ಸೇನಾ ಕ್ಯಾಪ್​ಗೆ ಐಸಿಸಿ ಪೂರ್ವಾನುಮತಿ ಪಡೆದಿದ್ದ ಬಿಸಿಸಿಐ

ನವದೆಹಲಿ: ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಸೈನಿಕರ ಗೌರವಾರ್ಥ ರಾಂಚಿಯಲ್ಲಿ ನಡೆದ ಆಸೀಸ್ ವಿರುದ್ಧದ ಏಕದಿನ ಪಂದ್ಯದಲ್ಲಿ ಭಾರತ ತಂಡದ ಆಟಗಾರರು ಸೇನೆಯ ಕ್ಯಾಪ್ ಧರಿಸಿ ಕಣಕ್ಕಿಳಿದಿದ್ದಕ್ಕೆ ಪಾಕಿಸ್ತಾನ ಆಕ್ಷೇಪ ಎತ್ತಿತ್ತು. ಆದರೆ ಈ ಸೇನಾ ಕ್ಯಾಪ್​ಗೆ ಬಿಸಿಸಿಐ ಮೊದಲೇ ಅನುಮತಿ ಪಡೆದುಕೊಂಡಿತ್ತು ಎಂದು ಐಸಿಸಿ ಸ್ಪಷ್ಟಪಡಿಸುವುದರೊಂದಿಗೆ ಪಾಕಿಸ್ತಾನ ಮುಖಭಂಗಕ್ಕೀಡಾಗಿದೆ.

ವಿರಾಟ್ ಕೊಹ್ಲಿ ಟೀಮ್ ಕ್ರಿಕೆಟ್​ಅನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದೆ. ಇದಕ್ಕಾಗಿ ಬಿಸಿಸಿಐ ವಿರುದ್ಧ ಐಸಿಸಿ ಕ್ರಮ ಕೈಗೊಳ್ಳಬೇಕೆಂದು ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೊಹಮದ್ ಖುರೇಷಿ ಹೇಳಿದ್ದರು. ಪಿಸಿಬಿ ಈ ಕುರಿತಾಗಿ ಐಸಿಸಿಗೆ ಪತ್ರ ಬರೆದು ಪ್ರತಿಭಟಿಸಬೇಕೆಂದಿದ್ದರು. ಆದರೆ ಯೋಧರಿಗೆ ಗೌರವ ಸಲ್ಲಿಸಲು ಸೇನಾ ಕ್ಯಾಪ್ ಧರಿಸುವ ನಡೆಗೆ ಐಸಿಸಿ ಸಿಇಒ ಡೇವ್ ರಿಚರ್ಡ್​ಸನ್​ರಿಂದ ಪೂರ್ವಾನುಮತಿ ಪಡೆಯಲಾಗಿತ್ತು ಎಂದು ಐಸಿಸಿ ಮೂಲಗಳು ತಿಳಿಸಿವೆ.

ಅಲ್ಲದೆ, ಕ್ರಿಕೆಟ್​ನಲ್ಲಿ ಈ ರೀತಿಯ ನಡೆ ಇದೇ ಹೊಸದೇನಲ್ಲ. ಸ್ತನ ಕ್ಯಾನ್ಸರ್ ಜಾಗೃತಿಗಾಗಿ ಪ್ರತಿ ವರ್ಷ ಸಿಡ್ನಿಯ ಪಿಂಕ್ ಟೆಸ್ಟ್​ನಲ್ಲಿ ಪಿಂಕ್ ಕ್ಯಾಪ್ ಆತಿಥೇಯ ಆಸ್ಟ್ರೇಲಿಯಾ ತಂಡದ ಆಟಗಾರರು ಪಿಂಕ್ ಕ್ಯಾಪ್ ಧರಿಸಿ ಆಡುತ್ತಾರೆ. -ಏಜೆನ್ಸೀಸ್