More

    ಯುವ ಭಾರತ ತಂಡಕ್ಕೆ ಇಂದು ಆಸ್ಟ್ರೇಲಿಯಾ ಸವಾಲು

    ಪಾಟ್​ಚೇಫ್​ಸ್ಟ್ರೋಮ್​ದಕ್ಷಿಣಆಫ್ರಿಕಾ): ಹಾಲಿ ಚಾಂಪಿಯನ್ ಭಾರತ ತಂಡ 19 ವಯೋಮಿತಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಕ್ವಾರ್ಟರ್​ಫೈನಲ್ ಪಂದ್ಯದಲ್ಲಿ ಮಾಜಿ ಚಾಂಪಿಯನ್ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ. ಸೆನ್ವೇಸ್ ಪಾರ್ಕ್​ನಲ್ಲಿ ಮಂಗಳವಾರ ನಡೆಯಲಿರುವ ಕದನ ಕುತೂಹಲ ಕೆರಳಿಸಿದೆ.

    ಲೀಗ್ ಹಂತದಲ್ಲಿ ಆಡಿದ 3 ಪಂದ್ಯಗಳಲ್ಲೂ ಜಯ ದಾಖಲಿಸಿ ಎ ಗುಂಪಿನಿಂದ ಅಗ್ರಸ್ಥಾನಿಯಾಗಿ ಅಂತಿಮ ಎಂಟರ ಘಟ್ಟಕ್ಕೇರಿರುವ ಭಾರತ ತಂಡ ಮೂರು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ಎದುರು ಮೇಲ್ನೋಟಕ್ಕೆ ಫೇವರಿಟ್ ಎನಿಸಿದೆ. 2018ರ ಪ್ರಶಸ್ತಿ ಹಣಾಹಣಿಯಲ್ಲಿ ಭಾರತ ತಂಡ ಆಸೀಸ್ ತಂಡವನ್ನೇ ಮಣಿಸಿ 4ನೇ ಬಾರಿಗೆ ಪ್ರಶಸ್ತಿ ಜಯಿಸಿತ್ತು. ಇದೀಗ ಆಸ್ಟ್ರೇಲಿಯಾ ತಂಡಕ್ಕೆ ಸೇಡು ತೀರಿಸಿಕೊಳ್ಳುವ ಅವಕಾಶ ಲಭಿಸಿದೆ. ಜತೆಗೆ ಕಿರಿಯರ ವಿಭಾಗದಲ್ಲಿ ಭಾರತ ತಂಡ ಕಳೆದ 7 ವರ್ಷಗಳಿಂದಲೂ ಆಸ್ಟ್ರೇಲಿಯಾ ತಂಡಕ್ಕೆ ಸೋತಿಲ್ಲ.

    ಭವಿಷ್ಯದ ಆಟಗಾರರು ರೂಪುಗೊಳ್ಳಲು ಉತ್ತಮ ವೇದಿಕೆಯಾಗಿರುವ ಕಿರಿಯರ ವಿಶ್ವಕಪ್ ಟೂರ್ನಿಯಲ್ಲಿ ಇದುವರೆಗೆ ಭಾರತ ತಂಡವೇ ಹೆಚ್ಚು ಪ್ರಾಬಲ್ಯ ಸಾಧಿಸಿದೆ. ಲೀಗ್ ಹಂತದಲ್ಲಿ ತಂಡದ ಯಶಸ್ಸಿನಲ್ಲಿ ಸ್ಪಿನ್ ಬೌಲರ್​ಗಳ ಪಾತ್ರವೇ ಪ್ರಮುಖವಾಗಿದೆ. ರವಿ ಬಿಷ್ಣೋಯಿ (10 ವಿಕೆಟ್), ಅಥರ್ವ ಅಂಕೋಲ್ಕರ್ (3 ವಿಕೆಟ್) ಆಸೀಸ್ ವಿರುದ್ಧವೂ ಮೋಡಿ ಮಾಡುವ ನಿರೀಕ್ಷೆ ಇದೆ. ನಾಯಕ ಪ್ರಿಯಂ ಗಾರ್ಗ್, ಯಶಸ್ವಿ ಜೈಸ್ವಾಲ್, ಧ್ರುವ ಜುರೆಲ್, ಕನ್ನಡಿಗ ಶುಭಾಂಗ್ ಹೆಗ್ಡೆ ಅವರಂಥ ಪ್ರತಿಭಾನ್ವಿತ ಆಟಗಾರರನ್ನು ಹೊಂದಿರುವ ಭಾರತ, ಆಸ್ಟ್ರೇಲಿಯಾವನ್ನು ಹಿಮ್ಮೆಟ್ಟಿಸುವ ವಿಶ್ವಾಸದಲ್ಲಿದೆ.

    ಲೀಗ್ ಹಂತದಲ್ಲಿ ಆಡಿದ ಮೂರು ಪಂದ್ಯಗಳಲ್ಲೂ ಭಿನ್ನ ತಂಡವನ್ನು ಕಣಕ್ಕಿಳಿಸುವ ಮೂಲಕ ವಿಶ್ವಕಪ್​ಗೆ ಆಯ್ಕೆಯಾಗಿರುವ ಎಲ್ಲ ಆಟಗಾರರಿಗೂ ಅವಕಾಶ ಕಲ್ಪಿಸಲಾಗಿದೆ. ಕನ್ನಡಿಗರಾದ ಆಲ್ರೌಂಡರ್ ಶುಭಾಂಗ್ ಹೆಗ್ಡೆ ಹಾಗೂ ಸ್ಪಿನ್ನರ್ ವಿದ್ಯಾಧರ್ ಪಾಟೀಲ್ ಇಬ್ಬರಲ್ಲಿ ಒಬ್ಬರು ಕಣಕ್ಕಿಳಿಯುವ ಸಾಧ್ಯತೆಯಿದೆ.

    ಆಸ್ಟ್ರೇಲಿಯಾ ತಂಡ ಬಿ ಗುಂಪಿನಲ್ಲಿ 2ನೇ ಸ್ಥಾನಿಯಾಗಿ ಎಂಟರ ಘಟ್ಟಕ್ಕೇರಿದೆ. ಲೀಗ್​ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಸೋತಿರುವ ಆಸೀಸ್, ನೈಜೀರಿಯಾ, ಇಂಗ್ಲೆಂಡ್ ತಂಡವನ್ನು ಮಣಿಸಿತ್ತು. ಬಲಿಷ್ಠ ಭಾರತ ತಂಡದ ನಿರ್ವಹಣೆ ಅರಿತಿರುವ ಆಸೀಸ್, ಹಿಂದಿನ ಆವೃತ್ತಿಯ ಫೈನಲ್​ಸೋಲಿಗೆ ಸೇಡು ತೀರಿಸಿಕೊಳ್ಳುವ ಗುರಿಯಲ್ಲಿದೆ.

    ಕ್ವಾರ್ಟರ್​ಫೈನಲ್ಸ್

    ಜ.28: ಭಾರತ-ಆಸ್ಟ್ರೇಲಿಯಾ

    ಜ. 29: ವಿಂಡೀಸ್-ನ್ಯೂಜಿಲೆಂಡ್

    ಜ. 30: ಬಾಂಗ್ಲಾದೇಶ-ದ. ಆಫ್ರಿಕಾ

    ಜ. 31: ಅಫ್ಘಾನಿಸ್ತಾನ-ಪಾಕಿಸ್ತಾನ

    ಪಂದ್ಯ ಆರಂಭ: ಮಧ್ಯಾಹ್ನ 1.30

    ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್-3.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts