ಡಬ್​ಸ್ಮ್ಯಾಶ್​ ಚಾಲೆಂಜ್​ಗೆ ನಗರದಲ್ಲಿಂದು ಆಡಿಷನ್

ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಸದ್ಯ ಡಬ್​ಸ್ಮ್ಯಾಶ್​ನದ್ದೇ ಕ್ರೇಜ್. ಅದಕ್ಕೆ ಮನಸೋಲದವರೇ ಇಲ್ಲ ಎನ್ನಬಹುದು. ಇಷ್ಟದ ಸಿನಿಮಾ ಹಾಡಿಗೆ, ನೆಚ್ಚಿನ ನಟ ಹೇಳಿದ ಸಿನಿಮಾ ಡೈಲಾಗ್​ಗೆ ಲಿಪ್​ಸಿಂಕ್ ಮಾಡಿಯೇ ಸ್ಟಾರ್ ಆದವರೂ ಕಣ್ಣಮುಂದೆಯೇ ಇದ್ದಾರೆ. ಹಾಗಾದರೆ ನೀವು ಡಬ್​ಸ್ಮ್ಯಾಶ್ ಸ್ಟಾರ್ ಆಗಬೇಕಾ? ನಿಮ್ಮಲ್ಲಿ ಅಂಥ ಪ್ರತಿಭೆ ಇದೆಯಾ? ಮತ್ತೇಕೆ ತಡ, ಆಡಿಷನ್ ಕೊಟ್ಟು ರಿಯಾಲಿಟಿ ಶೋಗೆ ಹಾಜರಾಗಿ!

ಹೌದು, ಕನ್ನಡಿಗರ ಧ್ವನಿಯಾಗಿರುವ ನಿಮ್ಮ ದಿಗ್ವಿಜಯ 24ಗಿ7 ನ್ಯೂಸ್, ಕನ್ನಡ ಟಿವಿ ಮಾಧ್ಯಮದಲ್ಲೇ ಮೊಟ್ಟಮೊದಲ ಬಾರಿಗೆ ‘ಡಬ್​ಸ್ಮ್ಯಾಶ್ ಚಾಲೆಂಜ್’ ರಿಯಾಲಿಟಿ ಶೋ ಆರಂಭಿಸಲಿದೆ. ಇಂದಿನ ಯುವ ಪೀಳಿಗೆಯಲ್ಲಿ ಹೆಚ್ಚುತ್ತಿರುವ ಡಬ್​ಸ್ಮ್ಯಾಶ್ ಕಲೆಗೆ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ವಿಶಿಷ್ಟ ಕಾರ್ಯಕ್ರಮವನ್ನು ವಾಹಿನಿ ರೂಪಿಸಿದೆ. ಈ ಶೋಗೆ ಕನ್ನಡ ಚಿತ್ರರಂಗದ ಖ್ಯಾತ ಸಂಗೀತ

ನಿರ್ದೇಶಕ ವಿ. ಮನೋಹರ್ ಮಹಾ ತೀರ್ಪಗಾರರಾಗಿದ್ದು, ಡಬ್​ಸ್ಮ್ಯಾಶ್ ಸ್ಟಾರ್​ಗಳಾದ ಯುವ ಜೋಡಿ ಅಲ್ಲು ರಘು ಹಾಗೂ ಸುಶ್ಮಿತಾ ಜಡ್ಜ್ ಗಳಾಗಿರುತ್ತಾರೆ. ಡಬ್​ಸ್ಮ್ಯಾಶ್ ಚಾಲೆಂಜ್​ನಲ್ಲಿ ಭಾಗವಹಿಸಲು ಇಚ್ಛಿಸುವವರಿಗೆ ಇದೇ ಭಾನುವಾರ (ಆ.12) ಬೆಂಗಳೂರಿನಲ್ಲಿ ಆಡಿಷನ್ ಕರೆಯಲಾಗಿದೆ. ಬೆಳಗ್ಗೆ 9ಕ್ಕೆ ಆಡಿಷನ್ ಆರಂಭವಾಗಲಿದ್ದು, ಸ್ಥಳದಲ್ಲೇ ನೋಂದಣಿ ಪ್ರಕ್ರಿಯೆ ನಡೆಯಲಿದೆ.

ಉತ್ತಮ ಪ್ರದರ್ಶನ ತೋರಿದ ಸ್ಪರ್ಧಿಗಳನ್ನು ಕಾರ್ಯಕ್ರಮದ ತೀರ್ಪಗಾರರು ಅಂತಿಮ ಹಂತಕ್ಕೆ ಆಯ್ಕೆ ಮಾಡಲಿದ್ದಾರೆ. ಆಡಿಷನ್​ನಲ್ಲಿ ಭಾಗವಹಿಸುವುದಕ್ಕೆ ಯಾವುದೇ ವಯೋಮಿತಿ ಇರುವುದಿಲ್ಲ. ಡಬ್​ಸ್ಮ್ಯಾಶ್​ನಲ್ಲಿ ಪ್ರತಿಭೆ ತೋರಿಸಲು ಆಸಕ್ತಿ ಇರುವವರಿಗೆಲ್ಲ ಈ ಕಾರ್ಯಕ್ರಮ ಉತ್ತಮ ವೇದಿಕೆಯಾಗಲಿದೆ.

ಇಲ್ಲಿಗೆ ಬನ್ನಿ..

ಬೆಂಗಳೂರಿನ ಕಾಪೋರೇಷನ್ ಸರ್ಕಲ್ ಬಳಿಯ ಬಿಬಿಎಂಪಿ ಕಚೇರಿಯ ನೌಕರರ ಸಂಘದ ಸಭಾಂಗಣದಲ್ಲಿ ಆ.12ರ ಬೆಳಗ್ಗೆ 9ರಿಂದ ‘ಡಬ್​ಸ್ಮಾ್ಯಷ್ ಚಾಲೆಂಜ್’ ಆಡಿಷನ್ ನಡೆಯಲಿದೆ.