ರಸ್ತೆ ವಿಚಾರಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದರು

ಮಂಡ್ಯ: ರಕ್ತ ಹಂಚಿಕೊಂಡು ಹುಟ್ಟ ಅಣ್ಣ ತಮ್ಮಂದಿರ ನಡುವೆ ಜಮೀನಿನ ರಸ್ತೆ ವಿಚಾರಕ್ಕೆ ಜಗಳ ನಡೆದು ದ್ವೇಷದಿಂದ ಮಹಿಳೆಗೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದು, ಮಹಿಳೆ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾರೆ.

ತಾಲೂಕಿನ ಮಾಯಪ್ಪನಹಳ್ಳಿ ಸ್ವಾಮಿ ಎಂಬುವರ ಪತ್ನಿ ಗೀತಾರಿಗೆ ತೀವ್ರ ಸುಟ್ಟು ಗಾಯಗಳಾಗಿದ್ದು, ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪರಿಸ್ಥಿತಿ ಗಂಭೀರವಾಗಿದೆ.

ಏನಿದು ಘಟನೆ: ಮಾಯಪ್ಪನಹಳ್ಳಿಯ ಸಿದ್ದಲಿಂಗು, ಪುಟ್ಟಸ್ವಾಮಿ ಮತ್ತು ಸ್ವಾಮಿ ಅಣ್ಣ ತಮ್ಮಂದಿರು. ಸಿದ್ದಲಿಂಗು, ಸ್ವಾಮಿ ಹಾಗೂ ಪುಟ್ಟಸ್ವಾಮಿ ನಡುವೆ ಜ.22ರಂದು ಜಮೀನಿನ ಬಳಿ ಸಂಜೆ ಗಂಟೆ ಸಂದರ್ಭದಲ್ಲಿ ಗಲಾಟೆಯಾಗಿದೆ. ಗಲಾಟೆಯಲ್ಲಿ ಪುಟ್ಟಸ್ವಾಮಿ ಗಾಯಗೊಂಡಿದ್ದ ಪುಟ್ಟಸ್ವಾಮಿ ಅಣ್ಣ ಹಾಗೂ ತಮ್ಮನ ವಿರುದ್ಧ ದೂರು ನೀಡಿ ಆಸ್ಪತ್ರೆಗೆ ಸೇರಿದ್ದರು.

ಇದರಿಂದ ಆಕ್ರೋಶಗೊಂಡ ಪುಟ್ಟಸ್ವಾಮಿ ಬೆಂಬಲಿಗರು ತನ್ನ ಪತ್ನಿಗೆ ಸೀಮೆಎಣ್ಣೆ ಹಾಗೂ ಪೆಟ್ರೋಲ್ ಮಿಶ್ರಣ ಮಾಡಿ ಎರಚಿ ಬೆಂಕಿ ಹಚ್ಚಿದ್ದಾರೆ ಎಂದು ಪುಟ್ಟಸ್ವಾಮಿ ಪೊಲೀಸರಿಗೆ ದೂರು ನೀಡಿದ್ದಾರೆ.

ಗ್ರಾಮದಲ್ಲಿ ಗುಸುಗುಸು: ಆದರೆ, ಗ್ರಾಮದಲ್ಲಿ ಬೇರೆಯದೇ ರೀತಿಯ ಮಾತುಗಳು ಕೇಳಿಬರುತ್ತಿವೆ. ಅಂದರೆ, ಪುಟ್ಟಸ್ವಾಮಿ ಗಾಯಗೊಂಡು ಆಸ್ಪತ್ರೆಗೆ ಸೇರಿದ್ದರು. ಅವರನ್ನು ಹೇಗಾದರೂ ಮಾಡಿ ಸರಿಯಾದ ಪ್ರಕರಣದಲ್ಲಿ ಸಿಲುಕಿಸಲು ತಾವೇ ತಂತ್ರ ಹೆಣೆದಿದ್ದಾರೆ ಎನ್ನಲಾಗುತ್ತಿದೆ.

ಅಂದರೆ, ಸಿದ್ದಲಿಂಗು ಹಾಗೂ ಸ್ವಾಮಿ, ಸಿದ್ದಲಿಂಗು ಪುತ್ರ ಮಹೇಶ್ ಎಂಬುವರು ಸ್ವಲ್ಪ ಸೀಮೆ ಎಣ್ಣೆಹಾಕಿ ಬೆಂಕಿ ಹಚ್ಚಿ, ತಕ್ಷಣ ಕೆಡಿಸುವುದಾಗಿ ಹೇಳಿದ್ದು, ಆಕೆ ನಿರಾಕರಿಸಿದ್ದಾರೆ. ಆದರೂ ಬಲವಂತವಾಗಿ ಒಪ್ಪಿಸಿ ಸೀಮೆ ಎಣ್ಣೆ ಎಂದೇಳಿ, ಪೆಟ್ರೋಲ್ ಅನ್ನು ಮಿಶ್ರಣ ಮಾಡಿ ಎರಚಿ ಬೆಂಕಿ ಹಚ್ಚಿದ್ದಾರೆ. ಆದರೆ, ಕೆಡಿಸಲು ಸಾಧ್ಯವಾಗಿಲ್ಲ ಎನ್ನಲಾಗುತ್ತಿದೆ.

ಈ ಬಗ್ಗೆ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿರುವ ಗೀತಾ ತನ್ನ (ಜಿಪಂ ಸದಸ್ಯ ಚಂದಗಾಲು ಶಿವಣ್ಣರ ಅಕ್ಕನ ಮಗಳು) ಸಂಬಂಧಿಕರಾದ ಜ್ಯೋತಿ ಶಿವಣ್ಣ ಅವರ ಜತೆ ಹೇಳಿಕೊಂಡಿದ್ದಾರೆ ಎಂಬ ಮಾತುಗಳು ಕೂಡ ಚರ್ಚೆಗೆ ಬಂದಿವೆ.