ಸರ್ಕಾರಿ ಶಾಲೆಗೆ ಡಿಜಿಟಲ್ ಟಚ್

ಬಣಕಲ್: ಪಾಲಕರು ಹಾಗೂ ಮಕ್ಕಳು ಖಾಸಗಿ ಶಾಲೆಗಳತ್ತ ಮುಖಮಾಡಿರುವ ಈ ಸಂದರ್ಭ ಸರ್ಕಾರಿ ಶಾಲೆಗಳೆಂದರೆ ನಿರ್ಲಕ್ಷ್ಯ ತೋರುವವರೇ ಹೆಚ್ಚು. ಆದರೆ ಅತ್ತಿಗೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಯಾವ ಖಾಸಗಿ ಶಾಲೆಗಿಂತಲೂ ಕಡಿಮೆ ಇಲ್ಲದಂತೆ ಡಿಜಿಟಲ್ ಮಾದರಿಯ, ವಿಶೇಷ ಪರಿಕರಗಳ ಮೂಲಕ ಶಿಕ್ಷಣ ನೀಡಲಾಗುತ್ತಿದೆ.

ಒಂದರಿಂದ ಏಳನೇ ತರಗತಿವರೆಗೆ 101 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಮೇಲ್ದರ್ಜೆಗೇರಿಸಿದ ಕೊಠಡಿಗಳಲ್ಲಿ ಶಿಕ್ಷಣ ನೀಡಲಾಗುತ್ತಿದೆ. ವಿಭಿನ್ನ ಬಣ್ಣಗಳಿಂದ ಅಲಂಕರಿಸಿದ ಗೋಡೆಗಳು, ಆಕರ್ಷಕ ಮೇಲ್ಛಾವಣಿ ಮತ್ತು ಎಲ್​ಇಡಿ ಬೆಳಕು ಹಾಗೂ ಡಿಜಿಟಲ್ ಬೋರ್ಡ್​ಗಳು ವಿದ್ಯಾರ್ಥಿಗಳ ಕಲಿಕೆಗೆ ಸಕಲ ಸೌಲಭ್ಯ ಕಲ್ಪಿಸಲಾಗಿದೆ. ಟಚ್​ಸ್ಕ್ರೀನ್ ಡಿಜಿಟಲ್ ಬೋರ್ಡ್ ಮೂಲಕ ವಿಡಿಯೋ ಮತ್ತು ಫೋಟೊ ಬಳಸಿ ಮಕ್ಕಳಿಗೆ ಮನಮುಟ್ಟುವಂತೆ ಕಲಿಸಲಾಗುತ್ತಿದೆ. ಶಾಲೆ ಎದುರು ಡಿಜಿಟಲ್ ಲೈಟಿಂಗ್ ನಾಮಫಲಕ ಅಳವಡಿಸಲಾಗಿದೆ.

ಶಾಲೆಯಲ್ಲಿ ಪಠ್ಯೇತರ ಚಟುವಟಿಕೆಗೂ ಆದ್ಯತೆ ನೀಡಲಾಗಿದೆ. ಇದಕ್ಕಾಗಿ ದಿನದ ಒಂದು ತರಗತಿಯನ್ನು ಮೀಸಲಿಟ್ಟು, ಕಥೆ ಆಲಿಸುವಿಕೆ, ಬರವಣಿಗೆ, ಅಬಾಕಸ್ ಮತ್ತಿತರೆ ಚಟುವಟಿಕೆ ಮಾಡಿಸಲಾಗುತ್ತದೆ. ಪ್ರತಿದಿನ ಬೆಳಗ್ಗೆ ವಿದ್ಯಾರ್ಥಿಗಳಿಗೆ ಯೋಗಾಸನ, ನೈತಿಕ ಶಿಕ್ಷಣದ ಪಾಠ ಹೇಳಿಕೊಡಲಾಗುತ್ತಿದೆ. ಶಾಲೆಯ ವಿದ್ಯಾರ್ಥಿಗಳನ್ನು ನಾಲ್ಕು ಗುಂಪುಗಳನ್ನಾಗಿ ಮಾಡಿ ನಾಲ್ಕು ಬಣ್ಣದ ಸಮವಸ್ತ್ರ ನೀಡಲಾಗಿದೆ. ಆ ನಾಲ್ಕು ತಂಡಗಳಿಗೆ ಮಣ್ಣಿನ ಮಾದರಿ (ಕ್ಲೇ ಮಾಡೆಲಿಂಗ್), ಪೇಪರ್ ಕಟ್ಟಿಂಗ್​ನಂಥ ಗುಂಪು ಚಟುವಟಿಕೆಗಳನ್ನು ನೀಡಿ ವಾರಾಂತ್ಯದಲ್ಲಿ ಮೌಲ್ಯಮಾಪನ ಮಾಡಲಾಗುತ್ತಿದೆ.

ಶಾಲೆಯಲ್ಲಿ ಇಷ್ಟೆಲ್ಲ ಸೌಲಭ್ಯ ಕಲ್ಪಿಸಲು ಸಾಧ್ಯವಾಗಿರುವುದು ಹಳೇ ವಿದ್ಯಾರ್ಥಿಗಳು, ದಾನಿಗಳ ಸಹಕಾರದಿಂದ. 2018ರಲ್ಲಿ ಹಳೇ ವಿದ್ಯಾರ್ಥಿಗಳ ಸಂಘ ಅಸ್ತಿತ್ವಕ್ಕೆ ಬಂದಿದೆ. ಜತೆಗೆ ಗ್ರಾಮದ ದಾನಿಗಳು, ಶಾಲೆ ಶಿಕ್ಷಕರು, ಎಸ್​ಡಿಎಂಸಿ ಸಮಿತಿ ನೆರವು, ಸರ್ಕಾರದ ಕೆಲ ಅನುದಾನ ಬಳಸಿಕೊಂಡು ಅಭಿವೃದ್ಧಿ ಮಾಡಲಾಗಿದೆ. ಕೊಟ್ಟಿಗೆಹಾರದ ಗೆಳೆಯರ ಬಳಗ ಮತ್ತು ಕೆಲ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಶಾಲೆಯ ಏಳಿಗೆಗೆ ಶ್ರಮಿಸುತ್ತಿವೆ.

ಈ ಶಾಲೆಯಲ್ಲಿ ಕಲಿತು 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಾದ ನಿಶಾ ಮತ್ತು ಸ್ವರೂಪ್ ರಾಷ್ಟ್ರೀಯ ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾಗಿದ್ದಾರೆ. ಈ ಶಾಲೆಯಲ್ಲಿ ಕಲಿತು ಹೋದ ವಿದ್ಯಾರ್ಥಿಗಳು ಸತತ ಎರಡು ವರ್ಷ ರಾಷ್ಟ್ರೀಯ ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾಗಿರುವುದು ಶಾಲೆಗೆ ಮತ್ತೊಂದು ಹೆಗ್ಗಳಿಕೆ. ಕಳೆದ ವರ್ಷ ಶಾಲೆಯಲ್ಲಿ 89 ವಿದ್ಯಾರ್ಥಿಗಳಿದ್ದರು. ಈ ವರ್ಷ ಮಕ್ಕಳ ಸಂಖ್ಯೆ 101ಕ್ಕೆ ಏರಿಕೆಯಾಗಿದೆ.

ಆಕರ್ಷಕ ಉದ್ಯಾನ, ಕಾರಂಜಿ: ಶಾಲೆ ಆವರಣದಲ್ಲಿ ವಿವಿಧ ಗಿಡಗಳ ಆಕರ್ಷಕ ಉದ್ಯಾನ ನಿರ್ವಿುಸಲಾಗಿದೆ. ಉದ್ಯಾನದ ನಡುವೆ ನೀರಿನ ಕಾರಂಜಿ ಶಾಲೆಯ ಸೌಂದರ್ಯ ಹೆಚ್ಚಿಸಿದೆ. ಪ್ರವೇಶದ್ವಾರದಲ್ಲಿ ಚಪ್ಪರ ನಿರ್ವಿುಸಿದ್ದು, ಚಪ್ಪರದ ಮೇಲೆ ಹೂವಿನ ಬಳ್ಳಿಗಳನ್ನು ಹಬ್ಬಿಸಲಾಗಿದೆ. ಇದು ಶಾಲೆಗೆ ಪ್ರವೇಶಿಸುವವರಿಗೆ ಆಹ್ಲಾದಕರ ಅನುಭವ ನೀಡುತ್ತದೆ. ಕಾಂಪೌಂಡ್ ಹೊರಭಾಗದಲ್ಲಿ ಆಕರ್ಷಕ ಗಿಡಗಳನ್ನು ನೆಡಲಾಗಿದೆ.

ಗಿಡ, ಹೂಕುಂಡ ಕೊಡುಗೆ: ಶಾಲೆಯ ಪ್ರತಿಯೊಂದು ಕೊಠಡಿಗೆ ವಿವೇಕಾನಂದ, ಅಂಬೇಡ್ಕರ್, ಅಬ್ದುಲ್ ಕಲಾಂ, ಕಲ್ಪನಾ ಚಾವ್ಲಾ ಮುಂತಾದ ಗಣ್ಯರ ಹೆಸರಿಡಲಾಗಿದೆ. ತರಗತಿ ಒಳಗೋಡೆಗಳ ಮೇಲೆ ಅವರ ಸಂಪೂರ್ಣ ಮಾಹಿತಿ ಬರೆಯಲಾಗಿದೆ. ಶಾಲೆಯಲ್ಲಿ ಕಲಿಯುವ ವಿದ್ಯಾರ್ಥಿಗಳು ತಮ್ಮ ಜನ್ಮದಿನದಂದು ಗಿಡ ಮತ್ತು ಹೂಕುಂಡಗಳನ್ನು ಶಾಲೆಗೆ ನೀಡುವ ಸಂಪ್ರದಾಯ ಬೆಳೆಸಲಾಗಿದೆ. ಶಾಲೆಯ ಅಂಗಳ ಮಕ್ಕಳು ನೀಡಿದ ಗಿಡಗಳಿಂದ ರಾರಾಜಿಸುತ್ತಿದೆ. ೕ ಶಾಲೆಯಲ್ಲಿ ಕಲಿತು ಬೇರೆ ಶಾಲೆಯಲ್ಲಿ ಶಿಕ್ಷಣ ಮುಂದುವರಿಸಲು ಹೋಗುವ ವಿದ್ಯಾರ್ಥಿಗಳನ್ನು ಬೀಳ್ಕೊಡುವಾಗಲೂ ಗಿಡಗಳನ್ನು ನೀಡಲಾಗುತ್ತದೆ.

ಮುಂದಿನ ದಿನಗಳಲ್ಲಿ ಕಲಿಕೆಗೆ ಸಂಬಂಧಿಸಿ ಮತ್ತಷ್ಟು ಸೌಲಭ್ಯ ಕಲ್ಪಿಸುವ ಉದ್ದೇಶವಿದೆ. ಉತ್ತಮ ದರ್ಜೆಯ ಮಕ್ಕಳ ಆಟಿಕೆಗಳು ಮತ್ತು ಒಳಾಂಗಣ ಪ್ರಾರ್ಥನಾ ಅಂಗಳಕ್ಕೆ ಇಂಟರ್​ಲಾಕ್ ಟೈಲ್ಸ್ ಹಾಕಿಸಲು ಉದ್ದೇಶಿಸಲಾಗಿದೆ. ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗೂ ಮಹತ್ವಕೊಟ್ಟು ವಿದ್ಯಾರ್ಥಿಗಳಗೆ ಪರಿಪೂರ್ಣ ಕಲಿಕಾ ವಾತಾವರಣ ನಿರ್ವಿುಸಬೇಕು ಎಂಬುದು ನಮ್ಮ ಉದ್ದೇಶ. | ಡಿ.ರಾಜು, ಮುಖ್ಯಶಿಕ್ಷಕ

Leave a Reply

Your email address will not be published. Required fields are marked *