ಮೆಲ್ಬೋನ್: ಹ್ಯಾಟ್ರಿಕ್ ಪ್ರಶಸ್ತಿ ನಿರೀಕ್ಷೆಯಲ್ಲಿರುವ ವಿಶ್ವ ನಂ.1 ಅರಿನಾ ಸಬಲೆಂಕಾ ಹಾಗೂ ಚೊಚ್ಚಲ ಗ್ರಾಂಡ್ ಸ್ಲಾಂ ಜಯಿಸುವ ತವಕದಲ್ಲಿರುವ ಅಮೆರಿಕದ ಮ್ಯಾಡಿಸನ್ ಕೀಯ್ಸ ಆಸ್ಟ್ರೇಲಿಯನ್ ಓಪನ್ ಮಹಿಳಾ ಸಿಂಗಲ್ಸ್ ಪ್ರಶಸ್ತಿಗಾಗಿ ಶನಿವಾರ ಸೆಣಸಲಿದ್ದಾರೆ. ರಾಡ್ ಲೇವರ್ ಅರೆನಾದಲ್ಲಿ ಸತತ ಮೂರನೇ ವರ್ಷವೂ ಫೈನಲ್ ಆಡಲಿರುವ ಅಗ್ರ ಶ್ರೇಯಾಂಕಿತೆ ಸಬಲೆಂಕಾ, ವೃತ್ತಿಜೀವನದ 4ನೇ ಗ್ರಾಂಡ್ ಸ್ಲಾಂ ಪ್ರಶಸ್ತಿಯ ಹಂಬಲದಲ್ಲಿದ್ದಾರೆ. 26 ವರ್ಷದ ಸಬಲೆಂಕಾ ಮೆಲ್ಬೋರ್ನ್ ಪಾರ್ಕ್‌ನಲ್ಲಿ 2023, 2024ರಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದು, ಒಮ್ಮೆ ಯುಎಸ್ ಓಪನ್ ಜಯಿಸಿದ್ದಾರೆ. ಜತೆಗೆ ಆಸ್ಟ್ರೇಲಿಯಾ ಓಪನ್ ಗ್ರಾಂಡ್ ಸ್ಲಾಂನಲ್ಲಿ ಸತತ 20 ಪಂದ್ಯಗಳಲ್ಲಿ ಅಜೇಯ ದಾಖಲೆ ಹೊಂದಿದ್ದಾರೆ.
ಸಬಲೆಂಕಾಗೆ ಫೈನಲ್‌ನಲ್ಲಿ ನಿಕಟ ಪೈಪೋಟಿ ಎದುರಾಗುವ ಸಾಧ್ಯತೆಗಳಿವೆ. 19ನೇ ಶ್ರೇಯಾಂಕಿತೆ ಮ್ಯಾಡಿಸನ್ ಕೀಯ್ಸಗೆ ಇದು ಎರಡನೇ ಗ್ರಾಂಡ್ ಸ್ಲಾಂ ಫೈನಲ್ ಎನಿಸಿದ್ದು, ಸೆಮಿೈನಲ್‌ನಲ್ಲಿ ವಿಶ್ವ ನಂ.2 ಇಗಾ ಸ್ವಿಯಾಟೆಕ್‌ಗೆ ಶಾಕ್ ನೀಡಿ ಮನೋಬಲ ಹೆಚ್ಚಿಸಿಕೊಂಡಿದ್ದಾರೆ. ಕೀಯ್ಸ ಪ್ರಶಸ್ತಿ ಜಯಿಸಿದರೆ 2009ರ ಬಳಿಕ ಒಂದೇ ಟೂರ್ನಿಯಲ್ಲಿ ವಿಶ್ವ ನಂ.1, 2 ಆಟಗಾರ್ತಿಗೆ ಸೋಲುಣಿದ ಮೊದಲಿಗ ಎನಿಸಲಿದ್ದಾರೆ. ಇವರಿಬ್ಬರ ಮುಖಾಮುಖಿಯಲ್ಲಿ ಸಬಲೆಂಕಾ 4-1 ಮೇಲುಗೈ ಹೊಂದಿದ್ದಾರೆ.
ಆರಂಭ: ಮಧ್ಯಾಹ್ನ 2.00
ನೇರಪ್ರಸಾರ: ಸೋನಿ ಸ್ಪೋರ್ಟ್ಸ್