಯನ್ನು ಹಾಲಿ ಆಟಗಾರರು ಧರಿಸಿ ಕಣಕ್ಕಿಳಿಯಲಿದ್ದಾರೆ. 1980ರ ದಶಕದಲ್ಲಿ ಅಲನ್ ಬಾರ್ಡರ್ ನೇತೃತ್ವದಲ್ಲಿ ಆಸೀಸ್ ತಂಡ ಇದೇ ಮಾದರಿಯ ಜೆರ್ಸಿ ಧರಿಸಿ ಕಣಕ್ಕಿಳಿಯುತ್ತಿತ್ತು. 1986ರಲ್ಲಿ ಹಸಿರು ಹಾಗೂ ಚಿನ್ನದ ಬಣ್ಣದ ಜೆರ್ಸಿಯೊಂದಿಗೆ ಆಸೀಸ್ ತಂಡ ಭಾರತದ ವಿರುದ್ಧ ಆಡಿತ್ತು.