ಆತ್ಮವಿಶ್ವಾಸದೊಂದಿಗೆ ಪರೀಕ್ಷೆ ಎದುರಿಸಿ

ವಿಜಯವಾಣಿ ಸುದ್ದಿಜಾಲ ಔರಾದ್
ಪರೀಕ್ಷೆ ಸಮಯದಲ್ಲಿ ಯಾವ ರೀತಿ ಅಧ್ಯಯನ ಮಾಡಬೇಕು. ಸಿದ್ಧತೆ ಹೇಗೆ ಮಾಡಿಕೊಳ್ಳಬೇಕು. ಫಲಿತಾಂಶ ಹೆಚ್ಚಳದಲ್ಲಿ ಶಿಕ್ಷಕರ ಪಾತ್ರವೇನು. ವಿದ್ಯಾರ್ಥಿಗಳ ಮನೋಭಾವ ಹೇಗಿರಬೇಕು ಎಂಬಿತ್ಯಾದಿ ವಿಚಾರಗಳ ಬಗ್ಗೆ ಇಲ್ಲಿಯ ಬಸವ ಗುರುಕುಲ ಶಾಲೆಯಲ್ಲಿ ಗುರುವಾರ ಚಿಂತನ-ಮಂಥನ ನಡೆಯಿತು. ಈ ಸಂದರ್ಭದಲ್ಲಿ ವಿಷಯ ತಜ್ಞರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುವ ಮೂಲಕ ಮನೋಬಲ ಹೆಚ್ಚಳ ಮಾಡಿದರು.

ಖಜಾನೆ ಅಧಿಕಾರಿ ಮಾಣಿಕ್ ನೇಳಗೆ ಕಾರ್ಯಕ್ರಮ ಉದ್ಘಾಟನೆ ಮಾಡಿ, ಥಾನರ್್ಡೈಕನ್ ಅಭ್ಯಾಸ ನಿಯಮದಂತೆ ವಿದ್ಯಾರ್ಥಿಗಳು ಓದಿದ್ದು ಮತ್ತು ಬರೆದುದ್ದನ್ನು ಪುನ, ಪುನ ಪುನರಾವರ್ತನೆ ಮೂಲಕ ವಿಷಯವನ್ನು ಮನನ ಮಾಡಿಕೊಳ್ಳಲು ಸಾಧ್ಯವಿದೆ. ಎಂಥ ಕ್ಲಿಷ್ಟ ವಿಷಯವಾದರೂ ನೆನಪಿನಲ್ಲಿಕೊಂಡು ಆತ್ಮವಿಶ್ವಾಸದೊಂದಿಗೆ ಪರೀಕ್ಷೆ ಎದುರಿಸಲು ಸಾಧ್ಯವಿದೆ ಎಂದು ಪ್ರತಿಪಾದಿಸಿದರು.

ಆಡಳಿತಾಧಿಕಾರಿ ಮೋಹನರೆಡ್ಡಿ ಮಾತನಾಡಿ, ಯಾವುದೇ ವಿಷಯ ಕಠಿಣವಿಲ್ಲ. ಕಠಿಣ-ಸರಳ ಎಂಬುದೆಲ್ಲ ನಮ್ಮ ಮನೋಭಾವವನ್ನು ಅವಲಂಬಿಸಿದೆ. ಯಾವುದೇ ವಿಷಯ ಓದುವ ಮುನ್ನ ಸರಳ ಅಂತ ತಿಳಿದು ಅಧ್ಯಯನ ಮಾಡಿದರೆ ಸುಲಭವಾಗಿ ಅರ್ಥವಾಗುತ್ತದೆ. ಕ್ಲಿಷ್ಟ ಅಂತ ತಿಳಿದುಕೊಂಡರೆ ಕ್ಲಿಷ್ಟವಾಗಿಯೇ ಪರಿಣಮಿಸುತ್ತದೆ ಎಂದು ತರ್ಕ ಮಂಡಿಸಿದರು.

ಸಂಪನ್ಮೂಲ ವ್ಯಕ್ತಿ ಮನೋಹರ ಬಿರಾದಾರ್ ಅವರು ಗಣಿತ ವಿಷಯವನ್ನು ಸರಳ ಮತ್ತು ಸುಲಭವಾಗಿ ಅರ್ಥ ಮಾಡಿಕೊಳ್ಳುವ ಬಗ್ಗೆ ಟಿಪ್ಸ್ ಹೇಳಿಕೊಟ್ಟರು. ಮುಖ್ಯ ಗುರು ನಾಗನಾಥ ಶಂಕು, ಮಲ್ಲಿಕಾರ್ಜುನ್ ಹಿಪ್ಪಳಗಾವೆ, ಪ್ರಶಾಂತ ಸಂಗಮದ್, ಪತ್ರಕರ್ತ ಮನ್ಮಥಪ್ಪ ಸ್ವಾಮಿ, ಸಾಮಾಜಿಕ ಕಾರ್ಯಕರ್ತ ಅನೀಲ ಜಿರೋಬೆ ಇದ್ದರು. ಕಾಯಕಯೋಗಿ ಟ್ರಸ್ಟ್ ಮತ್ತು ಬಸವ ಗುರುಕುಲ ಶಾಲೆ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಿತು