ಅತ್ತೂರು ಬೈಲಲ್ಲಿ ದೈವದ ಕಾರಣಿಕ

ನಿಶಾಂತ್ ಶೆಟ್ಟಿ ಕಿಲೆಂಜೂರು

ಕರಾವಳಿಯ ತುಳುವ ಜನರು ಆಧುನಿಕ ಕಾಲದಲ್ಲೂ ತಮ್ಮ ದಿನನಿತ್ಯದ ಬದುಕಿನಲ್ಲಿ ತಾವು ನಂಬಿದ ದೈವ ದೇವರುಗಳ ನಂಬಿಕೆ ಬಿಟ್ಟಿಲ್ಲ. ಇದಕ್ಕೆ ಪೂರಕವೆಂಬಂತೆ ಅನೇಕ ಕಡೆ ದೈವದ ಕಾರಣಿಕ ಆಗಿಂದಾಗ್ಗೆ ತೋರಿ ಬರುತ್ತಿರುತ್ತದೆ. ಅಂಥ ಒಂದು ಕ್ಷೇತ್ರದಲ್ಲಿ ಅತ್ತೂರು ಬೈಲು ಮಹಾಗಣಪತಿ ಮಂದಿರವೂ ಒಂದು.

ಅತ್ತೂರು ಬೈಲು ಮಹಾಗಣಪತಿ ದೇವಳ ಮೂಲ್ಕಿ ಒಂಬತ್ತು ಮಾಗಣೆಗೆ ಸಂಬಂಧಿಸಿದ ಮಂದಿರ. ಅತ್ಯಂತ ಕಾರಣಿಕದ ಕ್ಷೇತ್ರವಾದ ಇಲ್ಲಿ ಬೈಲ ಪಂಜುರ್ಲಿ ದೈವ ನೆಲೆ ನಿಂತಿದ್ದು ಕಾರಣಿಕ ತೋರಿಸುತ್ತದೆ. ವರ್ಷಂಪ್ರತಿ ನಡೆಯುವ ನೇಮದಲ್ಲಿ ಮಹಾಗಣಪತಿ ಮಂದಿರದ ಗಡಿ ಪ್ರಧಾನರಾದ ಬೈಲು ಉಡುಪ ಮತ್ತು ಬೊಟ್ಟು ಉಡುಪರನ್ನು ತನ್ನ ಕಾರಣಿಕ ಶಕ್ತಿಯಿಂದ ಪ್ರಜ್ಞೆ ತಪ್ಪುವಂತೆ ಮಾಡುವುದು ಇಲ್ಲಿನ ವಿಶೇಷ.

ಮೂಲ್ಕಿ ಒಂಬತ್ತು ಮಾಗಣೆಯಲ್ಲಿ ಅನೇಕ ಗುತ್ತು ಬರ್ಕೆಗಳಿದ್ದು ಅಲ್ಲಿ ಗಡಿ ಪ್ರಧಾನ ಸಾಮಾನ್ಯ. ಮೂಲ್ಕಿ ಒಂಬತ್ತು ಮಾಗಣೆಯ ಬ್ರಾಹ್ಮಣ ಸಮುದಾಯದಲ್ಲಿ ಎರಡೇ ಗಡಿಗಳಿದ್ದು ಅದು ಬೈಲು ಮತ್ತು ಬೊಟ್ಟು ಉಡುಪ ಗಡಿಗಳು. ಪ್ರಸ್ತುತ ಅತ್ತೂರು ಬೈಲು ಮಹಾಗಣಪತಿ ಮಂದಿರದ ವೆಂಕಟರಾಜ ಉಡುಪರು ಬೈಲು ಉಡುಪ ಗಡಿ ಪ್ರಧಾನರಾಗಿದ್ದರೆ, ಜಯರಾಮ ಉಡುಪರು ಬೊಟ್ಟು ಉಡುಪ ಗಡಿ ಪ್ರಧಾನರಾಗಿದ್ದಾರೆ.

ನೇಮದ ಸಂದರ್ಭ ಅತ್ತೂರು ಬೈಲು ಚಾವಡಿಯಲ್ಲಿ ಬೈಲು ಉಡುಪರು ಮತ್ತು ಬೊಟ್ಟು ಉಡುಪರು ಕುಳಿತುಕೊಂಡಿರುತ್ತಾರೆ, ಚಾವಡಿಯ ಮುಂಭಾಗ ಕೊಡಿಯಡಿ ಇರುತ್ತದೆ, ಸಂಪ್ರದಾಯದಂತೆ ಪಂಜುರ್ಲಿ ದೈವದ ನೇಮ ಪ್ರಾರಂಭವಾಗುತ್ತದೆ, ಮೊದಲ ಹಂತದಲ್ಲಿ ಪಂಜುರ್ಲಿ ದೈವ ಮೊಗ (ಮುಖವಾಡ) ಧರಿಸಿ ನೇಮ ಪ್ರಾರಂಭವಾಗಿ ಮೊಗ ಇಳಿಸುವ ತನಕದ ಪ್ರಥಮ ಹಂತ ಮುಗಿಯುತ್ತದೆ, ಅನಂತರ ದೈವ ಕಲಾವಿದ ತಾಸೆ ವಾದ್ಯ ಬ್ಯಾಂಡ್‌ಗೆ ಕುಣಿಯುತ್ತಾನೆ, ಮುಂದುವರಿಯುತ್ತ ದೈವ ಕಲಾವಿದನಿಗೆ ಆವೇಶ ಹೆಚ್ಚಾಗುತ್ತದೆ, ಈ ಸಂದರ್ಭ ಚಾವಡಿಯಲ್ಲಿ ಬೈಲು ಮತ್ತು ಬೊಟ್ಟು ಉಡುಪರು ಭಕ್ತಿ ಭಾವದಿಂದ ಮಂತ್ರ ಉಚ್ಚರಿಸುತ್ತ ಕುಳಿತಿರುತ್ತಾರೆ, ಪಂಜುರ್ಲಿ ದೈವಕ್ಕೆ ಅವೇಶ ಹೆಚ್ಚಾಗುತ್ತ ಮುಂದುವರಿದು ಉಡುಪರಿಬ್ಬರು ಕುಳಿತ ಚಾವಡಿ ಮುಂಭಾಗದ ತನ್ನ ಕೈಯಲ್ಲಿರುವ ಆಯುಧ(ಕಡ್ಸಲೆ) ಮುಂದೆ ಬೀಸುತ್ತದೆ. ಆಗ ಬೈಲು ಉಡುಪರು ಹಿಮ್ಮುಖವಾಗಿ ಬಿದ್ದು ಪ್ರಜ್ಞೆ ತಪ್ಪುತ್ತಾರೆ, ದೈವ ಕಲಾವಿದ ಇನ್ನೊಂದು ಬಾರಿ ಇದೇ ರೀತಿ ಪುನರಾವರ್ತಿಸುವಾಗ ಬೊಟ್ಟು ಉಡುಪರು ಇದೇ ರೀತಿ ಪ್ರಜ್ಞೆ ತಪ್ಪಿ ಬೀಳುತ್ತಾರೆ, ಸುಮಾರು 5 ನಿಮಿಷ ಪ್ರಜ್ಞೆ ತಪ್ಪಿರುತ್ತಾರೆ. ಅನಂತರ ಮುಕಾಲ್ದಿಯವರ ಕೋರಿಕೆಯಂತೆ ಪಂಜುರ್ಲಿ ದೈವ ಉಡುಪರಿಬ್ಬರನ್ನು ಯಥಾಸ್ಥಿತಿಗೆ ಬರುವಂತೆ ಮಾಡುತ್ತದೆ.

ಹರಕೆಯ ನೇಮದಲ್ಲೂ ಕಾರಣಿಕ
ಪಂಜುರ್ಲಿ ದೈವಕ್ಕೆ ವರ್ಷಾವಧಿ ನೇಮ ಅಲ್ಲದೆ ಹರಕೆಯ ನೇಮಗಳು ನಡೆಯುತ್ತಿದ್ದು ಆ ನೇಮಗಳಲ್ಲೂ ಈ ರೀತಿ ಕಾರಣಿಕ ನಡೆಯುತ್ತದೆ. ಬೊಟ್ಟು ಉಡುಪರ ಮನೆಯಲ್ಲೂ ಪಂಜುರ್ಲಿ ದೈವಕ್ಕೆ ಹರಕೆ ನೇಮ ನಡೆದು ಅಲ್ಲೂ ಈ ಕ್ರಮ ಮುಂದುವರಿಯುತ್ತದೆ.

ಬಪ್ಪನಾಡು ದೇವಳಕ್ಕೂ ಪವಿತ್ರಪಾಣಿ
ಮೂಲ್ಕಿ ಒಂಬತ್ತು ಮಾಗಣೆಗೆ ಸಂಬಂಧಪಟ್ಟ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಅತ್ತೂರು ಬೈಲು ಮನೆತನದವರೇ ಪವಿತ್ರಪಾಣಿಯಾಗಿದ್ದು, ಮೂಲ್ಕಿ ಅರಸು ಮನೆತನದ ರಾಜ ಪುರೋಹಿತರಾಗಿದ್ದಾರೆ. ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೂ ಜಾತ್ರೆ ಮತ್ತು ವಿಶೇಷ ಧಾರ್ಮಿಕ ಕಾರ್ಯಕ್ರಮಗಳಿಗೆ ಈ ಮನೆತನದವರು ದಿನ ನಿಗದಿ ಮಾಡುತ್ತಾರೆ.

ಇದು ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿರುವ ಕ್ರಮ, ನೇಮದ ಸಂದರ್ಭ ಪಂಜುರ್ಲಿ ದೈವ ನಮ್ಮ ದೇಹದಲ್ಲಿ ಆವಾಹನೆಯಾಗಿ ನಾವು ಪ್ರಜ್ಞೆ ತಪ್ಪಿ ಬೀಳುತ್ತೇವೆ. ಐದು ನಿಮಿಷದ ಅನಂತರ ನಮ್ಮನ್ನು ಯಥಾಸ್ಥಿತಿಗೆ ಬರುವಂತೆ ದೈವ ನೋಡಿಕೊಳ್ಳುತ್ತದೆ.
ಅತ್ತೂರು ಬೈಲು ವೆಂಕಟರಾಜ ಉಡುಪ,  ಬೈಲು ಉಡುಪ ಗಡಿ ಪ್ರಧಾನರು

Leave a Reply

Your email address will not be published. Required fields are marked *