ಸಿದ್ದಾಪುರ: ನಾಟಕಗಳಿಗೆ ಮನರಂಜನೆ ಮಾತ್ರ ಉದ್ದೇಶವಲ್ಲ. ಮನರಂಜನೆಗೆ ಇಂದು ಕೆಟ್ಟ ಅರ್ಥ ಬರುವಂತ ಸ್ಥಿತಿಯಿದೆ. ನಾಟಕದ ಮೂಲಕ ಸಮಾಜದ ಆಗು-ಹೋಗುಗಳ ಅರಿವು ಮೂಡಿಸುವುದರ ಜತೆಗೆ ಮನಸನ್ನು ವಿಕಾಸಗೊಳಿಸುವ, ಪ್ರೇಕ್ಷಕರಿಗೆ ಖುಷಿ ತರುವ ಮನರಂಜನೆಯೂ ಇರಬೇಕು ಎಂದು ಪ್ರಸಿದ್ಧ ರಂಗನಿರ್ದೇಶಕ ಅಕ್ಷರ ಕೆ.ವಿ. ಹೆಗ್ಗೋಡು ಹೇಳಿದರು.
ಪಟ್ಟಣದ ಶಂಕರಮಠದ ಸಭಾಭವನದಲ್ಲಿ ಒಡ್ಡೋಲಗ ಹಿತ್ಲಕೈ ಹಾಗೂ ಸಂಸ್ಕೃತಿ ಸಂಪದದ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಎರಡು ದಿನಗಳ ನಾಟಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು. ಕಳೆದ 40 ವರ್ಷಗಳಿಂದ ನೀನಾಸಂ ತಿರುಗಾಟದ ನಾಟಕಗಳು ರಾಜ್ಯದೆಲ್ಲೆಡೆ ಪ್ರದರ್ಶನಗೊಳ್ಳುತ್ತಿವೆ. ಈ ವರ್ಷ ಮಾಲತೀ ಮಾಧವ ಹಾಗೂ ಅಂಕದ ಪರದೆ ನಾಟಕಗಳು ರಾಜ್ಯದ 80ಕ್ಕೂ ಹೆಚ್ಚು ಕಡೆಗಳಲ್ಲಿ ಪ್ರದರ್ಶನಗೊಳ್ಳುತ್ತಿದೆ. 8ನೇ ಶತಮಾನದಲ್ಲಿ ಭವಭೂತಿ ಸಂಸ್ಕೃತದಲ್ಲಿ ಬರೆದ ನಾಟಕ ಮಾಲತೀ ಮಾಧವ. ಮೂಲ ಮರಾಠಿಯಲ್ಲಿ ಅಭಿರಾಮ ಭಡ್ಕಮಕರ್ ಬರೆದ ಜಯಂತ ಕಾಯ್ಕಿಣಿ ಕನ್ನಡಕ್ಕೆ ಅನುವಾದಿಸಿದ ಅಂಕದ ಪರದೆ ವಯಸ್ಸಾದವರ ಬದುಕಿನ ಕಥೆಯನ್ನು ನಿರೂಪಿಸುತ್ತದೆ. ವೃದ್ಧಾಶ್ರಮ ಮತ್ತು ನಾಟಕಕ್ಕಿರುವ ಸಂಬಂಧವನ್ನು ಇದು ನಿರೂಪಿಸುತ್ತದೆ ಎಂದರು.
ನಾಟಕಕಾರ ಎಸ್.ವಿ. ಹೆಗಡೆ ಮಗೇಗಾರ ಮಾತನಾಡಿ ನೀನಾಸಂ ರಂಗಭೂಮಿಯ ಶಿಸ್ತನ್ನು ಕಾಪಾಡಿಕೊಂಡು ಬಂದಿದೆ. ಸ್ವಾಯತ್ತ ವಿಶ್ಚವಿದ್ಯಾಲಯದಂಥ ಮಹತ್ವ ಅದಕ್ಕಿದೆ. ಸುಸಂಸ್ಕೃತ ಸಮುದಾಯ ಮತ್ತು ಸಾಂಸ್ಕೃತಿಕ ಶಕ್ತಿ ಹೆಚ್ಚಿಸುವಲ್ಲಿ ಪ್ರೇಕ್ಷಕರ ಜವಾಬ್ದಾರಿಯೂ ಇದೆ ಎಂದರು.
ಒಡ್ಡೋಲಗ ಸಂಸ್ಥೆಯ ಗಣಪತಿ ಹಿತ್ಲಕೈ ಸ್ವಾಗತಿಸಿ ವಂದಿಸಿದರು. ನಂತರ ಭವಭೂತಿ ರಚನೆಯ, ಕೆ.ವಿ. ಅಕ್ಷರ ಕನ್ನಡರೂಪ, ನಿರ್ದೇಶನದ, ವಿದ್ಯಾ ಹೆಗಡೆ, ಭಾರ್ಗವ ಕೆ.ಎನ್., ಎಂ.ಎಚ್.ಗಣೇಶ ಸಂಗೀತ ವಿನ್ಯಾಸದ ಮಾಲತೀ ಮಾಧವ ನಾಟಕ ಪ್ರದರ್ಶನಗೊಂಡಿತು.