ಶಾನ್​ ಮಾರ್ಷ್​ ಭರ್ಜರಿ ಶತಕ: ಭಾರತಕ್ಕೆ 299 ರನ್​ ಗುರಿ ನೀಡಿದ ಆಸಿಸ್​

ಅಡಿಲೇಡ್​: ಶಾನ್​ ಮಾರ್ಷ್​ (131 ರನ್​, 123 ಬಾಲ್​, 11 ಬೌಂಡರಿ, 3 ಸಿಕ್ಸರ್​) ಗಳಿಸಿದ ಭರ್ಜರಿ ಶತಕದ ನೆರವಿನಿಂದ ಆಸ್ಟ್ರೇಲಿಯಾ ತಂಡ ಬೃಹತ್​ ಮೊತ್ತ ಕಲೆ ಹಾಕಿದ್ದು ಭಾರತಕ್ಕೆ ಗೆಲ್ಲಲು 299 ರನ್​ ಗುರಿ ನೀಡಿದೆ.

ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಮಾಡಿದ ಆಸ್ಟ್ರೇಲಿಯಾ ತಂಡ ನಿಗದಿತ 50 ಓವರ್​ಗಳಲ್ಲಿ 9 ವಿಕೆಟ್​ ನಷ್ಟಕ್ಕೆ 298 ರನ್​ ಗಳಿಸಿದೆ. ಇನಿಂಗ್ಸ್​ ಆರಂಭಿಸಿದ ಆಸ್ಟ್ರೇಲಿಯಾ ತಂಡಕ್ಕೆ ಭುವನೇಶ್ವರ್​ ಕುಮಾರ್​ ಮತ್ತು ಮೊಹಮ್ಮದ್​ ಶಮಿ ಆರಂಭಿಕ ಆಘಾತ ನೀಡಿದರು. ತಂಡದ 26 ರನ್​ ಗಳಿಸುವಷ್ಟರಲ್ಲಿ ಆರಂಭಿಕರಾದ ಅಲೆಕ್ಸ್​ ಕ್ಯಾರಿ (18) ಮತ್ತು ಆರೋನ್​ ಫಿಂಚ್​ (8) ಔಟಾದರು. ನಂತರ ಕಣಕ್ಕಿಳಿದ ಮಾರ್ಷ್ ಮತ್ತು ಉಸ್ಮಾನ್​ ಖವಾಜಾ (21) ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು.

ಮಾರ್ಷ್​ಗೆ ಗ್ಲೇನ್​ ಮ್ಯಾಕ್ಸ್​ವೆಲ್​ (48) ಉತ್ತಮ ಸಾಥ್​ ನೀಡಿ ತಂಡದ ಮೊತ್ತ 250 ರ ಗಡಿ ದಾಟಲು ನೆರವಾದರು. ಉಳಿದಂತೆ ಹ್ಯಾಡ್ಸ್​ಕೂಂಬ್​ (20) ಮತ್ತು ಸ್ಟೋನಿಸ್​ (29) ರನ್​ ಗಳಿಸಿದರು. ಭಾರತದ ಪರ ಭುವನೇಶ್ವರ್ ಕುಮಾರ್​ 45 ಕ್ಕೆ 4 ಮತ್ತು ಮೊಹಮ್ಮದ್​ ಶಮಿ 58 ಕ್ಕೆ 3 ವಿಕೆಟ್​ ಪಡೆದರು. (ಏಜೆನ್ಸೀಸ್​)