ಬೆಳಗಾವಿ: ಜಿಲ್ಲೆಯಲ್ಲಿ ಮಂಗಳವಾರ ರಾತ್ರಿಯಿಂದ ಸುರಿಯುತ್ತಿರುವ ಧಾರಾಕಾರ ಮಳೆ ಬುಧವಾರವೂ ಮುಂದುವರಿದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಕರೊನಾ ವೈರಸ್ ಆತಂಕದ ಮಧ್ಯೆಯೇ, ಪ್ರವಾಹ ಭೀತಿಯೂ ಎದುರಾಗಿದೆ. ಮಹಾರಾಷ್ಟ್ರದ ಕೊಂಕಣ ಪ್ರದೇಶದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಕೃಷ್ಣಾ, ವೇದಗಂಗಾ ಹಾಗೂ ದೂಧಗಂಗಾ ನದಿಗಳಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಇದರಿಂದ ನದಿದಡದ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ.
ಚನ್ನಮ್ಮ ಕಿತ್ತೂರು ತಾಲೂಕಿನ ಎಂ.ಕೆ. ಹುಬ್ಬಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ 4ರ ಹಳೆಯ ಸೇತುವೆ, ಗೋಕಾಕ ತಾಲೂಕಿನ ಶಿಂಗಳಾಪುರ ಸೇತುವೆ, ಬೆಳಗಾವಿ ತಾಲೂಕಿನ ಸಾವಗಾಂವ-ಮಂಡೋಳಿ, ನಂದಿಹಳ್ಳಿ- ನಾಗೇನಹಟ್ಟಿ, ಕಡೋಲಿ- ದೇವಗಿರಿ ಸೇತುವೆ ಮುಳುಗಡೆಯಾಗಿವೆ. ತುಪ್ಪರಿ ಹಳ್ಳ ತುಂಬಿ ಹರಿಯುತ್ತಿರುವ ಪರಿಣಾಮ ಇನಾಮಹೊಂಗಲ ಬಳಿ ತಾತ್ಕಾಲಿಕ ಸೇತುವೆಯೂ ಮುಳುಗಡೆಯಾಗಿದ್ದು, ಸವದತ್ತಿ-ಧಾರವಾಡ ಮಾರ್ಗದಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದೆ. ಕಾಕತಿ ಬಳಿ ರಾಷ್ಟ್ರೀಯ ಹೆದ್ದಾರಿ ಮೇಲೂ ನೀರು ನಿಂತಿದ್ದರಿಂದ ವಾಹನ ಸವಾರರು ಪರದಾಡಿದರು.
ಅವಾಂತರ ಸೃಷ್ಟಿ: ಧಾರಾಕಾರ ಮಳೆಯಿಂದಾಗಿ ಬೆಳಗಾವಿ ನಗರದಲ್ಲೂ ಹಲವು ಅವಾಂತರ ಸೃಷ್ಟಿಯಾಯಿತು. ಚರಂಡಿಗಳ ನಿರ್ವಹಣೆಯಲ್ಲಿ ಮಹಾನಗರ ಪಾಲಿಕೆ ನಿರ್ಲಕ್ಷ್ಯ ತೋರಿದ್ದರಿಂದ ಕೊಳಚೆ ನೀರು ರಸ್ತೆ ಮೇಲೆ ಹರಿಯಿತು. ಹಲವು ಬಡಾವಣೆಗಳ ಮುಖ್ಯ ರಸ್ತೆಗಳಲ್ಲಿ ನೀರು ನಿಂತಿದ್ದರಿಂದ ವಾಹನ ಸಂಚಾರಕ್ಕೆ ಪರದಾಡುವಂತಾಯಿತು.
ಮನೆಗಳಿಗೆ ನುಗ್ಗಿದ ನೀರು: ಬಳ್ಳಾರಿ ನಾಲೆ ತುಂಬಿ ಹರಿಯುತ್ತಿದ್ದು, ಬಿ.ಎಸ್.ಯಡಿಯೂರಪ್ಪ ಮಾರ್ಗದಲ್ಲಿ ರಸ್ತೆಯ ಒಂದು ಬದಿ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಮಹಾತ್ಮ ಗಾಂಧಿ ಕಾಲನಿ, ವೀರಭದ್ರ ನಗರ, ಮಾರುತಿ ನಗರ, ಮರಾಠಾ ಕಾಲನಿ, ಮಹಾದ್ವಾರ ರಸ್ತೆ, ಕರಿಯಪ್ಪ ಕಾಲನಿ ಮತ್ತಿತರ ಪ್ರದೇಶಗಳಲ್ಲಿ ಮನೆಗಳಿಗೆ ನುಗ್ಗಿದ್ದ ನೀರು ಹೊರಹಾಕಲು ಕುಟುಂಬಸ್ಥರು ಪ್ರಯಾಸಪಟ್ಟರು. ಬಸವನ ಗಲ್ಲಿಯಲ್ಲಿ ಮನೆ ಗೋಡೆ ಕುಸಿದು, ಪಕ್ಕದಲ್ಲೇ ನಿಲ್ಲಿಸಿದ್ದ ಕಾರು ಜಖಂಗೊಂಡಿತು. ನಗರದ ಹಲವೆಡೆ ಮರಗಳು ಧರೆಗುರುಳಿದ್ದು, ವಿದ್ಯುತ್ ಕಂಬಗಳಿಗೂ ಹಾನಿಯಾಗಿದೆ. ಕೆಲಕಾಲ ಹಲವೆಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಶಿಥಿಲಗೊಂಡಿದ್ದ ಎಪಿಎಂಸಿ ಮಾರುಕಟ್ಟೆ ಗೋಡೆ ಕುಸಿದಿದೆ.
50ಕ್ಕೂ ಅಧಿಕ ಗ್ರಾಮಗಳ ಸಂಪರ್ಕ ಕಡಿತ!
ಪಶ್ಚಿಮಘಟ್ಟದ ಸೆರಗಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ತಾಲೂಕಿನ 50ಕ್ಕೂ ಅಧಿಕ ಗ್ರಾಮಗಳ ಸಂಪರ್ಕ ಕಡಿತಗೊಂಡಿದ್ದು, 20ಕ್ಕೂ ಹೆಚ್ಚು ಸೇತುವೆಗಳು ಮುಳುಗಡೆಯಾಗಿವೆ. ರಸ್ತೆ ಸಂಪರ್ಕ ಕಡಿತವಾಗಿರುವ ಹಿನ್ನೆಲೆಯಲ್ಲಿ ವಾಹನ ಸವಾರರು ಪರದಾಡುವ ಸ್ಥಿತಿ ಸೃಷ್ಟಿಯಾಗಿದೆ. ವಿದ್ಯುತ್ ಕೂಡ ಕೈಕೊಟ್ಟಿದ್ದರಿಂದ ಕಾನನವಾಸಿಗಳು ಪರದಾಡುವಂತಾಗಿದೆ.
ಖಾನಾಪುರ ಹೊರವಲಯದ ಜನವಸತಿ ಪ್ರದೇಶಗಳು ಜಲಾವೃತಗೊಂಡಿವೆ. ಪೊಲೀಸ್ ತರಬೇತಿ ಶಾಲೆ, ವಸತಿ ಗೃಹಗಳು ಭಾಗಶಃ ಜಲಾವೃತವಾಗಿವೆ. ಹಬ್ಬಾನಟ್ಟಿಯ ಆಂಜನೇಯ ದೇವಸ್ಥಾನವೂ ಮುಳುಗಡೆಯಾಗಿದೆ. ಸಿಂಧನೂರ-ಹೆಮ್ಮಡಗಾ, ಜಾಂಬೋಟಿ-ಜತ್, ರಾಮನಗರ-ಕಟಕೋಳ ರಾಜ್ಯ ಹೆದ್ದಾರಿಗಳು ಮತ್ತು ಬೆಳಗಾವಿ-ಪಣಜಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದೆ. ಶಾಸಕ ಅಂಜಲಿ ನಿಂಬಾಳ್ಕರ್ ಅವರ ಮನೆಗೂ ನೀರು ನುಗ್ಗಿದೆ.